ಸರ್ವ ರಸ್ತೆಗಳಿಗೂ ಚತುಷ್ಪಥ ಭಾಗ್ಯ!

ಅನ್ಸಾರ್ ಇನೋಳಿ ಉಳ್ಳಾಲ

ಉಳ್ಳಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹುತೇಕ ಡಾಂಬರಿನ ಒಳರಸ್ತೆಗಳು ಕಾಂಕ್ರೀಟ್ ಭಾಗ್ಯ ಕಂಡಿದ್ದರೆ, ರಸ್ತೆಯೇ ಇಲ್ಲದ ಭಾಗದಲ್ಲಿ ಸುಸಜ್ಜಿತ ರಸ್ತೆಗಳೂ ನಿರ್ಮಾಣವಾಗಿವೆ. ರಾಜ್ಯ ಹೆದ್ದಾರಿಗಳು ನಿರೀಕ್ಷೆಗೂ ಮೀರಿ ವಿಸ್ತರಣೆಗೊಂಡಿವೆ. ಅದರಲ್ಲೂ ದೇರಳಕಟ್ಟೆ, ಮುಡಿಪು, ಉಳ್ಳಾಲ ದರ್ಗಾ ಸಂಪರ್ಕ ರಸ್ತೆ ಚತುಷ್ಪಥಗೊಂಡು ಕ್ಷೇತ್ರದ ಘನತೆ ಹೆಚ್ಚಿಸಿದೆ.

ತೊಕ್ಕೊಟ್ಟು- ಕುತ್ತಾರ್ ರಸ್ತೆ ಬವಣೆಗೆ ಮುಕ್ತಿ: ತೊಕ್ಕೊಟ್ಟಿನಿಂದ ಮುಡಿಪುವರೆಗಿನ ರಸ್ತೆ ಮಧ್ಯೆ ನಾಲ್ಕು ವೈದ್ಯಕೀಯ ಕಾಲೇಜು, ಆಸ್ಪತ್ರೆಗಳು, ಮಂಗಳೂರು ವಿವಿ, ಇನ್ಫೋಸಿಸ್ ಸಂಸ್ಥೆಯಿದ್ದು, ದೇಶ ವಿದೇಶದ ವಿದ್ಯಾರ್ಥಿಗಳು, ನೌಕರರು ಇಲ್ಲಿಗೆ ಪ್ರತಿದಿನ ಆಗಮಿಸುತ್ತಾರೆ. ಹಿಂದೆ ಇಲ್ಲಿನ ಕಿರಿದಾಗಿದ್ದ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿತ್ತು. ಕಂಬಳಪದವಿನಿಂದ ಮುಡಿಪುವರೆಗೆ ಇನ್ಫೋಸಿಸ್ ವತಿಯಿಂದ ಚತುಷ್ಪಥ ರಸ್ತೆ ನಿರ್ಮಾಣವಾಗಿದೆ. ಅದೇ ರೀತಿ ನಾಟೆಕಲ್‌ನಿಂದ ಕುತ್ತಾರ್ ಯೇನೆಪೋಯ ಆಸ್ಪತ್ರೆವರೆಗೂ ಚತುಷ್ಪಥ ರಸ್ತೆ ಕಾಮಗಾರಿ ಮುಗಿದಿದೆ.

ಆದರೂ ತೊಕ್ಕೊಟ್ಟಿನಿಂದ ಕುತ್ತಾರ್‌ವರೆಗಿನ ರಸ್ತೆ ಕಿರಿದಾಗಿದ್ದ ಕಾರಣ ದಿನವಿಡೀ ವಾಹನಗಳು ತೆವಲುತ್ತಲೇ ಸಂಚರಿಸುತ್ತಿವೆ. ಈ ಹಿನ್ನೆಲೆಯಲ್ಲಿ ರಸ್ತೆ ಚತುಷ್ಪಥಕ್ಕೆ 14 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ. ನಾಟೆಕಲ್‌ನಿಂದ ಮುಡಿಪು ಜಂಕ್ಷನ್- ನವೋದಯ ಶಾಲೆ ಮೂಲಕ ಕೇರಳ ಸಂಪರ್ಕಿಸುವ ನಾಟೆಕಲ್- ಮಂಜನಾಡಿ- ಹೂ ಹಾಕುವ ಕಲ್ಲು- ಮುಡಿಪು ರಸ್ತೆ ಅಭಿವೃದ್ಧಿಗೆ 12 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ.

ಉಳ್ಳಾಲಕ್ಕೆ ಡಬಲ್ ಧಮಾಕ
ಈಗಾಗಲೇ ತೊಕ್ಕೊಟ್ಟು ಓವರ್‌ಬ್ರಿಡ್ಜ್‌ನಿಂದ ಅಬ್ಬಕ್ಕ ವೃತ್ತದವರೆಗೆ ಚತುಷ್ಪಥ ರಸ್ತೆ ನಿರ್ಮಾಣವಾಗಿದ್ದರೂ ಒಳಚರಂಡಿ, ಫುಟ್‌ಪಾತ್ ಜತೆಗೆ ರಸ್ತೆ ಇನ್ನಷ್ಟು ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಕೋಟೆಕಾರು ರಾ.ಹೆ.ಯಿಂದ ಸೋಮೇಶ್ವರ ದೇವಸ್ಥಾನ- ಅಬ್ಬಕ್ಕ ವೃತ್ತದ ತನಕ ದ್ವಿಪಥ ರಸ್ತೆ ನಿರ್ಮಾಣಕ್ಕೆ ಏಳು ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿ ಕೆಲಸ ಪ್ರಾರಂಭಿಸಲಾಗಿದೆ. ಅಬ್ಬಕ್ಕ ವೃತ್ತದಿಂದ ತೊಕ್ಕೊಟ್ಟು ರೈಲ್ವೆ ಮೇಲ್ಸೇತುವೆ ತನಕ ರಸ್ತೆ ವಿಸ್ತರಣೆ, ಒಳಚರಂಡಿ ಹಾಗೂ ಸ್ಮಾರ್ಟ್ ರಸ್ತೆಯಾಗಿ ಪರಿವರ್ತಿಸಲು 9 ಕೋಟಿ ರೂ., ಅಬ್ಬಕ್ಕ ವೃತ್ತ- ಉಳ್ಳಾಲ ಕೋಡಿ ರಸ್ತೆಗೆ ಐದು ಕೋಟಿ ರೂ., ಅಂಬ್ಲಮೊಗರಿನ ಬರುವಾದಿಂದ ದೇರಳಕಟ್ಟೆ ಜಂಕ್ಷನ್ ಸಂಪರ್ಕಿಸುವ ರಸ್ತೆಗೆ ಒಂದೂವರೆ ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು ಟೆಂಡರ್ ಪ್ರಕ್ರಿಯೆ ಮುಗಿದಿದೆ.

ರಸ್ತೆ ಅಭಿವೃದ್ಧಿ ಸಂದರ್ಭ ಎಲ್ಲೆಲ್ಲಿ ಫುಟ್‌ಪಾತ್, ಚರಂಡಿ ಬೇಕು ಎಂಬ ಸ್ಥಳೀಯರ ಬೇಡಿಕೆ ಬಗ್ಗೆ ಅಧಿಕಾರಿಗಳಿಗೆ ಗೊತ್ತಾಗಬೇಕು. ಕೆಲವು ಭಾಗದಲ್ಲಿ ರಸ್ತೆಗೆ ಜಾಗ ಬೇಕಾದಲ್ಲಿ ಸ್ಥಳದ ಮಾಲೀಕರಲ್ಲಿ ಕೇಳಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು, ಗುತ್ತಿಗೆದಾರರು ಒಟ್ಟಿಗೆ ಕೆಲಸ ಮಾಡುವ ನೆಲೆಯಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆ.
ಯು.ಟಿ.ಖಾದರ್, ಮಂಗಳೂರು ಕ್ಷೇತ್ರ ಶಾಸಕ

ವೈದ್ಯಕೀಯ ಕಾಲೇಜು, ಆಸ್ಪತ್ರೆಗಳು, ವಿಶ್ವವಿದ್ಯಾಲಯ, ಐಟಿ ಸಂಸ್ಥೆ ಇರುವ ಏಕೈಕ ಕ್ಷೇತ್ರ ಉಳ್ಳಾಲವಾಗಿದ್ದು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೆ ತಾಲೂಕನ್ನಾಗಿಯೂ ಘೋಷಿಸಲಾಗಿದ್ದು, ಮುಂದಿನ ಕೆಲವೇ ಸಮಯಗಳಲ್ಲಿ ಈ ಭಾಗ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಹೊಂದಲಿದೆ.
ದೇವಣ್ಣ ಶೆಟ್ಟಿ ಕೊಣಾಜೆ, ಸಮಾಜ ಸೇವಕ

Leave a Reply

Your email address will not be published. Required fields are marked *