ಲಂಚ ಕೇಳಿದ ಅಧಿಕಾರಿ ವಾಹನಕ್ಕೆ ಎಮ್ಮೆ ಕಟ್ಟಿಬಂದ ರೈತ !

ಭೋಪಾಲ್​: ಭೂಮಿ ಹಕ್ಕು ವರ್ಗಾವಣೆಗಾಗಿ 1 ಲಕ್ಷ ರೂಪಾಯಿ ಹಣ ಕೇಳಿದ ಉಪತಹಸೀಲ್ದಾರ್​ಗೆ ರೈತ ತನ್ನಲ್ಲಿರುವ ಎಮ್ಮೆಯನ್ನು ಲಂಚವಾಗಿ ನೀಡಿರುವ ವಿಚಿತ್ರ ಘಟನೆ ನಡೆದಿದೆ.

ಟಿಕಾಮ್​ಗಡ್​ ಜಿಲ್ಲೆಯ ರೈತ ಲಕ್ಷ್ಮೀ ಯಾದವ್​ (50) ತನ್ನ ಭೂಮಿಗೆ ಸಂಬಂಧಪಟ್ಟ ಕೆಲಸವೊಂದಕ್ಕೆ ಖರ್ಗಾಪುರ ತಹಸೀಲ್ದಾರ್​ ಕಚೇರಿಗೆ ಹೋಗಿದ್ದರು. ಆದರೆ, ಅಲ್ಲಿನ ಉಪತಹಸೀಲ್ದಾರ್​ ಸುನಿಲ್​ ವರ್ಮಾ ಕೆಲಸವಾಗಬೇಕೆಂದರೆ 50,000 ರೂಪಾಯಿ ನೀಡಬೇಕು ಎಂದು ಹೇಳಿದ್ದರು. ಆದರೆ, ಹಣವಿಲ್ಲದ ರೈತ ಇದರಿಂದ ನೊಂದಿದ್ದ. ನಂತರ ತನ್ನ ಎಮ್ಮೆಯನ್ನು ಕರೆದುಕೊಂಡು ಕಚೇರಿ ಬಳಿ ಹೋಗಿ ಅಲ್ಲಿದ್ದ ಅಧಿಕಾರಿಯ ವಾಹನಕ್ಕೆ ಕಟ್ಟಿ ಬಂದಿದ್ದಾನೆ ಎನ್ನಲಾಗಿದೆ.

ಎರಡು ಭೂ ಪ್ರಕರಣಗಳ ಮ್ಯುಟೇಶನ್​ಗಾಗಿ ಉಪತಹಸೀಲ್ದಾರ್​ ಸುನೀಲ್​ ವರ್ಮಾ ಅವರು 1 ಲಕ್ಷ ರೂಪಾಯಿಗಾಗಿ ಬೇಡಿಕೆ ಇಟ್ಟಿದ್ದರು. ಈಗಾಗಲೇ 50,000 ರೂ.ನೀಡಿದ್ದೇನೆ. ನನ್ನ ಬಳಿ ಜಾಸ್ತಿ ಹಣವಿಲ್ಲ. ಹಾಗಾಗಿ ನನ್ನ ಎಮ್ಮೆಯನ್ನೇ ನೀಡಿದ್ದೇನೆ ಎಂದು ಸಬ್​ ಡಿವಿಷನ್​ ಮ್ಯಾಜಿಸ್ಟ್ರೇಟ್​ ವಂದನಾ ರಜಪೂತ್​ಗೆ ದೂರು ನೀಡಿದ್ದಾರೆ. ಈಗಾಗಲೇ ಟಿಕಾಮ್​ಗಡ್​ ಡಿಸಿ ಸೌರವ್​ಕುಮಾರ್​ ಸುಮನ್​ ಘಟನೆಯ ತನಿಖೆಗೆ ಆದೇಶಿಸಿದ್ದಾರೆ.

ಲಕ್ಷ್ಮೀ ಯಾದವ್​ ಅವರು ಎರಡು ಭೂಮಿಗಳ ಹಕ್ಕು ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿದ್ದರು. ಗುನಾ ಗ್ರಾಮದ ಭೂಮಿ ವರ್ಗಾವಣೆ ಪ್ರಕರಣವನ್ನು ಲೋಕ ಅದಾಲತ್​ನಲ್ಲಿ ಬಗೆಹರಿಸಲಾಯಿತು. ಯಾದವ್​ ಅವರು ತಮ್ಮ ನಿರ್ದೇಶನದಂತೆ ನಡೆಯದೆ ಎರಡೂ ಪ್ರಕರಣಗಳನ್ನು ಒಂದೇ ಸಲ ವಿಲೇವಾರಿ ಮಾಡಲು ಒತ್ತಾಯಿಸುತ್ತಿದ್ದರು ಎಂದು ಉಪತಹಸೀಲ್ದಾರ್​ ತಿಳಿಸಿದ್ದಾರೆ ಎಂದು ವಂದನಾ ರಪೂತ್​ ತಿಳಿಸಿದ್ದಾರೆ.