More

    ವಿದೇಶದಿಂದ ಡ್ರಗ್ಸ್ ಪೋಸ್ಟ್!: ಲಕೋಟೆ ಎಗರಿಸಿ ಮಾರುತ್ತಿದ್ದ ನಾಲ್ವರು ಅಂಚೆ ನೌಕರರು ಸೆರೆ

    ಬೆಂಗಳೂರು: ಅಂಚೆ ಮುಖಾಂತರ ವಿದೇಶಗಳಿಂದ ರಾಜ್ಯಕ್ಕೆ ಡ್ರಗ್ಸ್ ಆಮದಾಗುತ್ತಿರುವ ಸ್ಪೋಟಕ ವಿಚಾರ ಸಿಸಿಬಿ ತನಿಖೆಯಿಂದ ಬಯಲಾಗಿದೆ. ಮಾದಕ ವಸ್ತುವಿದ್ದ ಅಂಚೆ ಲಕೋಟೆಯನ್ನು ಎತ್ತಿಟ್ಟುಕೊಂಡು, ತಾವೇ ಮಾರಾಟ ಮಾಡುವ ಮೂಲಕ ಡ್ರಗ್ಸ್ ದಂಧೆಕೋರರಿಗೇ ನಾಮ ಹಾಕುತ್ತಿದ್ದ ಭಾರತೀಯ ಅಂಚೆ ಇಲಾಖೆಯ ನಾಲ್ವರು ನೌಕರರು ಇದೀಗ ಜೈಲು ಪಾಲಾಗಿದ್ದಾರೆ.

    ಭಾರತೀಯ ಅಂಚೆ ಇಲಾಖೆ (ಕರ್ನಾಟಕ ವೃತ್ತ) ಚಾಮರಾಜಪೇಟೆ ಶಾಖೆಯ ಫಾರಿನರ್ಸ್ ಪೋಸ್ಟ್ ವಿಭಾಗದ ಪೋಸ್ಟಲ್ ಅಸಿಸ್ಟೆಂಟ್ ದೇವರ ಚಿಕ್ಕನಹಳ್ಳಿ ನಿವಾಸಿ ರಮೇಶ್​ಕುಮಾರ್ (47), ಕಚೇರಿಯ ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ ಶ್ರೀರಾಂಪುರದ ಎಚ್.ಸುಬ್ಬ (34), ಆರ್.ಟಿ. ನಗರದ ಸೈಯ್ಯದ್ ಮಜೀದ್ (54) ಮತ್ತು ನಾಗವಾರದ ವಿಜಯರಾಜನ್ (58) ಬಂಧಿತರು. ಆರೋಪಿಗಳಿಂದ 20 ಲಕ್ಷ ರೂ. ಮೌಲ್ಯದ ಮೂರು ಬಗೆಯ ಮಾದಕ ವಸ್ತು ಜಪ್ತಿ ಮಾಡಲಾಗಿದೆ. ಬಂಧಿತರು ಬೆಂಗಳೂರು ಜಿಪಿಒ ಕಚೇರಿ ಮತ್ತು ಚಾಮರಾಜಪೇಟೆಯಲ್ಲಿರುವ ಅಂಚೆ ಕಚೇರಿಯಲ್ಲಿ ವಿದೇಶಗಳಿಂದ ಬರುವ ಪೋಸ್ಟ್​ಗಳು ಹಾಗೂ ಪಾರ್ಸೆಲ್​ಗಳನ್ನು ಪರಿಶೀಲಿಸುವ ಹುದ್ದೆ ನಿರ್ವಹಿಸುತ್ತಿದ್ದರು. ವಿಶೇಷವಾಗಿ ನೆದರ್ಲೆಂಡ್, ಡೆನ್ಮಾರ್ಕ್ ಹಾಗೂ ಅಮೆರಿಕಗಳಿಂದ ಬರುವ ಸಾಮಾನ್ಯ ಅಂಚೆ ಲಕೋಟೆ ಹಾಗೂ ಪಾರ್ಸೆಲ್​ಗಳನ್ನು ಪರಿಶೀಲಿಸುತ್ತಿ ದ್ದರು. ಡ್ರಗ್ಸ್ ಇರುವ ಲಕೋಟೆಗಳು ಸಿಕ್ಕರೆ ಎತ್ತಿಟ್ಟುಕೊಂಡು ಸಾರ್ವ ಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು.

    50 ಸಾವಿರ ರೂ. ಬಹುಮಾನ ವಿತರಣೆ

    ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಜಾಲವನ್ನು ಭೇದಿಸಿದ ಸಿಸಿಬಿ ಪೊಲೀಸರ ತಂಡಕ್ಕೆ ನಗರ ಪೊಲೀಸ್ ಆಯಕ್ತ ಭಾಸ್ಕರ್ ರಾವ್ 50 ಸಾವಿರ ರೂ. ಬಹುಮಾನ ವಿತರಿಸಿದ್ದಾರೆ. ಅಂಚೆ ನೌಕರರ ಜತೆ ಇನ್ನೂ ಎಷ್ಟು ಜನ ಶಾಮೀಲಾಗಿದ್ದಾರೆ, ಎಷ್ಟು ವರ್ಷಗಳಿಂದ ಆರೋಪಿಗಳು ಕೃತ್ಯದಲ್ಲಿ ತೊಡಗಿದ್ದರು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

    ದಂಧೆ ಹೇಗೆ?

    ಟಾರ್ ಬ್ರೌಸರ್ ಮೂಲಕ ಡಾರ್ಕ್​ನೆಟ್ ವೆಬ್​ಸೈಟ್​ನಲ್ಲಿ ಹುಡುಕಾಡಿ ನೆದಲೆಂಡ್, ಡೆನ್ಮಾರ್ಕ್ ಹಾಗೂ ಅಮೆರಿಕ ದೇಶಗಳಿಂದ ಪೋಸ್ಟ್ ಮೂಲಕ ಬೆಂಗಳೂರಿಗೆ ಬಹಳಷ್ಟು ಜನ ಮಾದಕವಸ್ತುಗಳನ್ನು ತರಿಸಿಕೊಳ್ಳುತ್ತಾರೆ. ವಿದೇಶಿ ಮಾದಕವಸ್ತು ಮಾರಾಟಗಾರರ ಜತೆ ಬಿಟ್ ಕಾಯಿನ್ ಮೂಲಕ ಹಣಕಾಸಿನ ವ್ಯವಹಾರ ನಡೆಸುವ ಹಿನ್ನೆಲೆಯಲ್ಲಿ ಎಲ್ಲೂ ದಂಧೆಕೋರರ ಸುಳಿವು ಸಿಗುವುದಿಲ್ಲ. ಅಲ್ಲದೇ ತಮ್ಮ ನೈಜ ವಿಳಾಸ ನೀಡದೆ ನಕಲಿ ವಿಳಾಸ ನೀಡುತ್ತಾರೆ. ಒಂದು ವೇಳೆ ತಾವು ನಮೂದಿಸಿದ ಸುಳ್ಳು ವಿಳಾಸಕ್ಕೆ ಮಾದಕ ವಸ್ತುಗಳಿರುವ ಪೋಸ್ಟ್​ಗಳು ಬರದಿದ್ದರೂ ಅಂಚೆ ಕಚೇರಿಗೆ ಹೋಗಿ ಕೇಳುವ ಅಥವಾ ದೂರು ಕೊಡುವ ಧೈರ್ಯ ಮಾಡುವುದಿಲ್ಲ. ಇದನ್ನು ಅರಿತಿದ್ದ ಬಂಧಿತ ಅಂಚೆ ನೌಕರರು ವಿದೇಶದಿಂದ ಮಾದಕವಸ್ತುಗಳು ಬರುತ್ತಿದ್ದ ಪೋಸ್ಟ್​ಗಳನ್ನು ಕೂಡಲೇ ಪತ್ತೆ ಹಚ್ಚಿ ತೆಗೆದಿಟ್ಟುಕೊಳ್ಳುತ್ತಿದ್ದರು. ಈ ವಿಚಾರವನ್ನು ಸಕ್ಷಮ ಪ್ರಾಧಿಕಾರಕ್ಕೆ ಮಾಹಿತಿ ನೀಡದೇ ಪೆಡ್ಲರ್​ಗಳಿಗೆ ಮಾರಾಟ ಮಾಡುತ್ತಿದ್ದರು. ಅಲ್ಲದೆ, ಬಿಟ್ ಕಾಯಿನ್ ಮೂಲಕ ವಿದೇಶದಿಂದ ಮಾದಕ ವಸ್ತು ಆಮದು ಮಾಡಿಕೊಳ್ಳುವವರಿಗೂ ಸಹಕರಿಸುತ್ತಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

    ಹಣದ ಆಸೆಗಾಗಿ ಕೃತ್ಯ

    ರಾಜಭವನದ ರಸ್ತೆಯಲ್ಲಿರುವ ಜಿಪಿಒ ಕಚೇರಿಯಿಂದ ಕೆಲ ತಿಂಗಳ ಹಿಂದೆ ಆರೋಪಿಗಳು ಚಾಮರಾಜಪೇಟೆ ಅಂಚೆ ಕಚೇರಿಗೆ ವರ್ಗಾವಣೆಗೊಂಡಿದ್ದರು. ಆರೋಪಿ ರಮೇಶ್ ಅಣತಿಯಂತೆ ಇತರ ಆರೋಪಿಗಳು ಮಾದಕ ವಸ್ತು ಮಾರಾಟದಲ್ಲಿ ತೊಡಗುತ್ತಿದ್ದರು. ಹಣದ ಆಸೆಗಾಗಿ ಈ ಕೃತ್ಯ ನಡೆಸುತ್ತಿದ್ದೆವು. ರಮೇಶ್ ಹೇಳಿದಂತೆ ನಾವು ಕೆಲಸ ಮಾಡುತ್ತಿದ್ದೇವೆ. ಬಂದ ಹಣದಲ್ಲಿ ನಾಲ್ವರು ಸಮಾನವಾಗಿ ಹಣ ಹಂಚಿಕೊಳ್ಳುತ್ತಿದ್ದುದಾಗಿ ವಿಚಾರಣೆಯಲ್ಲಿ ಆರೋಪಿಗಳು ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಸಿಕ್ಕಿಬಿದ್ದಿದ್ದು ಹೀಗೆ…

    ವಿದೇಶಗಳಿಂದ ಕೊರಿಯರ್ ಮೂಲಕ ಸ್ಟಾ್ಯಂಪ್​ಗಳಲ್ಲಿ ಎಲ್​ಎಸ್​ಡಿ ಮಾದಕ ವಸ್ತು ಹಾಗೂ ಹೈಡ್ರೋ ಗಾಂಜಾ ಬೀಜಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಬಿಹಾರ ಮೂಲದ ಅಮಾತ್ಯ ರಿಷಿ (23), ಮಂಗಲ್ ಮುಕ್ಯ (30) ಹಾಗೂ ಬನಶಂಕರಿಯ ನಿವಾಸಿ ಆದಿತ್ಯ ಕುಮಾರ್ (21) ಎಂಬುವವರನ್ನು ಸಿಸಿಬಿ ಪೊಲೀಸರು ಇತೀಚೆಗೆ ಬಂಧಿಸಿದ್ದರು. ಅವರ

    ವಿಚಾರಣೆ ನಡೆಸಿದಾಗ ವಿದೇಶದಿಂದ

    ಡ್ರಗ್ಸ್ ತರಿಸಲು ಅಂಚೆ ಸಿಬ್ಬಂದಿ ಸಹಕರಿಸುತ್ತಿದ್ದ ವಿಚಾರವನ್ನು ತಿಳಿಸಿದ್ದರು. ಇವರು ನೀಡಿದ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಚಾಮರಾಜಪೇಟೆಯಲ್ಲಿರುವ ಅಂಚೆ ಕಚೇರಿ ಮೇಲೆ ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts