ಕಾರು ಕಂದಕಕ್ಕೆ ಉರುಳಿ ನಾಲ್ವರು ಮೃತ್ಯು

< ಕಳಸ ಸಮೀಪ ಅಪಘಾತ * ಸಂಬಂಧಿ ಮನೆಗೆ ಯಕ್ಷಗಾನಕ್ಕೆ ತೆರಳುತ್ತಿದ್ದಾಗ ಘಟನೆ>

ಕಳಸ/ಉಪ್ಪಿನಂಗಡಿ/ಬಂಟ್ವಾಳ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಸಮೀಪ ಹಿರೇಬೈಲ್ ಎಂಬಲ್ಲಿ 50 ಮೀಟರ್ ಆಳದ ಕಂದಕಕ್ಕೆ ಕಾರು ಉರುಳಿ ಬಿದ್ದು ದಕ್ಷಿಣ ಕನ್ನಡ ಜಿಲ್ಲೆಯ ನಿವೃತ್ತ ಸೈನಿಕರಾದ ಇಬ್ಬರು ಸಹೋದರರು ಮತ್ತು ಅವರ ಪತ್ನಿಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಉಪ್ಪಿನಂಗಡಿ ಬಾರ್ಯ ಗ್ರಾಮದ ಹೆನ್ನಡ್ಕ ನಿವಾಸಿ ವಿಶ್ವನಾಥ ರೈ (65), ಅವರ ಪತ್ನಿ ಪುಷ್ಪಾವತಿ(58) ಹಾಗೂ ಬಂಟ್ವಾಳ ತಾಲೂಕು ಪನೋಲಿಬೈಲ್ ನಿವಾಸಿ ರಾಜೀವ್ ರೈ(63)- ಮಮತಾ ರೈ(55) ಮೃತರು. ಕಾರು ಚಲಾಯಿಸುತ್ತಿದ್ದ ಯಕ್ಷಗಾನ ಹವ್ಯಾಸಿ ಕಲಾವಿದ, ಸಂಘಟಕ, ಬಿ.ಸಿ.ರೋಡ್ ನಿವಾಸಿ ಸಂಜೀವ ಶೆಟ್ಟಿ ತೀವ್ರ ಗಾಯಗಳೊಂದಿಗೆ ಕಳಸ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಿಶ್ವನಾಥ ರೈ-ರಾಜೀವ್ ರೈಯವರ ಸಹೋದರಿಯ ಪುತ್ರಿಯನ್ನು ಕಳಸ ಸಮೀಪದ ಬಾಳೆಹೊಳೆಯ ಉದ್ಯಮಿ ಹಾಗೂ ಚಿತ್ರ ನಿರ್ಮಾಪಕ ಬಿ.ವಿ.ರವಿ ರೈ ಕಳಸ ಅವರಿಗೆ ವಿವಾಹ ಮಾಡಿಕೊಟ್ಟಿದ್ದು, ಅಲ್ಲಿ ಮಧ್ಯಾಹ್ನ ಧಾರ್ಮಿಕ ಕಾರ್ಯಕ್ರಮ ಮತ್ತು ರಾತ್ರಿ ಧರ್ಮಸ್ಥಳ ಮೇಳದ ಯಕ್ಷಗಾನ ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಂಟ್ವಾಳದಿಂದ ಉಪ್ಪಿನಂಗಡಿ ಮೂಲಕ ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಹೊಸ ವ್ಯಾಗನಾರ್ ಕಾರಿನಲ್ಲಿ ಬರುತ್ತಿದ್ದರು. ಹಿರೇಬೈಲ್ ಮಲ್ಲೇಶನಗುಡ್ಡದ ಒಳರಸ್ತೆಯಲ್ಲಿ ಮಧ್ಯಾಹ್ನ 1.15ರ ಸಮಯಕ್ಕೆ ಬಾಳೆಹೊಳೆಯತ್ತ ಪಯಣಿಸುತ್ತಿದ್ದರು. ಈ ಒಳರಸ್ತೆಯಿಂದ ಸುಮಾರು 10 ಕಿ.ಮೀ ಸಾಗಿದ ಬಳಿಕ ಹಾಲುಮರ ಬಳಿ ಕಾಫಿ ತೋಟದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು 50 ಮೀಟರ್ ಆಳದ ಕಂದಕಕ್ಕೆ ಕಾರು ಉರುಳಿಬಿದ್ದು ಅವಘಡ ಸಂಭವಿಸಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕಾಗಮಿಸಿ ನಜ್ಜುಗುಜ್ಜಾದ ಕಾರಿನಿಂದ ಗಾಯಾಳುವನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲು ನೆರವಾದರು. ಮೃತದೇಹಗಳನ್ನು ಹರಸಾಹಸಪಟ್ಟು ಕಾರಿನಿಂದ ಹೊರತೆಗೆದು ಕಳಸ ಸರ್ಕಾರಿ ಆಸ್ಪತ್ರೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ. ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವಗಳನ್ನು ವಾರಸುದಾರರಿಗೆ ಒಪ್ಪಿಸಲಾಯಿತು.

ರಸ್ತೆಗೆ ತಡೆಗೋಡೆ ನಿರ್ಮಿಸಿ: ಹಿರೇಬೈಲು ರಸ್ತೆಯ ಮುಖಾಂತರ ಬಾಳೆಹೊಳೆ-ಬಾಳೆಹೊನ್ನೂರಿಗೆ ಹೋಗಲು ಇದು ಸಮೀಪದ ರಸ್ತೆ. ಕಳೆದ ಎರಡು ವರ್ಷಗಳ ಹಿಂದೆ ಈ ರಸ್ತೆಗೆ ಡಾಂಬರೀಕರಣ ಮಾಡಿದ ನಂತರ ಹೆಚ್ಚಿನವರು ಇದೇ ರಸ್ತೆ ಅವಲಂಬಿಸಿದ್ದಾರೆ. ಈ ರಸ್ತೆ ಸಾಕಷ್ಟು ತಿರುವುಗಳಿಂದ ಕೂಡಿದ್ದರೂ ಯಾವುದೇ ಸೂಚನಾ ಲಕ ಅಳವಡಿಸಿಲ್ಲ. ಅವಘಡ ನಡೆದ ಸ್ಥಳ ಅತ್ಯಂತ ತಿರುವಿನಿಂದ ಕೂಡಿದೆ. ಹೊಸದಾಗಿ ಬರುವವರಿಗೆ ಇಲ್ಲಿಯ ತಿರುವು ಗಮನಕ್ಕೆ ಬರುವುದಿಲ್ಲ. ಕೂಡಲೆ ಸಂಬಂಧಿಸಿದ ಇಲಾಖೆ ಇಲ್ಲಿ ತಡೆಗೋಡೆ ನಿರ್ಮಿಸಿ ಸೂಚನಾ ಲಕ ಅಳವಡಿಸಬೇಕೆಂದು ಗ್ರಾಮಸ್ಥರಾದ ಕಿರಣ್ ಶೆಟ್ಟಿ, ಅರುಣ್ ಶೆಟ್ಟಿ ಆಗ್ರಹಿಸಿದ್ದಾರೆ.

ಸಂಭ್ರಮದ ಬದಲು ಕಣ್ಣೀರಕೋಡಿ: ಮೈ ನೇಮ್ ಈಸ್ ಅಣ್ಣಪ್ಪ ತುಳು ಸಿನಿಮಾ ಹಾಗೂ ಸ.ಹಿ.ಪ್ರಾ. ಶಾಲೆ ಕಾಸರಗೋಡು ಕನ್ನಡ ಚಿತ್ರಗಳ ನಿರ್ಮಾಪಕರಾಗಿರುವ ರವಿ ರೈ ಕಲಶ ಅವರ ಪ್ರತಿವರ್ಷ ಬಾಳೆಹೊಳೆಯಲ್ಲಿ ತಮ್ಮ ಹರಕೆ ಯಕ್ಷಗಾನ ಬಯಲಾಟ ಆಡಿಸುತ್ತಿದ್ದರು. ಮಾವಂದಿರು ತಮ್ಮ ಹೊಸ ಕಾರಿನಲ್ಲಿ ಆಗಮಿಸುತ್ತಿರುವ ಸಂದರ್ಭದಲ್ಲಿ ಇನ್ನೇನು ಬಾಳೆಹೊಳೆಗೆ 8 ಕಿ.ಮೀ ದೂರವಿರುವಾಗ ಈ ಘೋರ ದುರಂತ ಸಂಭವಿಸಿಬಿಟ್ಟಿತು. ಸಂಭ್ರಮದಲ್ಲಿ ತೇಲಾಡಬೇಕಿದ್ದ ಕುಟುಂಬದಲ್ಲಿ ಕಣ್ಣೀರಿನ ಕೋಡಿಯೇ ಹರಿಯಿತು. ಕಳಸ ಆಸ್ಪತ್ರೆ ಎದುರು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಸಹೋದರರಿಬ್ಬರೂ ನಿವೃತ್ತ ಸೈನಿಕರು: ವಿಶ್ವನಾಥ ರೈ ನಿವೃತ್ತ ಸೈನಿಕರಾಗಿದ್ದು ನಿವೃತ್ತಿ ಬಳಿಕ ಬ್ಯಾಂಕ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿ ಪ್ರಸ್ತುತ ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಪನೋಲಿಬೈಲು ಸಮೀಪದ ಬೊಳ್ಳಾಯಿ ಎಂಬಲ್ಲಿ ವಾಸವಾಗಿದ್ದರು. ರಾಜೀವ್ ರೈ ಕೂಡ ಸೇನಾ ಯೋಧರಾಗಿದ್ದು, ನಿವೃತ್ತಿ ಬಳಿಕ ಶಿಕ್ಷಕ ವೃತ್ತಿಗೆ ಸೇರಿ ಉಪ್ಪಿನಂಗಡಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, 3 ವರ್ಷದ ಹಿಂದೆ ನಿವೃತ್ತರಾಗಿದ್ದರು. ವಿಶ್ವನಾಥ ರೈ ದಂಪತಿ ಇಬ್ಬರು ಪುತ್ರಿಯರು, ರಾಜೀವ ರೈ ದಂಪತಿ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.