ಸಾಧ್ವಿ ಪ್ರಜ್ಞಾ ಸಿಂಗ್​ ವಿರುದ್ಧ ಸಾಕ್ಷ್ಯಾಧಾರದ ಕೊರತೆ: ಚುನಾವಣಾ ಸ್ಪರ್ಧೆ ಕುರಿತು ಇಸಿ ನಿರ್ಧರಿಸಬಹುದು: ಎನ್​ಐಎ

ಮುಂಬೈ: ಮಾಲೇಗಾಂವ್​ ಸ್ಫೋಟ ಪ್ರಕರಣದಲ್ಲಿ ಪ್ರಜ್ಞಾ ಸಿಂಗ್​ ಠಾಕೂರ್​ ವಿರುದ್ಧ ಸೂಕ್ತ ಸಾಕ್ಷ್ಯಾಧಾರದ ಕೊರತೆ ಇದೆ. ಇದರಿಂದಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಸ್ಪಷ್ಟಪಡಿಸಿದೆ. ಪ್ರಜ್ಞಾ ಸಿಂಗ್​ ಠಾಕೂರ್​ ವಿರುದ್ಧ 2016ರಲ್ಲಿ ಸಲ್ಲಿಸಿದ್ದ ಹೆಚ್ಚುವರಿ ಆರೋಪಪಟ್ಟಿಯಲ್ಲಿ ಎನ್​ಐಎ ಅಧಿಕಾರಿಗಳು ಈ ವಿಷಯ ಪ್ರಸ್ತಾಪಿಸಿದ್ದರು.

2008ರ ಮಾಲೇಗಾಂಬ್​ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರುವ ಪ್ರಜ್ಞಾ ಸಿಂಗ್​ ಠಾಕೂರ್​ ಅವರಿಗೆ ಭೋಪಾಲ್​ನಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಕೋರಿ ಘಟನೆಯಲ್ಲಿ ಮೃತಪಟ್ಟಿದ್ದ ಸೈಯದ್​ ಅಹ್ಮದ್​ ಅವರ ಪುತ್ರ ನಿಸಾರ್​ ಬಿಲಾಲ್​ ಎನ್​ಐಎಗೆ ಮನವಿ ಸಲ್ಲಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್​ಐಎ ಅಧಿಕಾರಿಗಳು ಮಾಲೇಗಾಂವ್​ ಸ್ಫೋಟ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ಸಾಕ್ಷ್ಯಾಧಾರದ ಕೊರತೆ ಇದೆ. ಆದರೆ, ಚುನಾವಣೆಗೆ ಸ್ಪರ್ಧಿಸಲು ಅವರಿಗೆ ಅವಕಾಶ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅದೇನಿದ್ದರೂ ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಲೇಗಾಂವ್​ ಸ್ಫೋಟ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎನ್​ಐಎ ನ್ಯಾಯಾಲಯದ ನ್ಯಾಯಮೂರ್ತಿ ವಿ.ಎಸ್​. ಪದಾಲ್ಕರ್​ ಎದುರು ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ಮತ್ತು ಎನ್​ಐಎ ಅಧಿಕಾರಿಗಳು ತಮ್ಮ ಸ್ಪಷ್ಟನೆಗಳನ್ನು ಸಲ್ಲಿಸಿದ್ದಾರೆ.

ಪ್ರಚಾರ ಪಡೆದುಕೊಳ್ಳುವ ಸಲುವಾಗಿ ತಮ್ಮ ವಿರುದ್ಧ ನಿರಾಧಾರವಾದ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ಹೇಳಿದ್ದಾರೆ. ಪ್ರಜ್ಞಾ ಸಿಂಗ್​ ವಿರುದ್ಧ ಸಾಕ್ಷ್ಯಾಧಾರದ ಕೊರತೆ ಇರುವ ಬಗ್ಗೆ ಎನ್​ಐಎ ಅಧಿಕಾರಿಗಳು ಪ್ರಮಾಣಪತ್ರ ಸಲ್ಲಿಸಿದ್ದಾರೆ. (ಏಜೆನ್ಸೀಸ್​)