More

    ಹಳೇ ನೋಟು ದಂಧೆ ನಡೆಸುತ್ತಿದ್ದ ನಾಲ್ವರ ಸೆರೆ

    ಬೆಂಗಳೂರು: ನೋಟು ಅಮಾನ್ಯೀಕರಣಗೊಂಡು ಮೂರು ವರ್ಷ ಕಳೆದರೂ ಹಳೆಯ 500, 1 ಸಾವಿರ ರೂ. ನೋಟು ಬದಲಾವಣೆ ದಂಧೆ ಇನ್ನೂ ನಿಂತಿಲ್ಲ!. 1 ಕೋಟಿ ರೂ. ಮೌಲ್ಯದ ಹಳೆಯ ನೋಟು ಕೊಟ್ಟು ಕ್ಯಾಬ್ ಚಾಲಕನಿಂದ 10 ಲಕ್ಷ ರೂ. ಹೊಸ ನೋಟು ಪಡೆದು ವಂಚಿಸಿದ್ದ ನಾಲ್ವರನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.

    ಕೆ.ಆರ್. ಪುರದ ರಾಜೇಂದ್ರಪ್ರಸಾದ್(49), ವಿಲ್ಸನ್ ಗಾರ್ಡನ್​ನ ಸುರೇಶ್ ಕುಮಾರ್ (40), ನವಾಜ್ ಷಾ (45) ಹಾಗೂ ಮೈಸೂರು ರಸ್ತೆ ಬ್ಯಾಟರಾಯನಪುರದ ಕೆ. ಸತೀಶ್ (40)ಬಂಧಿತರು. ಅಮಾನ್ಯಗೊಂಡ 500 ರೂ. ಮತ್ತು 1 ಸಾವಿರ ರೂ. ಮುಖಬೆಲೆಯ 99 ಲಕ್ಷ ರೂ. ಮೌಲ್ಯವಿದ್ದ ಹಳೇ ನೋಟು ಜಪ್ತಿ ಮಾಡಿರುವುದಾಗಿ ಪೂರ್ವ ವಿಭಾಗ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

    ಕ್ಯಾಬ್ ಚಾಲಕ ನಾಗರಾಜ್, ಕುಟುಂಬದ ಜತೆ ಬಾಗಲೂರು ಕ್ರಾಸ್ ಬಳಿ ವಾಸಿಸುತ್ತಿದ್ದು 2 ತಿಂಗಳ ಹಿಂದೆ ಟ್ರಾವೆಲ್ಸ್ ಕೆಲಸ ನಿಮಿತ್ತ ಮಲ್ಲೇಶ್ವರ 18ನೇ ಕ್ರಾಸ್ ಸಮೀಪದ ಟಾಟಾ ಇನ್​ಸ್ಟಿಟ್ಯೂಟ್​ಗೆ ಭೇಟಿ ನೀಡಿದ್ದರು. ಕೆಲಸ ಮುಗಿಸಿಕೊಂಡು ನಾಗರಾಜು ಹತ್ತಿರದ ಇಂದಿರಾ ಕ್ಯಾಂಟೀನ್​ನಲ್ಲಿ ಊಟ ಮಾಡುತ್ತಿದ್ದಾಗ ರಾಜೇಂದ್ರ ತನ್ನನ್ನು ಪರಿಚಯಿಸಿಕೊಂಡಿದ್ದ. ನಿಮಗೆ ಕಾರು ಬಾಡಿಗೆ ಕೊಡಿಸುತ್ತೇನೆ ಎಂದು ಹೇಳಿದ ಆರೋಪಿ, 3 ಬಾರಿ ನಾಗರಾಜ್​ಗೆ ಬಾಡಿಗೆ ಕೊಡಿಸಿ ವಿಶ್ವಾಸ ಗಳಿಸಿದ್ದ. ನಂತರ ‘ತನಗೆ ಪರಿಚಯವಿರುವ ವ್ಯಕ್ತಿ ಅಮಾನ್ಯಗೊಂಡ 500 ರೂ. ಮತ್ತು 1 ಸಾವಿರ ರೂ. ಹಳೇ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾವಣೆ ಮಾಡುತ್ತಾನೆ. 1 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳನ್ನು 10 ಲಕ್ಷ ರೂ.ಗೆ ಖರೀದಿಸಿದರೆ, ಆತನೇ ಮತ್ತೊಬ್ಬ ಗಿರಾಕಿಗೆ 14 ಲಕ್ಷ ರೂ.ಗೆ ಮಾರಾಟ ಮಾಡಿಸುತ್ತಾನೆ. ನೋಟು ಖರೀದಿಸಿದವರು ರಿಸರ್ವ್ ಬ್ಯಾಂಕ್​ನಲ್ಲಿ ಹೊಸ ನೋಟಿಗೆ ಬದಲಾಯಿಸಿಕೊಳ್ಳುತ್ತಾರೆ. ಈ ವ್ಯವಹಾರದಿಂದ ನಿಮಗೆ 4 ಲಕ್ಷ ರೂ. ಲಾಭ ಬರುತ್ತದೆ. ಅದರಲ್ಲಿ ಇಬ್ಬರು ತಲಾ 2 ಲಕ್ಷ ರೂ. ಇಟ್ಟುಕೊಂಡು ಉಳಿದ ಹಣ ನಿಮಗೆ ಕೊಡುತ್ತೇನೆ’ ಎಂದು ಹೇಳಿದ್ದ ಇದೇ ರೀತಿ ಸಾಕಷ್ಟು ಹಳೆಯ ನೋಟುಗಳಿವೆ. ಇದನ್ನು ಕೊಡುವರು ಸಾಕಷ್ಟು ಜನರೂ ಇದ್ದಾರೆ. ಇದೇ ರೀತಿ ವ್ಯವಹಾರ ನಡೆಸಿದರೆ ಹೆಚ್ಚಿನ ಹಣ ಬರಲಿದೆ ಎಂದು ಆಮಿಷವೊಡ್ಡಿದ್ದ. ವಂಚಕನ ಮಾತು ನಂಬಿದ ನಾಗರಾಜ್, ಕಾಪೋರೇಷನ್ ಬಳಿಯ ಯೂನಿಟಿ ಬಿಲ್ಡಿಂಗ್ ಬಳಿ ರಾಜೇಂದ್ರನನ್ನು ಭೇಟಿ ಮಾಡಿ 10 ಲಕ್ಷ ರೂ. ಕೊಟ್ಟಿದ್ದ. ಆತನ ಜತೆಗೆ ಬಂದಿದ್ದ ಇತರ ಆರೋಪಿಗಳು 1 ಕೋಟಿ ರೂ. ಮೌಲ್ಯದ ನಿಷೇಧಿತ ನೋಟು ಕೊಟ್ಟಿದ್ದರು.

    ಮತ್ತೆ ಬಂದು ಹಳೆಯ ನೋಟು ಬದಲಾವಣೆ ಮಾಡಿಸುತ್ತೇವೆ ಎಂದು ಹೇಳಿ ತೆರಳಿದ್ದರು. ಆದರೆ, ವಾಪಸ್ ಬಂದಿರಲಿಲ್ಲ. ನಾಗರಾಜ್ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಹೆಬ್ಬಾಳ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಣ ಕೊಡುವುದಾಗಿ ರಾಜೇಂದ್ರನ ಗ್ಯಾಂಗ್ ಅನ್ನು ಕರೆಸಿ ಬಂಧಿಸಿದ್ದಾರೆ.

    ಚೈನ್​ಲಿಂಕ್ ದಂಧೆ

    ಅಮಾನ್ಯಗೊಂಡ 500 ರೂ. ಮತ್ತು 1 ಸಾವಿರ ರೂ. ಮುಖಬೆಲೆಯ ನೋಟು ಬದಲಾವಣೆಗೆ ಅವಕಾಶ ಇಲ್ಲ. ಆದರೂ ವಂಚಕರು, ಚೈನ್​ಲಿಂಕ್ ದಂಧೆಯಲ್ಲಿ ತೊಡಗಿದ್ದಾರೆ. ಬಂಧಿತ ಗ್ಯಾಂಗ್ ತಮಿಳುನಾಡಿನ ರವಿ ಎಂಬಾತನ ಬಳಿ ಹಣ ಕೊಟ್ಟು ಹಳೇ ನೋಟು ಪಡೆದಿದ್ದರು. ಇವರು ಕ್ಯಾಬ್ ಚಾಲಕನಿಂದ 10 ಲಕ್ಷ ರೂ. ಪಡೆದು ಹಳೇ ನೋಟು ಕೊಟ್ಟಿದ್ದರು. ಮತ್ತೊಬ್ಬ ವ್ಯಕ್ತಿಯನ್ನು ನಂಬಿಸಿ ಕ್ಯಾಬ್ ಚಾಲಕನ ಕಡೆಯಿಂದ ಕೊಡಿಸುವ ಪ್ಲಾ್ಯನ್ ಮಾಡಿದ್ದರು. ಅಷ್ಟರಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.

    ಮಗನ ಮದುವೆ ಹಣ

    ಹಳೇ ನೋಟು ಬದಲಾವಣೆ ದಂಧೆಯಿಂದ ಹೆಚ್ಚಿನ ಹಣ ಸಂಪಾದಿಸುವ ದುರಾಸೆಯಿಂದ ನಾಗರಾಜ್ ಮತ್ತು ಆತನ ಸೋದರ ಸಂಬಂಧಿ ರಾಜಣ್ಣ, ಆರೋಪಿಗಳಿಗೆ ಹಣ ಕೊಟ್ಟಿದ್ದರು. ತಮ್ಮಲ್ಲಿದ್ದ ಒಡವೆಗಳನ್ನು ಅಡವಿಟ್ಟು ನಾಗರಾಜ್, 5 ಲಕ್ಷ ರೂ. ಹೊಂದಿಸಿದ್ದರು. ರಾಜಣ್ಣ, ಮಗನ ಮದುವೆಗೆ ಇಟ್ಟಿದ್ದ 5 ಲಕ್ಷ ರೂ. ಹೂಡಿಕೆ ಮಾಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts