ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ಬೆಂಗಳೂರು: ಜೀವದ ಹಂಗು ತೊರೆದು ಮತ್ತೊಬ್ಬರ ಜೀವ ಉಳಿಸಿದ 8 ಸಾಧಕ ಮಕ್ಕಳಿಗೆ ಬಾಲಭವನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಡಾ.ಜಯಮಾಲಾ ಅವರು ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದರು. ಸಮಾರಂಭದಲ್ಲಿ 8 ಸಾಧಕ ಮಕ್ಕಳಿಗೆ ಶೌರ್ಯ ಪ್ರಶಸ್ತಿ ಮತ್ತು 4 ಸ್ವಯಂ ಸೇವಾ ಸಂಸ್ಥೆಗಳು ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ನಾಲ್ವರು ಸಾಧಕರಿಗೆ ಮಕ್ಕಳ ಕಲ್ಯಾಣ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.

ಮಕ್ಕಳಿಗೆ ಪ್ರಶಸ್ತಿ: ಮನೆ ಬಳಿ ಆಟವಾಡುತ್ತ ಬಾವಿಯಲ್ಲಿ ಬಿದ್ದಿದ್ದ ಮಗುವನ್ನು ರಕ್ಷಿಸಿದ ಬೆಳಗಾವಿ ಜಿಲ್ಲೆ ವಡಗಾಂವನ ನಿಖಿಲ ದಯಾನಂದ ಜಿತೂರಿ, ಹಳ್ಳದಲ್ಲಿ ತೇಲಿ ಹೋಗುತ್ತಿದ್ದ ಮಕ್ಕಳನ್ನು ಉಳಿಸಿದ ಗೋಕಾಕ ತಾಲೂಕಿನ ವಡೇರಹಟ್ಟಿಯ ಸಹೋದರರಾದ ಶಿವಾನಂದ ಹೊಸಟ್ಟಿ, ಸಿದ್ದಪ್ಪಾ ಹೊಸಟ್ಟಿ, ತೀವ್ರ ಮಳೆಯಿಂದಾಗಿ ಜಲಾವೃತಗೊಂಡಿದ್ದ ಮನೆಯಲ್ಲಿ ಸಿಲುಕಿಕೊಂಡಿದ್ದ ವೃದ್ಧ ದಂಪತಿಯನ್ನು ಪಾರು ಮಾಡಿದ ಜೆ. ಪ್ರಮಿತ್​ರಾಜ್, 2 ವರ್ಷದ ತಮ್ಮನಿಗೆ ಹೋರಿ ಹಾಯಲು ಬಂದಾಗ ರಕ್ಷಿಸಿದ ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಬಾಲಕಿ ಆರತಿ ಶೇಟ್, ಹಾರಂಗಿ ಜಲಾಯಶಯದಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧೆಯನ್ನು ಪಾರು ಮಾಡಿದ ಮೈಸೂರಿನ ಚಾಮರಾಜನಗರ ಮಹಲ್​ನ

ಎಸ್.ಎನ್. ಮೌರ್ಯ, ಕಾಲು ಸಂಕದಿಂದ ಜಾರಿ ಕೊಚ್ಚಿ ಹೋಗುತ್ತಿದ್ದ ಸ್ನೇಹಿತನನ್ನು ಬದುಕುಳಿಸಿದ ದಕ್ಷಿಣಕನ್ನಡ ಜಿಲ್ಲೆಯ ಪಂಡಿಜೆ ಮನೆಯ ಸುಜಯ್ ಸೇರಿ 8 ಮಕ್ಕಳಿಗೆ ತಲಾ 10 ಸಾವಿರ ರೂ. ನಗದು ಬಹುಮಾನ ಒಳಗೊಂಡಿರುವ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಶಿರಸಿಯ ಗುರುವಳ್ಳಿ ಬಲ್ಲೂಗದ್ದೆ ಸಮೀಪದ ಪಟ್ಟಣ ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಸಹಪಾಠಿಗಳನ್ನು ಉಳಿಸಿ ಜೀವಬಿಟ್ಟ ದಿವಂಗತ ಹೇಮಂತ್ ಅವರ ತಂದೆ ಶ್ರೀನಿವಾಸ್ ಆಚಾರ್ಯ ಅವರು ಭಾವುಕರಾಗಿಯೇ ಮಗನ ಶೌರ್ಯ ಪ್ರಶಸ್ತಿ ಸ್ವೀಕರಿಸಿದಾಗ ಅನೇಕ ಸಭಿಕರೂ ಭಾವುಕರಾದರು.

ಮಕ್ಕಳ ಕೈಯಲ್ಲೇ ಜಗತ್ತು: ನಾವು ಮಕ್ಕಳಾಗಿದ್ದಾಗ ಅದು ಕತ್ತಲ ಕಾಲವಾಗಿದ್ದು, 1980ನೇ ಇಸವಿಯವರೆಗೆ ನಾವು ಟಿವಿಗಳನ್ನೂ ಕಂಡಿರಲಿಲ್ಲ. ಆದರೆ ಅಂತರ್ಜಾಲ, ಸ್ಮಾರ್ಟ್​ಫೋನ್ ಮೂಲಕ ಇದೀಗ ಮಕ್ಕಳ ಕೈಯಲ್ಲೇ ಜಗತ್ತು ಇದೆ. ಅದನ್ನು ಬಳಿಸಿಕೊಂಡು ಮಕ್ಕಳು ಜಗತ್ತಿನ ವಿದ್ಯಮಾನಗಳನ್ನು ತಿಳಿದುಕೊಳ್ಳಬೇಕೆಂದು ಸಚಿವೆ ಜಯಮಾಲಾ ಹೇಳಿದರು. ಮಕ್ಕಳು ತಂದೆ-ತಾಯಿಯನ್ನು ಗೌರವಿಸುವುದನ್ನು ರೂಢಿಸಿಕೊಳ್ಳಬೇಕು. ತಾಯಿ ಮತ್ತು ಸಮಾಜದ ಋಣ ತೀರಿಸಲು ಸಾಧ್ಯವಿಲ್ಲ. ಆದರೆ ದೊಡ್ಡವರಾದ ಮೇಲೆ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಲು ಮುಂದಾಗಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ಡಾ. ಅರುಂಧತಿ ಚಂದ್ರಶೇಖರ್ ಉಪಸ್ಥಿತರಿದ್ದರು.

ಜೋರಾಗಿ ಮಳೆ ಬೀಳುತಿತ್ತು. ನಮ್ಮ ಮನೆ ಎದುರಿದ್ದ ಮನೆಯಲ್ಲಿ ಸಿರಿಲ್, ಕ್ರಿಸ್ಸಿ ದಂಪತಿ ಮನೆಗೆ ನೀರು ನುಗ್ಗುತ್ತಿದ್ದದ್ದು ತಿಳಿದು ತಕ್ಷಣ ಧಾವಿಸಿದೆ. ಎದೆಯವರೆಗೆ ನೀರು ನಿಂತಿತ್ತು. ತೆಂಗಿನ ಗರಿಯನ್ನು ಮನೆಯೊಳಗೆ ಬಿಟ್ಟು ಅವರಿಬ್ಬರನ್ನೂ ನೀರಿನಿಂದ ಹೊರಗೆಳೆದು ತಂದೆ. ಅಷ್ಟರಲ್ಲಿ ಸ್ಥಳೀಯರು ಅಲ್ಲಿಗೆ ಧಾವಿಸಿದ್ದರು. 2 ಜೀವ ಉಳಿಸಿದ್ದು, ನನಗೆ ಹೆಮ್ಮೆ ಇದೆ.

| ಜೆ. ಪ್ರಮಿತ್​ರಾಜ್ ಸುರತ್ಕಲ್, ದಕ್ಷಿಣಕನ್ನಡ

ಜೀವದ ಹಂಗು ತೊರೆದು ಸಾಹಸ

ಗೋಕಾಕ್ ತಾಲೂಕು ವಡೆರಹಟ್ಟಿ ಗ್ರಾಮದ ಸಹೋದರರಿಬ್ಬರ ಯಶೋಗಾಥೆ ಎಂಥವರನ್ನೂ ರೋಮಾಂಚನಗೊಳಿಸುತ್ತದೆ. ವಡೆರಹಳ್ಳಿಯ ಇಂದ್ರವೇಣಿ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಮನೋಜ್ ಹಾಗೂ ನವೀನ್ ಇಬ್ಬರನ್ನೂ ಸಹೋದರರಾದ 11 ವರ್ಷದ ಶಿವಾನಂದ ದಶರಥ ಹೊಸಟ್ಟಿ ಹಾಗೂ ಸಿದ್ದಪ್ಪ ಕೆಂಪಣ್ಣ ಹೊಸಟ್ಟಿ ಈಜಿ ಬದುಕುಳಿಸಿದ್ದಾರೆ. ಹಳ್ಳದ ಬಳಿಯಿದ್ದ ದೇವಸ್ಥಾನಕ್ಕೆ ಇಬ್ಬರು ಸ್ನೇಹಿತರು ಆಗಮಿಸಿದ್ದು, ಆ ವೇಳೆ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಮಕ್ಕಳ ಕೂಗನ್ನು ಕೇಳಿಸಿಕೊಂಡು ಈ ಇಬ್ಬರು ಸಹೋದರರು ನೀರಿಗೆ ಧುಮುಕಿದ್ದಾರೆ. ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಇಬ್ಬರೂ ಜೀವದ ಹಂಗು ತೊರೆದು ಇಬ್ಬರ ಜೀವ ಉಳಿಸಿದ್ದು ಗ್ರಾಮಸ್ಥರು ಹೆಮ್ಮೆ ಪಡುವಂತೆ ಮಾಡಿದೆ ಎಂದು ಸ್ಥಳೀಯ ಸಮಾಜ ಸೇವಕ ಭಾಸ್ಕರ್ ತಿಳಿಸಿದರು.

ಸಂಘ ವ್ಯಕ್ತಿಗಳಿಗೆ ಗೌರವ

ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘ, ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಪ್ರಶಸ್ತಿ ನೀಡಲಾಯಿತು. ಬೆಂಗಳೂರಿನ ಕನಕಪುರ ರಸ್ತೆಯ ಸುರಭಿ ಫೌಂಡೇಷನ್ ಟ್ರಸ್ಟ್, ಕೊಡಗಿನ ಸಿದ್ದಾಪುರ ರಸ್ತೆಯ ಚೆಶೈರ್ ಹೋಮ್್ಸ ಇಂಡಿಯಾ, ಬೆಳಗಾವಿ ರೈಲ್ ನಗರದ ನಂದನ ಮಕ್ಕಳಧಾಮ, ಕಲಬುರಗಿಯ ಡಾನ್ ಬಾಸ್ಕೊ ಸೊಸೈಟಿಗಳಿಗೆ ತಲಾ 1 ಲಕ್ಷ ರೂ. ನಗದು ಒಳಗೊಂಡ ಮಕ್ಕಳ ಕಲ್ಯಾಣ ಪ್ರಶಸ್ತಿ ನೀಡಲಾಯಿತು. ಅಲ್ಲದೆ ತುಮಕೂರಿನ ಅನ್ನಪೂರ್ಣ ವೆಂಕಟನಂಜಪ್ಪ, ಉಡುಪಿ ಕುಂಜಿಬೆಟ್ಟಿನ ಜಯಶ್ರೀ ಭಟ್, ಬೆಳಗಾವಿ ಭಾಗ್ಯನಗರದ ಉಮೇಶ್ ಕಲಘಟಗಿ, ಬಳ್ಳಾರಿ ಜಿಲ್ಲೆ ಹೊಸಪೇಟೆಯ ರಾಮಸಾಗರದ ಎಚ್.ಸಿ. ರಾಘವೇಂದ್ರ ಅವರಿಗೆ ತಲಾ 25 ಸಾವಿರ ರೂ. ನಗದು ಒಳಗೊಂಡ ಮಕ್ಕಳ ಕಲ್ಯಾಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹೋರಿಯನ್ನೇ ಎದುರಿಸಿದಳು

ಎರಡು ವರ್ಷದ ತಮ್ಮನಿಗೆ ಹೋರಿಯೊಂದು ಹಾಯಲು ಬಂದಾಗ ಅದರ ಕೋಡುಗಳಿಗೆ ಬೆನ್ನು ಕೊಟ್ಟು ತಮ್ಮನನ್ನು ರಕ್ಷಿಸಿ ಹೊನ್ನಾವರ ತಾಲೂಕು ನವಿಲುಗೋಣ ಗ್ರಾಮದ 9 ವರ್ಷದ ಆರತಿ ಕಿರಣ್ ಶೇಟ್ ಶೌರ್ಯ ಮೆರೆದಿದ್ದಾಳೆ. ತಮ್ಮನನ್ನು ಸೈಕಲ್​ನಲ್ಲಿ ಕೂಡಿಸಿ ಆಟವಾಡಿಸುತ್ತಿದ್ದ ಆರತಿ, ಹೋರಿ ಬಂದು ತಮ್ಮನ ಮೇಲೆ ದಾಳಿಗೆ ಯತ್ನಿಸುತ್ತಿದ್ದಂತೆ ಅವನನ್ನು ಎತ್ತಿಕೊಂಡು ಹೋರಿಯ ಕೊಂಬು ಗಳಿಗೆ ಬೆನ್ನೊಡ್ಡಿ ನಿಂತಿದ್ದಳು. ಅದು ಎರಡ್ಮೂರು ಬಾರಿ ಬೆನ್ನಿಗೆ ತಿವಿದರೂ ತಮ್ಮನನ್ನು ಬಿಡದ ಆರತಿ ನಂತರ ಅವನನ್ನು ಎತ್ತಿಕೊಂಡು ಓಡಿದ್ದಾಳೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎಂಥವರನ್ನೂ ನಿಬ್ಬೆರಗಾಗಿಸುತ್ತದೆ.

ಸಾಹಸ ಮೆರೆದ ಮಗನ ನೆನೆದು ಕಣ್ಣೀರುಗರೆದ ತಾಯಿ-ತಂದೆ

ಸ್ನೇಹಿತರಿಬ್ಬರು ಕೊಚ್ಚಿ ಹೋಗುತ್ತಿರುವುದನ್ನು ಕಂಡು ನಮ್ಮ ಮಗ ಉಳಿಸಲು ಮುಂದಾದ. ಆದರೆ ಸ್ನೇಹಿತರಿಬ್ಬರೂ ಬದುಕುಳಿದರು, ನಮ್ಮವನೇ ಕೊಚ್ಚಿ ಹೋದ. ಪ್ರಶಸ್ತಿಗಳು ಬಂದಿವೆ, ಆದರೆ ಮಗ ಮರಳಿ ಬರ್ತಾನಾ? ಇದು 14 ವರ್ಷದ ಪುತ್ರ ಹೇಮಂತ್​ನನ್ನು ಕಳೆದುಕೊಂಡ ಶ್ರೀನಿವಾಸ್ ಆಚಾರ್ಯ ದಂಪತಿಯ ವ್ಯಥೆ. ಕಳೆದ ವರ್ಷ ಗಾಂಧಿ ಜಯಂತಿಯಂದು ಹೋದವನು ಮರಳಲಿಲ್ಲ. ಮಧ್ಯಾಹ್ನ 2.30ಕ್ಕೆ ಆತ ಕೊಚ್ಚಿ ಹೋಗಿದ್ದರೂ ನಮಗೆ ತಿಳಿದಾಗ ಸಂಜೆ 7.30 ಆಗಿತ್ತು. ಅವನಿಂದ ಬದುಕುಳಿದ ಸ್ನೇಹಿತರೂ ನಮಗೆ ಬಂದು ತಿಳಿಸಿರಲಿಲ್ಲ ಎಂದು ಶ್ರೀನಿವಾಸ್ ಕಣ್ಣೀರು ಹಾಕಿದರು. ಪ್ರಶಸ್ತಿಗಳು ಆತನ ಶೌರ್ಯಕ್ಕೆ ಸಂದ ಗೌರವ. ಆದರೆ ಆತ ಬದುಕುಳಿದು ಸ್ವೀಕರಿಸಿದ್ದರೆ ಖುಷಿ ಪಡುತ್ತಿದ್ದೆವು. ಮಗನ ಸಾಧನೆ ಬಗ್ಗೆ ಹೆಮ್ಮೆ ಇದೆ ಎಂದರು.