ಅಪಘಾತ ನಾಲ್ವರ ಸಾವು

ಶಿರಸಿ-ಯಲ್ಲಾಪುರ: ಶಿರಸಿ ನಗರ ಮತ್ತು ಯಲ್ಲಾಪುರ ತಾಲೂಕಿನ ಕಿರವತ್ತಿ ಬಳಿ ನಡೆದ ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ.

ಕೆಎಸ್​ಆರ್​ಟಿಸಿ ಬಸ್​ನ ಚಕ್ರಕ್ಕೆ ಸಿಲುಕಿ ಬೈಕ್ ಮೇಲೆ ತೆರಳುತ್ತಿದ್ದ ತಂದೆ ಮತ್ತು ಮಗಳು ಮೃತರಾದ ಘಟನೆ ಬುಧವಾರ ಶಿರಸಿ ನಗರದಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಕೃಷ್ಣಮೂರ್ತಿ ತಡಸ (46), ಅಪೂರ್ವಾ (14)ಮೃತ ದುರ್ದೈವಿಗಳು. ಮಾರಿಕಾಂಬಾ ಹೈಸ್ಕೂಲ್​ನಲ್ಲಿ ಓದುತ್ತಿರುವ ಮಗಳನ್ನು ಬಿಟ್ಟು ಬರಲು ಹೋದ ವೇಳೆ ಈ ಘಟನೆ ಸಂಭವಿಸಿದೆ. ಹುಬ್ಬಳ್ಳಿ ರಸ್ತೆಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಸಮೀಪ ರಸ್ತೆ ಪಕ್ಕ ಉಂಟಾದ ಕೊರಕಲು ಇರುವುದರಿಂದ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದರು. ಅದೇ ಸಮಯಕ್ಕೆ ಎದುರಿನಿಂದ ಬಂದ ಬಸ್ ಇವರ ಮೇಲೆ ಹರಿದ ಪರಿಣಾಮ ವಿದ್ಯಾರ್ಥಿನಿ ಅಪೂರ್ವ ಸ್ಥಳದಲ್ಲೇ ಮೃತಪಟ್ಟಳು. ತೀವ್ರವಾಗಿ ಗಾಯಗೊಂಡ ಕೃಷ್ಣಮೂರ್ತಿಯವರನ್ನು ಹುಬ್ಬಳ್ಳಿ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಲ್ಲಾಪುರ ತಾಲೂಕಿನ ಕಿರವತ್ತಿ ಬಳಿ ಲಾರಿ-ಮಾರುತಿ ಓಮ್ನಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಇಬ್ಬರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಕಿರವತ್ತಿ ಬಳಿ ಬುಧವಾರ ಸಂಭವಿಸಿದೆ.

ಕಿರವತ್ತಿಯಲ್ಲಿ ಓಮ್ನಿನಿಗೆ ಲಾರಿ ಡಿಕ್ಕಿ: ಶಿರಸಿ ತಾಲೂಕಿನ ದೇವನಳ್ಳಿಯ ದೇವಿ ಜಾಯು ಮರಾಠಿ (50) ಹಾಗೂ ಸುಮನಾ ಮಂಜುನಾಥ ಮರಾಠಿ (19) ಮೃತರು. ಒಮಿನಿ ಚಾಲಕ ನಾಗರಾಜ ತಿಮ್ಮಾ ಬಡಗಿ, ಮಂಜುನಾಥ ಜಾಯು ಮರಾಠಿ, ಗೋವಿಂದ ಮರಾಠಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಿರವತ್ತಿಯಿಂದ ಯಲ್ಲಾಪುರ ಕಡೆಗೆ ಓಮ್ನಿಯಲ್ಲಿ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿ ಐವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಇಬ್ಬರು ಮೃತಪಟ್ಟಿದ್ದಾರೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.