* ಶಾಸಕ ಎಚ್.ಎ. ಇಕ್ಬಾಲ್ಹುಸೇನ್ ಹೇಳಿಕೆ
* ಕ್ರಿಟಿಕಲ್ ಕೇರ್ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ
ವಿಜಯವಾಣಿ ಸುದ್ಧಿಜಾಲ ರಾಮನಗರ
ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಆರೋಗ್ಯ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಎಚ್.ಎ. ಇಕ್ಬಾಲ್ಹುಸೇನ್ ತಿಳಿಸಿದರು.
ರಾಮನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಕೇಂದ್ರ ಸರ್ಕಾರದ ಎನ್ಎಚ್ಎಂ ಯೋಜನೆಯಡಿ 22 ಕೋಟಿ ರೂ. ವೆಚ್ಚದ ಮೂರು ಹಂತಸ್ಥಿನ ಕ್ರಿಟಿಕಲ್ ಕೇರ್ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ರಾಮನಗರದ ಹೃದಯ ಭಾಗದ ಉತ್ತಮ ವಾತಾವರಣದಲ್ಲಿ ಸುಸಜ್ಜಿತವಾದ ಜಿಲ್ಲಾಸ್ಪತ್ರೆಯ ನಿರ್ಮಾಣ ಮಾಡಿ, ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ. ಆಸ್ಪತ್ರೆಗೆ ನುರಿತ ವೈದ್ಯರು ಮತ್ತು ಸಿಬ್ಬಂದಿ ಅವಶ್ಯಕತೆಯ ಬಗ್ಗೆ ಈಗಾಗಲೇ ಸರ್ಕಾರದ ಗಮನ ಸೆಳೆಯಲಾಗಿದೆ. ಜಿಲ್ಲಾಸ್ಪತ್ರೆಗೆ ಬೇಕಿರುವ ಮತ್ತಷ್ಟು ವೈದ್ಯರು, ಸಿಬ್ಬಂದಿಯನ್ನು ಬೇರೆ ಆಸ್ಪತ್ರೆಗಳಿಂದ ಎರವಲು ಪಡೆಯಲಾಗಿದೆ. ಸಾರ್ವಜನಿಕರ ಚಿಕಿತ್ಸೆಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ವೈದ್ಯರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.
ಜಿಲ್ಲಾಸ್ಪತ್ರೆಯ ಆವರಣದಲ್ಲಿ ವೈದ್ಯರ ವಸತಿಗೃಹಗಳು, ಅಡುಗೆ ಮನೆ ಮತ್ತಿತರ ಸುಸಜ್ಜಿತ ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇದರ ಜತೆಗೆ 22 ಕೋಟಿ ರೂ. ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಹೊಸ ಕಟ್ಟಡದಲ್ಲಿ ಹಲವು ಸೌಲಭ್ಯಗಳು ಇರಲಿವೆ. ತುರ್ತು ಶಸಚಿಕಿತ್ಸೆ, ತೀವ್ರ ನಿಗಾ ಟಕ (ಐಸಿಯು) ವಿಭಾಗಗಳು, ಸ್ಕ್ಯಾನಿಂಗ್ ಸೇರಿ ಹಲವು ಆರೋಗ್ಯ ಸೇವೆಗಳನ್ನು ನೂತನ ಕಟ್ಟಡದಲ್ಲಿ ಇರಲಿದೆ. ಕಟ್ಟಡ ಮೂರು ಹಂತಸ್ತಿನಲ್ಲಿ ಇರಲಿದ್ದು, ಇಂತಹ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನಡೆಸುತ್ತಿರುವುದು ನನ್ನ ಸೌಭಾಗ್ಯ ಎಂದರು.
ಶಾಸಕ ಮುನಿರತ್ನ ಅವರ ಬಗ್ಗೆ ಕೇಳಿದಾಗ ಒಂದು ಸಮುದಾಯದ ಬಗ್ಗೆ ಜಾತಿನಿಂದನೆ ಮಾಡಿ ಮಾತನಾಡಿರುವುದು ನನಗೂ ನೋವಾಗಿದೆ. ಅವರು ದುಡುಕಿ ಮಾತನಾಡಿ ತಪು$್ಪ ಮಾಡಿದ್ದಾರೆ, ಅದನ್ನು ಮುಂದಿನ ದಿನಗಳಲ್ಲಿ ತಿದ್ದಿಕೊಳ್ಳುತ್ತಾರೆ ಅಂದುಕೊಂಡಿದ್ದೇನೆ. ಮುನಿರತ್ನ ಅವರು ಹಿರಿಯರಿದ್ದಾರೆ. ಒಬ್ಬ ಶಾಸಕರಾಗಿ, ಸಚಿವರಾಗಿದ್ದ ಅವರು ಈ ರೀತಿ ಮಾತನಾಡಬಾರದಿತ್ತು, ಆ ರೀತಿಯ ಸಂಕುಚಿತ ಭಾವನೆ ಇಟ್ಟು ಕೊಳ್ಳಬಾರದು ಎಂದರು.
ಮಾಜಿ ಶಾಸಕ ಕೆ. ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಚ್. ರಾಜು, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಸಿಎನ್ಆರ್ ವೆಂಕಟೇಶ್, ಜಿಲ್ಲಾ ಶಸಚಿಕಿತ್ಸಕ ಡಾ. ಮಂಜುನಾಥ್, ಜಿಲ್ಲಾಸ್ಪತ್ರೆ ನಿವಾಸಿ ವೈದ್ಯ ಡಾ. ನಾರಾಯಣಸ್ವಾಮಿ, ನಗರಸಭಾ ಸದಸ್ಯರಾದ ಅಸ್ಮತ್, ನಿಜಾಂ, ಫೈರೋಜ್, ಆರಿಫ್, ಮುಖಂಡರಾದ ರೈಡ್ ನಾಗರಾಜು, ನರಸಿಂಹಯ್ಯ, ರಾಮಣ್ಣ, ಗುರುವಯ್ಯ, ಪಾರ್ಥಸಾರಥಿ, ಅನಿಲ್ ಜೋಗಿಂದರ್, ಕೆಂಪರಾಮು, ದಾಸೇಗೌಡ, ವೆಂಕಟೇಶ್ ಇದ್ದರು.
ರಾಮನಗರ ವ್ಯಾಪ್ತಿಯಲ್ಲಿರುವ ಹಳೇ ಜಿಲ್ಲಾಸ್ಪತ್ರೆ ಕಟ್ಟಡಗಳನ್ನು ಹಾಗೇ ಬಿಡದೆ ಅಲ್ಲಿಯೂ ಸುಸಜ್ಜಿತವಾಗಿ ತಾಲೂಕು ಮಟ್ಟದ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ವೈದ್ಯರು, ಸಿಬ್ಬಂದಿಯನ್ನು ಅಗತ್ಯಕ್ಕೆ ತಕ್ಕಂತೆ ನೇಮಿಸಿ, ಉತ್ತಮ ಆರೋಗ್ಯ ಸೇವೆ ನೀಡಲು ಚಿಂತನೆ ನಡೆಸಲಾಗುತ್ತಿದೆ. ಜಿಲ್ಲಾಸ್ಪತ್ರೆ ವೈದ್ಯರು, ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಸಾರ್ವಜನಿಕರ ಚಿಕಿತ್ಸೆಗೆ ಅನುಕೂಲ ಮಾಡಿಕೊಡುವ ಚಿಂತನೆ ಇದೆ.
> ಎಚ್.ಎ. ಇಕ್ಬಾಲ್ ಹುಸೇನ್, ಶಾಸಕರು.