ಪಾಂಡವಪುರ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮತ್ತು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರಕಣಗಳಲ್ಲಿ ನಾಲ್ವರಿಗೆ 3 ವರ್ಷ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ.
ತಾಲೂಕಿನ ಕೆರೆತೊಣ್ಣೂರು ಗ್ರಾಮದ ಕೃಷ್ಣ ಮತ್ತು ಶ್ರೀಕಂಠೇಗೌಡ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಶಿಕ್ಷೆಗೆ ಒಳಗಾದ ಅಪರಾಧಿಗಳು. ತಾಲೂಕಿನ ಚಿಕ್ಕಾಡೆ ಗ್ರಾಮದ ಅದಾನಿ ಮತ್ತು ಮಹೇಶ ಎಂಬುವವರು ಕಳ್ಳತನ ಆರೋಪದಡಿ ಶಿಕ್ಷೆಗೆ ಗುರಿಯಾಗಿದ್ದಾರೆ.
ಕೃಷ್ಣ ಮತ್ತು ಶ್ರೀಕಂಠೇಗೌಡ 2015ರ ಡಿ.4ರಂದು ಕೆರೆತೊಣ್ಣೂರು ಗ್ರಾಮದ ಡೇರಿ ಮುಂಭಾಗ ತಮ್ಮ ಬೈಕ್‌ಅನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿಕೊಂಡು ತೊಣ್ಣೂರು ಕೆರೆ ವಿಕ್ಷೀಸಲು ಆಗಮಿಸುತ್ತಿದ್ದ ಪ್ರವಾಸಿಗರನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡುತ್ತಿದ್ದರು. ಸ್ಥಳಕ್ಕೆ ತೆರಳಿದ ಇಬ್ಬರು ಪೊಲೀಸ್ ಪೇದೆಗಳ ಶರ್ಟ್ ಹಿಡಿದು ಎಳೆದಾಡಿ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡವಪುರ ಪೊಲೀಸ್ ಠಾಣೆಯ ಆಗಿನ ಇನ್ಸ್‌ಪೆಕ್ಟರ್ ಬಿ.ಎಸ್.ಪ್ರಕಾಶ್ ಅವರು ದೂರು ದಾಖಲಿಸಕೊಂಡು ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದರು. ತಾಲೂಕಿನ ಹರಳಹಳ್ಳಿಯಲ್ಲಿ 2014ರ ಮಾ.3ರಂದು ಚಿಕ್ಕಾಡೆ ಗ್ರಾಮದ ಅದಾನಿ ಮತ್ತು ಹಿರೇಮರಳಿ ಗ್ರಾಮದ ಮಹೇಶ ಮನೆಯೊಂದರ ಬೀಗ ಒಡೆದು ಚಿನ್ನಾಭರಣ ಕಳ್ಳತನ ಮಾಡಿದ್ದರು.
ಎರಡು ಪ್ರಕರಣಗಳ ವಿಚಾರಣೆ ನಡೆಸಿದ ಪಟ್ಟಣದ ಎಎಂಎಫ್‌ಸಿ ನ್ಯಾಯಾಲಯದ ಅಪರ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಎನ್.ಬಾಬು ಅವರು ಶಿಕ್ಷೆ ವಿಧಿಸಿದ್ದಾರೆ. ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಎನ್.ವೀರಭದ್ರಸ್ವಾಮಿ ಸರ್ಕಾರದ ಪರವಾಗಿ ವಾದಿಸಿದರು.