More

    ಚತುರ್ದಿನ ಟೆಸ್ಟ್, ಮಾರ್ಚ್​ನಲ್ಲಿ ಚರ್ಚೆ: ವಿರೋಧದ ನಡುವೆಯೂ ಚಿಂತನೆ ಕೈಬಿಡದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ

    ಇಂದೋರ್: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಸೇರಿದಂತೆ ಹಾಲಿ-ಮಾಜಿ ಕ್ರಿಕೆಟಿಗರಿಂದ ಚತುರ್ದಿನ ಟೆಸ್ಟ್ ಪಂದ್ಯಕ್ಕೆ ವಿರೋಧ ವ್ಯಕ್ತವಾಗುತ್ತಿದ್ದರೂ, ಮುಂದಿನ ಮಾರ್ಚ್ ತಿಂಗಳಲ್ಲಿ ಐಸಿಸಿ ಕ್ರಿಕೆಟ್ ಸಮಿತಿ ಈ ಕುರಿತು ಚರ್ಚೆ ನಡೆಸಲು ಮುಂದಾಗಿದೆ. ಮಾರ್ಚ್ 27ರಿಂದ 31ರವರೆಗೆ ದುಬೈನಲ್ಲಿ ನಡೆಯಲಿರುವ ಐಸಿಸಿ ಸಭೆ ವೇಳೆ ಚತುರ್ದಿನ ಟೆಸ್ಟ್ ಪ್ರಸ್ತಾವನೆ ಚರ್ಚೆಗೆ ಬರಲಿದೆ ಎಂದು ಐಸಿಸಿ ಕ್ರಿಕೆಟ್ ಸಮಿತಿ ಅಧ್ಯಕ್ಷರಾಗಿರುವ ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ತಿಳಿದ್ದಾರೆ.

    ‘ನಾನು ಸಮಿತಿಯ ಭಾಗವಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಪ್ರಸ್ತಾವನೆ ಕುರಿತು ಏನನ್ನೂ ಹೇಳುವುದಕ್ಕೆ ಸಾಧ್ಯವಿಲ್ಲ. ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕವಷ್ಟೇ ಮಾಹಿತಿ ಲಭ್ಯವಾಗಲಿದೆ’ ಎಂದು ಅನಿಲ್ ಕುಂಬ್ಳೆ ತಿಳಿಸಿದ್ದಾರೆ. ಹಾಲಿ ಹಾಗೂ ಮಾಜಿ ಆಟಗಾರರು ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿರುವುದು ಸ್ವಾಗತಾರ್ಹ ಎಂದಿದ್ದಾರೆ. ರಾಹುಲ್ ದ್ರಾವಿಡ್, ಆಂಡ್ರ್ಯೂ ಸ್ಟ್ರಾಸ್, ಮಹೇಲ ಜಯವರ್ಧನೆ, ಶಾನ್ ಪೊಲ್ಲಾಕ್ ಐಸಿಸಿ ಕ್ರಿಕೆಟ್ ಸಮಿತಿಯಲ್ಲಿದ್ದಾರೆ.

    2023ರಿಂದ 2031ರವರೆಗೆ ಎಲ್ಲ ಟೆಸ್ಟ್ ಪಂದ್ಯಗಳನ್ನು 5ರಿಂದ 4ದಿನಗಳಿಗೆ ಇಳಿಸುವ ಪ್ರಸ್ತಾಪ ಐಸಿಸಿ ಮುಂದಿದೆ. ಈ ಪ್ರಸ್ತಾವನೆಗೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳು ಬಹುತೇಕ ಸಮ್ಮತಿ ಸೂಚಿಸಿದ್ದರೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತ್ರ ಈಗಲೇ ಏನನ್ನೂ ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಐಸಿಸಿ ಈಗಾಗಲೆ ಚತುರ್ದಿನ ಟೆಸ್ಟ್​ಗೆ ಸಮ್ಮತಿ ನೀಡಿದ್ದರೂ, ಅದು ಕಡ್ಡಾಯವಲ್ಲ. 2017ರಲ್ಲಿ ದಕ್ಷಿಣ ಆಫ್ರಿಕಾ-ಜಿಂಬಾಬ್ವೆ ಮತ್ತು 2019ರಲ್ಲಿ ಇಂಗ್ಲೆಂಡ್- ಐರ್ಲೆಂಡ್ ನಡುವೆ ಚತುರ್ದಿನ ಟೆಸ್ಟ್ ಪಂದ್ಯ ನಡೆದಿತ್ತು.

    ಏಷ್ಯಾ ತಂಡಗಳ ವಿರುದ್ಧ ಹುನ್ನಾರ!: ಸ್ಪಿನ್ ಬೌಲರ್​ಗಳ ಪ್ರಭಾವ ಕಡಿಮೆಗೊಳಿಸಿ ಏಷ್ಯಾ ತಂಡಗಳ ಮೇಲೆ ಸವಾರಿ ನಡೆಸುವ ದೃಷ್ಟಿಯಿಂದಲೇ ಚತುರ್ದಿನ ಟೆಸ್ಟ್ ಪ್ರಸ್ತಾವನೆ ಇಡಲಾಗಿದೆ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಐಸಿಸಿ ವಿರುದ್ಧ ಕಿಡಿ ಕಾರಿದ್ದಾರೆ. -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts