ಪುತ್ತೂರು ದೇವಾಲಯ ಕೊಡಿಮರ ಸ್ವರ್ಣಕವಚಕ್ಕೆ 4 ಕೆ.ಜಿ. ಚಿನ್ನ ಬಳಕೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಮಾರ್ಚ್ ತಿಂಗಳಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಕೊಡಿಮರಕ್ಕೆ ಅಳವಡಿಸುವ ತಾಮ್ರದ ಕವಚದ ಮೇಲಿನ ಚಿನ್ನದ ಕವಚ ಹೊದಿಕೆ ಕಾರ್ಯ ಶನಿವಾರ ಆರಂಭಗೊಂಡಿದೆ.

ತಮಿಳುನಾಡಿನ ಕುಂಭಕೋಣಂನಲ್ಲಿ ತಾಮ್ರದ ಕವಚ ಸಿದ್ಧಗೊಂಡಿದ್ದು, ಶುಕ್ರವಾರ ರಾತ್ರಿ ಪುತ್ತೂರು ತಲುಪಿದೆ. ದೇವಾಲಯದ ನಟರಾಜ ವೇದಿಕೆಯ ಬಳಿ ತಾಮ್ರದ ಕವಚಕ್ಕೆ ಸ್ವರ್ಣಕವಚ ಅಳವಡಿಸುವ ಕಾರ್ಯ ಭದ್ರತೆಯಲ್ಲಿ ನಡೆಯುತ್ತಿದೆ. 65 ಅಡಿ ಎತ್ತರದ ಕೊಡಿಮರದ ಕವಚಕ್ಕೆ 4 ಕೆ.ಜಿ. ಚಿನ್ನ ಬಳಸಲಾಗುತ್ತದೆ.

ತಾಂತ್ರಿಕ ವಿವರ: ಪದ್ಮಪೀಠ, ಉಪಪದ್ಮ ಕುಂಭ ಲಕ್ಷಣ ವೃತ್ತ, ದಿಕ್ಪಾಲ ಕವಚ 1, ಮಾಲಸ್ಥಾನ ಕವಚ 1, ನಂದಿ 1, ಹಾಗೂ 24 ಕವಚಗಳ ಜೋಡಣೆಗೆ 24 ರಿಂಗ್ ಬಳಸಲಾಗುತ್ತದೆ. ಸ್ವರ್ಣ ಕವಚ ಅಳವಡಿಸುವ ಜವಾಬ್ದಾರಿಯನ್ನು ಕುಂಭಕೋಣಂನ ಖ್ಯಾತ ಲೋಹ ಶಿಲ್ಪಿ ಎ. ಶೇಖರ ಸ್ತಪತಿ ತಂಡ ನಡೆಸುತ್ತಿದೆ. ಇದೇ ತಂಡ ಕಳೆದ ವರ್ಷ ಕ್ಷೇತ್ರದ ರಾಜಗೋಪುರ ಕಾಮಗಾರಿ ಕೂಡ ನಡೆಸಿದ್ದರು.

ಸ್ವರ್ಣ ಕವಚ ಕಾಮಗಾರಿ ನಿರ್ವಹಣೆಗಾಗಿ ಲೋಹಶಿಲ್ಪಿಗಳ ತಂಡಕ್ಕೆ ಸರ್ವ ವ್ಯವಸ್ಥೆ ಮಾಡಲಾಗಿದೆ. ಸ್ವರ್ಣ ಕವಚ ಮತ್ತು ಚಿನ್ನ ಇರಿಸಲು ಭದ್ರತಾ ಕೊಠಡಿ ಮಾಡಲಾಗುವುದು. ಕೆಲಸದ ಸ್ಥಳದಲ್ಲಿಯೂ ಭದ್ರತಾ ವ್ಯವಸ್ಥೆ ಮತ್ತು ಸಿ.ಸಿ ಕ್ಯಾಮೆರಾ ಅಳವಡಿಸಲಾಗುತ್ತದೆ.
|ಎನ್. ಸುಧಾಕರ ಶೆಟ್ಟಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ