ಮಾಗಡಿ: ತಮ್ಮೂರಿನಿಂದ ಬೆಂಗಳೂರಿಗೆ ವಾಪಾಸಾಗುತ್ತಿದ್ದ ಒಂದೇ ಕುಟುಂಬದ ನಾಲ್ವರು ಅಪಘಾತದಲ್ಲಿ ಮೃತಪಟ್ಟಿರುವ ಧಾರುಣ ಟನೆ ಮಾಗಡಿ ತಾಲೂಕು ಭದ್ರಾಪುರ ಗ್ರಾಮದ ಬಳಿ ಮಂಗಳವಾರ ಸಂಜೆ ನಡೆದಿದೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿವಾನ ಗ್ರಾಮದ ಹಾಲಿ ಬೆಂಗಳೂರಿನ ಬಗಲಗುಂಟೆ ನಿವಾಸಿಗಳಾದ ಭದ್ರಮ್ಮ (85), ಇವರ ಪುತ್ರ ನಂಜುಂಡಪ್ಪ (55), ಸೊಸೆ ಶಾರದಮ್ಮ (50) ಹಾಗೂ ನಂಜುಂಡಪ್ಪ ಸ್ನೇಹಿತ ನಾಗರಾಜು ಮೃತಪಟ್ಟವರು. ನಂಜುಂಡಪ್ಪ ಅವರ ಪುತ್ರಿ ಕುಸುಮಾ ಅವರಿಗೆ ತೀವ್ರ ಗಾಯಗಳಾಗಿದ್ದು, ಇವರನ್ನು ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ನೇಹಿತನ ಅಂತ್ಯ ಸಂಸ್ಕಾರಕ್ಕೆ ಹೋಗಿದ್ದರು:
ಮಾಗಡಿ ತಾಲೂಕಿನ ಚಿಕ್ಕಮುದಗೆರೆ ಗ್ರಾಮದ ಬಳಿ ನಂಜುಡಪ್ಪ ಸ್ನೇಹಿತ ನರಸಿಂಹೇಗೌಡ ಎನ್ನುವರು ಭಾನುವಾರ ಮೃತಪಟ್ಟಿದ್ದರು. ಇವರ ಅಂತ್ಯ ಸಂಸ್ಕಾರ ಸೋಮವಾರ ಕುಣಿಗಲ್ ತಾಲೂಕಿನ ಕಿತ್ನಮಂಗಲ ಗ್ರಾಮದಲ್ಲಿ ನಡೆದಿತ್ತು. ತಮ್ಮ ಕುಟುಂಬ ಸಮೇತರಾಗಿ ನಂಜುಂಡಪ್ಪ ಸ್ನೇಹಿತನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ತಮ್ಮೂರು ಕುಣಿಗಲ್ ತಾಲೂಕಿನ ಯಡಿಯೂರು ಬಳಿಯ ಹುಲಿವಾನ ಗ್ರಾಮಕ್ಕೆ ತೆರಳಿ ಮಂಗಳವಾರ ಮಧ್ಯಾಹ್ನದವರೆಗೂ ಅಲ್ಲಿಯೇ ಇದ್ದರು. ವೃತ್ತಿಯಲ್ಲಿ ಕಟ್ಟಡ ನಿರ್ಮಾಣ ಗುತ್ತಿಗೆದಾರರಾಗಿದ್ದ ನಂಜುಂಡಪ್ಪ ಮಧ್ಯಾಹ್ನ ಬೆಂಗಳೂರಿಗೆ ಹೊರಟಿದ್ದರು.
ಕಾರಣ ಅಸ್ಪಷ್ಟ :
ಇಡೀ ಕುಟುಂಬವನ್ನೇ ಬಲಿ ತೆಗೆದುಕೊಂಡ ಈ ಅಪಘಾತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮಂಗಳೂರು & ಬೆಂಗಳೂರು ಹೆದ್ದಾರಿಯ ಭದ್ರಾಪುರ ಬಳಿಯ ಸಣ್ಣ ತಿರುವಿನಲ್ಲಿ ಕಾರು ಚಾಲನೆ ಮಾಡುತ್ತಿದ್ದ ನಂಜುಂಡಪ್ಪ ಅವರ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯೊಡೆದಿದೆ. ಡಿಕ್ಕಿಯೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿ, ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಿದ್ರೆ ಮಂಪರಿನಲ್ಲಿ ಈ ಟನೆ ನಡೆದಿದೆಯೇ ಅಥವಾ ಅಪಘಾತಕ್ಕೆ ಮತ್ತೆ ಯಾವುದಾದರೂ ಕಾರಣ ಇತ್ತೆ ಎನ್ನುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬರಬೇಕಿದೆ.
ಅಧಿಕಾರಿಗಳ ಪರಿಶೀಲನೆ
ಘಟನಾ ಸ್ಥಳಕ್ಕೆ ಕೇಂದ್ರ ವಲಯ ಐಜಿ ಲಭುರಾಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ರೆಡ್ಡಿ, ಎಎಸ್ಪಿ ಸುರೇಶ್, ಮಾಗಡಿ ಉಪವಿಭಾಗದ ಡಿವೈಎಸ್ಪಿ ಎಂ.ಪ್ರವಿಶ್, ಸಿಪಿಐ ನವೀನ್ ಮುಂತಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
===