ವಸತಿ ಶಾಲೆಯಲ್ಲಿ ಅಪ್ರಾಪ್ತೆಯ ಮೇಲೆ ನಾಲ್ವರು ಸಹಪಾಠಿಗಳಿಂದ ಅತ್ಯಾಚಾರ!

ಡೆಹ್ರಾಡೂನ್​: ಹದಿನಾರು ವರ್ಷದ ವಿದ್ಯಾರ್ಥಿನಿ ಮೇಲೆ ಆಕೆಯ ಸಹಪಾಠಿಗಳೇ ಸಾಮೂಹಿಕ ಅತ್ಯಾಚಾರ ಎಸಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಡೆಹ್ರಾಡೂನ್​ ವಸತಿ ಶಾಲೆಯಲ್ಲಿ ಕಳೆದ ತಿಂಗಳು (ಆ. 14) 17 ವರ್ಷದ ನಾಲ್ವರು ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸುವಂತೆ ಎಸ್​ಎಸ್​ಪಿ ನಿವೇದಿತ ಕುರೇಟಿ ಆದೇಶ ಹೊರಡಿಸಿದ ನಂತರ, ತನಿಖೆ ವೇಳೆ ಸತ್ಯ ಬಯಲಾಗಿದೆ.

ಸದ್ಯ ನಾಲ್ವರು ಬಾಲಾಪರಾಧಿಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಶಾಲೆಯ ನಿರ್ದೇಶಕ, ಪ್ರಾಂಶುಪಾಲರು, ಆಡಳಿತಾಧಿಕಾರಿ, ಆತನ ಪತ್ನಿ, ವಸತಿ ಶಾಲೆಯ ಕೇರ್​ ಟೇಕರ್​ರನ್ನು ಸಾಕ್ಷ್ಯ ನಾಶ ಪಡಿಸಿದ ಆರೋಪದ ಮೇಲೆ ಬಂಧಿಸಿದ್ದಾರೆ.

ಐಪಿಸಿ ಸೆಕ್ಷನ್​ ಮತ್ತು ಪೊಕ್ಸೊ ಕಾಯಿದೆಯಡಿ ಸಾಮೂಹಿಕ ಅತ್ಯಾಚಾರ ಮತ್ತು ಸಾಕ್ಷ್ಯ ನಾಶದ ದೂರು ದಾಖಲಿಸಿಕೊಳ್ಳಲಾಗಿದೆ.

ಸಂತ್ರಸ್ತ ಬಾಲಕಿ ಬೇರೆ ರಾಜ್ಯದವಳಾಗಿದ್ದು, ಬಂಧಿತ ಶಾಲಾ ಸಿಬ್ಬಂದಿಗೆಲ್ಲರಿಗೂ ಪ್ರಕರಣದ ಬಗ್ಗೆ ತಿಳಿದಿತ್ತು. ಆದರೂ ವಿಷಯವನ್ನು ಮುಚ್ಚಿಟ್ಟಿದ್ದರು. ಆದರೆ, ಅಪ್ರಾಪ್ತೆಯ ವೈದ್ಯಕೀಯ ಪರೀಕ್ಷೆಯಲ್ಲಿ ಸಾಮೂಹಿಕ ಅತ್ಯಾಚಾರವಾಗಿರುವುದು ಸಾಬೀತಾಗಿದೆ. ಹಾಗಾಗಿ ಬಂಧಿತ ಶಾಲಾ ಸಿಬ್ಬಂದಿ ಹಾಗೂ ನಾಲ್ವರು ಬಾಲಾಪರಾಧಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತದೆ. ಎಂದು ಪೊಲೀಸ್​ ಅಧಿಕಾರಿ ನರೇಶ್​ ರಾಥೋಡ್​ ತಿಳಿಸಿದ್ದಾರೆ. (ಏಜೆನ್ಸೀಸ್​)