ಭೋಪಾಲ್: ಅರ್ಧಕ್ಕೆ ಕಾಮಗಾರಿ ನಿಲ್ಲಿಸಿದ ಕಟ್ಟಡದ ಗೋಡೆಯೊಂದು ಕುಸಿದು ನಾಲ್ವರು ಮಕ್ಕಳು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ಗಢ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಕ್ಕಳು ಶಾಲೆ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಮೃತರನ್ನು ಅಂಕಿತಾ ಗುಪ್ತಾ (5), ಮಾನ್ಯ ಗುಪ್ತಾ (7), ಸಿದ್ಧಾರ್ಥ್ ಗುಪ್ತಾ (5), ಮತ್ತು ಅನುಜ್ ಪ್ರಜಾಪತಿ (5) ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ್ರೆಷ್ಟು, ಬಿಟ್ಟರೆಷ್ಟು ನಮಗೆ…ಸೊಕ್ಕಿನ ಹೇಳಿಕೆ ಕೊಟ್ಟ ಪಾಕ್ ಮಾಜಿ ಆಟಗಾರ
ಘಟನೆ ಕುರಿತು ಪ್ರತಿಕ್ರಿಯಿಸಿರುವ ಐಜಿಪಿ ಮಹೇಂದ್ರ ಸಿಂಗ್ ಸಿಕರ್ವಾರ್, ಸನ್ರೈಸ್ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳು ಎಂದಿನಂತೆ ಸ್ಕೂಲ್ ಮುಗಿದ ನಂತರ ಮನೆಗೆ ಹಿಂತಿರುಗುವಾಗ ಅರ್ಧಕ್ಕೆ ಕಾಮಗಾರಿ ನಿಲ್ಲಿಸಿದ ಕಟ್ಟಡದ ಗೋಡೆಯೊಂದು ಅವರ ಮೇಲೆ ಕುಸಿದು ಬಿದ್ದಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅವಶೇಷಗಳ ಅಡಿಯಿಂದ ಮಕ್ಕಳನ್ನು ಹೊರತೆಗೆದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತನಿಖೆಗೆ ಆದೇಶಿಸಲಾಗಿದ್ದುಮ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಐಜಿಪಿ ಮಹೇಂದ್ರ ಸಿಂಗ್ ಸಿಕರ್ವಾರ್ ತಿಳಿಸಿದ್ದಾರೆ.