ಮಾರಮ್ಮನ ಪ್ರಸಾದ ದುರಂತ: ಸಾವಿನ ಸಂಖ್ಯೆ 11ಕ್ಕೆ ಏರಿಕೆ

ಚಾಮರಾಜನಗರ: ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ 11 ಭಕ್ತರು ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.

ಪಾಪಣ್ಣ (70), ಅನಿತಾ (12), ಶಾಂತರಾಜು (25), ಗೋಪಿಯಮ್ಮ(40),ಅಣ್ಣಯಪ್ಪತಮಡಿ(45),ರಾಚಯ್ಯ(35), ಕೃಷ್ಣನಾಯಕ್(50), ದೊಡ್ಡಮಾದಯ್ಯ(42), ಶಿವು(35), ಶಕ್ತಿ ವೇಲು ( 45) ಅವಿನಾಶ್ (7) ಮೃತರು. ಗಂಭೀರವಾಗಿ ಅಸ್ವಸ್ಥಗೊಂಡವರನ್ನೆಲ್ಲ ಆಂಬುಲೆನ್ಸ್​ ಮೂಲಕ ಕೊಳ್ಳೆಗಾಲ, ಕಾಮಗೆರೆ, ಮೈಸೂರು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ.

ಸುಲ್ವಾಡಿಯಲ್ಲಿ ಕಿಚ್ಚುಕುತ್ತಿ ಮಾರಮ್ಮದೇವಸ್ಥಾನದಲ್ಲಿ ಗೋಪುರ ಶಂಕುಸ್ಥಾಪನೆ ಸಮಾರಂಭವಿತ್ತು. ಕಾರ್ಯಕ್ರಮದಲ್ಲಿ ರೈಸ್​ಬಾತ್​ ತಯಾರಿಸಲಾಗಿತ್ತು. ಅದನ್ನು ತಿಂದ ಬಳಿಕ ಎಲ್ಲರೂ ಅಸ್ವಸ್ಥರಾಗಿದ್ದಾರೆ. ಅದರಲ್ಲೂ 6 ಜನರ ಸ್ಥಿತಿ ಚಿಂತಾಜನಕವಾಗಿದೆ. 25ಕ್ಕೂ ಹೆಚ್ಚು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯದಲ್ಲೂ ಏರುಪೇರಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಪ್ರತ್ಯಕ್ಷದರ್ಶಿ ಮುರುಗೇಶ್​,  ದೇವರ ಪ್ರಸಾದವೆಂದು ಟೊಮ್ಯಾಟೊ ಬಾತ್​ ಹಾಗೂ ಪಂಚಾಮೃತ ಸೇವಿಸಿದ್ದರು. ಆ ಪ್ರಸಾದದಿಂದ ಫೆವಿಕಾಲ್​ ವಾಸನೆ ಬರುತ್ತಿತ್ತು ಎನ್ನಲಾಗಿದ್ದು, ಅದನ್ನು ತಿಂದ ಒಂದು ಗಂಟೆ ಬಳಿಕ ಎಲ್ಲರೂ ಅಸ್ವಸ್ಥರಾಗಿದ್ದಾರೆ. ಹೊಟ್ಟೆನೋವು, ವಾಂತಿಯಿಂದ ಬಳಲುತ್ತಿದ್ದಾರೆ. ಸಾವಿನ ಸಂಖ್ಯೆ ಏರುತ್ತಿದ್ದು ಆತಂಕ ಸೃಷ್ಟಿಯಾಗಿದೆ.

ಗ್ರಾಮದ ಜನರನ್ನು ಆಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ದಾಖಲಿಸಲಾಗುತ್ತಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ಇಬ್ಬರು ಶಂಕಿತರು ವಶಕ್ಕೆ
ಪ್ರಕರಣ ಸಂಬಂಧ ಸುಲ್ವಾಡಿ ಗ್ರಾಮದ ಚಿನ್ನಪ್ಪ ಮತ್ತು ಮಾದೇಶ ಎಂಬ ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಸಾದದಲ್ಲಿ ಕ್ರಿಮಿ ನಾಶಕ
ಪ್ರಸಾದದಲ್ಲಿ ಕೀಟನಾಶಕ ಮಿಶ್ರಣ ಕಂಡುಬಂದಿದೆ. ಕೆ.ಆರ್.ಆಸ್ಪತ್ರೆಯಲ್ಲಿ 25 ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, 10 ಅಸ್ವಸ್ಥರನ್ನು ವೆಂಟಿಲೇಟರ್​ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೈಸೂರಿನ ವೈದ್ಯ ರಾಜೇಶ್ ತಿಳಿಸಿದ್ದಾರೆ.

ಪಕ್ಷಿಗಳೂ ಸಾವು

ಅಲ್ಲಲ್ಲಿ ಚೆಲ್ಲಿದ್ದ ಪ್ರಸಾದ ತಿಂದ ಕಾಗೆಗಳು, ಹಲವು ಪಕ್ಷಿಗಳೂ ಅಸ್ವಸ್ಥಗೊಂಡಿದ್ದು ಸುಮಾರು 60 ಕಾಗೆಗಳು ಮೃತಪಟ್ಟಿವೆ.

ಆಹಾರ ಮಾದರಿ ರವಾನೆ
ಆಹಾರದಲ್ಲಿ ತೀವ್ರ ವಿಷ ಮಿಶ್ರಣವಾಗಿರುವ ಶಂಕೆ ವ್ಯಕ್ತವಾಗಿದೆ. ಆಹಾರ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಜತೆಗೆ ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಯತ್ನಿಸಲಾಗುತ್ತಿದೆ ಎಂದು ಚಾಮರಾಜನಗರ ಡಿಎಚ್​ಒ ಪ್ರಸಾದ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *