ಚಿತ್ರದುರ್ಗ: ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡ ವಿವಿಧ ಪ್ರತಿಷ್ಠಾನಗಳ ಅನುದಾನವನ್ನು 4 ಲಕ್ಷ ರೂ.ಗೆ ಮಿತಿಗೊಳಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿದ್ವಾಂಸರು ಹಾಗೂ ಸಾಹಿತಿಗಳಿಗೆ ನೀಡುತ್ತಿದ್ದ ನಗದು ಪ್ರಶಸ್ತಿ ಮೊತ್ತಕ್ಕೂ ಕತ್ತರಿ ಹಾಕಿದೆ. ಈ ಹಿಂದೆ ಪ್ರತಿ ಪ್ರತಿಷ್ಠಾನಕ್ಕೆ ವಾರ್ಷಿಕ 10-15 ಲಕ್ಷ ರೂ. ಅನುದಾನದ ಜತೆಗೆ ಪ್ರತಿಷ್ಠಾನಕ್ಕೆ ಬಂದ ದತ್ತಿ ಮೊತ್ತವನ್ನೂ ಪ್ರಶಸ್ತಿಗೆ ಬಳಸಿಕೊಳ್ಳಲಾಗುತ್ತಿತ್ತು. ದ.ರಾ.ಬೇಂದ್ರೆ ಪ್ರತಿಷ್ಠಾನ ಕೊಡಮಾಡುವ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಮೊತ್ತವನ್ನು ಇಲಾಖೆ ಈ ಬಾರಿ 1 ಲಕ್ಷ ರೂ.ನಿಂದ 10 ಸಾವಿರ ರೂ.ಗೆ ಇಳಿಸಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ಇತರ ಪ್ರತಿಷ್ಠಾನಗಳಿಗೂ ಪ್ರಶಸ್ತಿ ಮೊತ್ತ 10 ಸಾವಿರ ರೂ.ಗೆ ಇಳಿಸುವಂತೆ ಸೂಚನೆ ನೀಡಿದೆ. ಮಾತ್ರವಲ್ಲ, ಪುತಿನ ಪ್ರತಿಷ್ಠಾನ 25 ಸಾವಿರ ರೂ. ಮತ್ತು ಕುವೆಂಪು ಪ್ರತಿಷ್ಠಾನ 75 ಸಾವಿರ ರೂ. ಮೊತ್ತದ ಪ್ರಶಸ್ತಿ ನೀಡಿದ್ದಕ್ಕೆ ವಿವರಣೆಯನ್ನೂ ಕೇಳಲಾಗಿದೆ.
ಮುಜುಗರದ ಸನ್ನಿವೇಶ: ಪ್ರತಿಷ್ಠಾನಗಳು ಈ ಮೊದಲು ಕನಿಷ್ಠ 25 ಸಾವಿರ ರೂ. ನಗದು ಪ್ರಶಸ್ತಿ ನೀಡುತ್ತಿದ್ದವು. ಹೆಸರಾಂತ ಪ್ರತಿಷ್ಠಾನಗಳಿಗೆ ದತ್ತಿ ಹಣವೂ ಬರುತ್ತಿದ್ದರಿಂದ ಕೆಲವು ಪ್ರಶಸ್ತಿಗಳ ಮೊತ್ತ ಲಕ್ಷ ರೂ. ದಾಟಿತ್ತು. ಆದರೀಗ 10 ಸಾವಿರ ರೂ. ಮಾತ್ರ ಕೊಡಬೇಕೆಂಬ ಅಲಿಖಿತ ಆದೇಶ ಅರಗಿಸಿಕೊಳ್ಳಲು ಆಗುತ್ತಿಲ್ಲ. ಚಿದಾನಂದಮೂರ್ತಿ, ನಾ. ಡಿಸೋಜಾರಂಥ ಮೇಧಾವಿಗಳನ್ನು ಕರೆಸಿ ಕೇವಲ 10 ಸಾವಿರ ರೂ. ಪ್ರಶಸ್ತಿ ಕೊಡುವುದು ಮುಜುಗರ ಎಂಬ ಕಾರಣಕ್ಕೆ ಅವು ಪ್ರತಿಷ್ಠಾನಗಳು ಅಲವತ್ತುಕೊಂಡಿವೆ.
ಸಭೆಯ ಕುತೂಹಲ
ಪ್ರತಿಷ್ಠಾನಗಳ ಪ್ರಶಸ್ತಿ ಮೊತ್ತ ಕಡಿತಗೊಂಡ ಬೆನ್ನಲ್ಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ಬುಧವಾರ ಚಿತ್ರದುರ್ಗದಲ್ಲಿ ಮಹತ್ವದ ಸಭೆ ನಡೆಯಲಿದೆ. 23 ಪ್ರತಿಷ್ಠಾನಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು, ಕನ್ನಡ, ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರು ಭಾಗವಹಿಸಲಿದ್ದಾರೆ.
ಸಾಹಿತ್ಯ ಸೇವೆಯಲ್ಲಿ ಪ್ರತಿಷ್ಠಾನಗಳು…
ರಾಜ್ಯದಲ್ಲಿ 23 ಪ್ರತಿಷ್ಠಾನಗಳಿದ್ದು, ಸರ್ಕಾರೇತರ ಸಂಸ್ಥೆಗಳಾಗಿ ಸಾಹಿತ್ಯ ಸೇವೆಯಲ್ಲಿ ತೊಡಗಿವೆ. ರಾಷ್ಟ್ರಕವಿ ಕುವೆಂಪು, ದ.ರಾ. ಬೇಂದ್ರೆ, ಆಲೂರು ವೆಂಕಟರಾಯ, ಗಳಗನಾಥ, ಡಿವಿಜಿ ಸೇರಿ ಹಲವು ಮಹನೀಯರ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರತಿ ಪ್ರತಿಷ್ಠಾನ ತಮ್ಮ ಕವಿ, ಸಾಹಿತಿಯ ಬಗ್ಗೆ ಅಧ್ಯಯನ, ಸಾಹಿತ್ಯ ಪ್ರಚಾರ, ಪುಸ್ತಕ ಬಿಡುಗಡೆ, ಪ್ರಶಸ್ತಿ ವಿತರಣೆ ಕಾರ್ಯಕ್ರಮ ಆಯೋಜಿಸುತ್ತವೆ. ಜತೆಗೆ ಸಾಹಿತಿಗಳ ಬಗ್ಗೆ ಹೆಚ್ಚೆಚ್ಚು ಅಧ್ಯಯನ ಮಾಡುತ್ತಿರುವ ಸಾಹಿತಿಗಳು, ಹಿರಿಯರಿಗೆ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸುವ ಸಂಪ್ರದಾಯ ಹೊಂದಿವೆ.
ರಾಜ್ಯದ ಪ್ರತಿಷ್ಠಿತ ಪ್ರತಿಷ್ಠಾನಗಳು
ಧಾರವಾಡದ ಮಲ್ಲಿಕಾರ್ಜುನ ಮನ್ಸೂರು ಟ್ರಸ್ಟ್, ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಡಾ. ಬಸವರಾಜ ರಾಜಗುರು ಟ್ರಸ್ಟ್, ಆಲೂರು ವೆಂಕಟರಾವ್ ಟ್ರಸ್ಟ್, ಹಾವೇರಿಯ ಡಾ. ವಿ.ಕೃ. ಗೋಕಾಕ್ ಪ್ರತಿಷ್ಠಾನ, ಮೈಲಾರ ಮಹದೇವ ಟ್ರಸ್ಟ್, ಗಳಗನಾಥ ಪ್ರತಿಷ್ಠಾನ, ಕೋಲಾರದ ಡಾ. ಡಿವಿಜಿ ಪ್ರತಿಷ್ಠಾನ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಟ್ರಸ್ಟ್, ಮುಧೋಳದ ರನ್ನ ಪ್ರತಿಷ್ಠಾನ, ವಿಜಯಪುರದ ಅಲಸಂಗಿ ಗೆಳೆಯರ ಟ್ರಸ್ಟ್, ಬಾಗಲಕೋಟೆ ಧುತ್ತರಿಗೆ ಪ್ರತಿಷ್ಠಾನ, ಶಿವಮೊಗ್ಗದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಬೆಂಗಳೂರಿನ ಡಾ. ಪುತಿನ ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರ, ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನ, ಚಿತ್ರದುರ್ಗ ನಿಜಲಿಂಗಪ್ಪ ಟ್ರಸ್ಟ್, ಬೆಳಗಾವಿಯ ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್, ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಉಡುಪಿಯ ಡಾ. ಶಿವರಾಮ ಕಾರಂತ ಟ್ರಸ್ಟ್, ದಕ್ಷಿಣ ಕನ್ನಡದ ಡಾ. ಶಿವರಾಮ ಕಾರಂತ ಟ್ರಸ್ಟ್, ತುಮಕೂರಿನ ಡಾ. ಗುಬ್ಬಿ ವೀರಣ್ಣ ಟ್ರಸ್ಟ್, ಮಂಡ್ಯದ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಹಾಗೂ ಚಿಕ್ಕಮಗಳೂರಿನ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಗಳು ಸಾಕಷ್ಟು ಪ್ರಸಿದ್ದಿ ಹೊಂದಿವೆ.
| ಯಶವಂತ್ಕುಮಾರ್ ಎ