ಕಡಬ ತಾಲೂಕಲ್ಲಿ ಒಟ್ಟು ನಾಲ್ಕು ಮಂಗಗಳ ಸಾವು

ಕಡಬ: ರಾಜ್ಯದ ಕೆಲ ಭಾಗಗಳಲ್ಲಿ ಜೀವ ಬಲಿ ತೆಗೆದುಕೊಂಡು ಜನರಲ್ಲಿ ಭೀತಿ ಹುಟ್ಟಿಸಿರುವ ಮಂಗನ ಕಾಯಿಲೆ ಸುದ್ದಿಯಾಗುತ್ತಿರುವ ಬೆನ್ನಲ್ಲೇ ಕಡಬ ತಾಲೂಕಿನ ವ್ಯಾಪ್ತಿಯಲ್ಲಿ ಸತ್ತ ಮಂಗಗಳ ಸಂಖ್ಯೆ 4ಕ್ಕೆ ಏರಿದೆ. ಈಗಾಗಲೇ ಕುಟ್ರುಪ್ಪಾಡಿ ಹಾಗೂ ಹಳೆನೇರೆಂಕಿ ಗ್ರಾಮದಲ್ಲಿ 2 ಮಂಗಗಳ ಶವ ಪತ್ತೆಯಾಗಿದ್ದರೆ, ಈಗ ಕುಟ್ರುಪ್ಪಾಡಿ ಗ್ರಾಮದಲ್ಲಿ ಇನ್ನೂ 2 ಮಂಗಗಳು ಸತ್ತಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆನೇರೆಂಕಿ ಗ್ರಾಮದ ಕದ್ರ ನಿವಾಸಿ ಆದಂ ಅವರಿಗೆ ಸೇರಿದ ತೋಟದಲ್ಲಿ ಜ. 16ರಂದು 1 ಮಂಗನ ಶವ ಪತ್ತೆಯಾಗಿತ್ತು. ಅದಕ್ಕೂ ಮೊದಲು ಕೆಲವು ದಿನಗಳ ಹಿಂದೆ ಕುಟ್ರುಪ್ಪಾಡಿ ಗ್ರಾಮದ ಉಳಿಪ್ಪು ಅರಣ್ಯ ಪ್ರದೇಶದಲ್ಲಿ ಸಂಪೂರ್ಣ ಕೊಳೆತುಹೋಗಿದ್ದ ಮಂಗನ ಶವ ಪತ್ತೆಯಾಗಿತ್ತು. ಆರೋಗ್ಯ ಇಲಾಖಾ ಸಿಬ್ಬಂದಿ ಸ್ಥಳಕ್ಕೆ ಭೆೇಟಿ ನೀಡಿ ಪರಿಶೀಲನೆ ನಡೆಸಿದಾಗ ಶವ ಪೂರ್ತಿ ಕೊಳೆತು ಚರ್ಮದ ಕುರುಹುಗಳು ಮಾತ್ರ ಕಂಡು ಬಂದ ಕಾರಣ ಶವದ ಭಾಗಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಸಾಧ್ಯವಾಗಿರಲಿಲ್ಲ.

ಈ ಮಧ್ಯೆ ವಾರದ ಹಿಂದೆ ಕುಟ್ರುಪ್ಪಾಡಿ ಗ್ರಾಮದ ಕುಂಟೋಡಿ ಜಯಚಂದ್ರ ರೈ ಅವರಿಗೆ ಸೇರಿದ ತೋಟದಲ್ಲಿ ಪತ್ತೆಯಾಗಿದ್ದ ಮಂಗನ ಶವವನ್ನು ಸ್ಥಳೀಯರು ಮಣ್ಣಿನಲ್ಲಿ ಹೂತು ಬಳಿಕ ಕಡಬ ಸರ್ಕಾರಿ ಆಸ್ಪತ್ರೆಗೆ ಮಾಹಿತಿ ನೀಡಿದ್ದರು. ಅದರಂತೆ ಸ್ಥಳಕ್ಕೆ ಭೆೇಟಿ ನೀಡಿದ ಬೆಳ್ತಂಗಡಿಯ ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆಎಫ್‌ಡಿ) ಘಟಕದ ವೈದ್ಯಾಧಿಕಾರಿಗಳು ಪರಿಸರದಲ್ಲಿ ಕಂಡುಬಂದ ಉಣ್ಣಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಕುಟ್ರುಪ್ಪಾಡಿಯ ಉರುಂಬಿ ಶೇಖರ ಗೌಡರ ತೋಟದಲ್ಲಿ ಹಲವು ದಿನಗಳ ಹಿಂದೆ ಮಂಗ ಸತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.