ಪಣಜಿ: ಗೋವಾದ ಮಾಜಿ ರಣಜಿ ಕ್ರಿಕೆಟ್ ಆಟಗಾರ ರಾಜೇಶ್ ಘೋಡಗೆ (46) ನಿನ್ನೆ ಆಟವಾಡುತ್ತಿದ್ದಾಗ ಮೈದಾನದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ರಾಜೇಶ್ ಘೋಡಗೆ ಮಾಜಿ ರಣಜಿ ಕ್ರಿಕೆಟರ್. ಈಗಲೂ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಆಟವಾಡುತ್ತಿದ್ದರು. ಅಂತೆಯೇ ಭಾನುವಾರ ಕೂಡ ಮಾರ್ಗೋವಾದಲ್ಲಿ ನಡೆಯುತ್ತಿದ್ದ ಸ್ಥಳೀಯ ತಂಡಗಳ ಪಂದ್ಯಾವಳಿಯಲ್ಲಿ ಆಡುತ್ತಿದ್ದಾಗ ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಟೂರ್ನಿಮೆಂಟ್ ಆಯೋಜಕರು ತಿಳಿಸಿದ್ದಾರೆ.
ಮಾರ್ಗೋವಾದ ಕ್ರಿಕೆಟ್ ಕ್ಲಬ್ ಈ ಪಂದ್ಯಾವಳಿಯನ್ನು ಆಯೋಜಿಸಿತ್ತು. ರಾಜೇಶ್ ಘೋಡಗೆ ಮೈದಾನದಲ್ಲಿ ಕುಸಿದು ಬೀಳುವ ಹೊತ್ತಿಗೆ 30 ರನ್ ಗಳಿಸಿದ್ದರು. ರಾಜೇಶ್ ಅವರು ಈ ಕ್ಲಬ್ನ ಗೌರವ ಜಂಟಿ ಕಾರ್ಯದರ್ಶಿ ಕೂಡ ಹೌದು.
ರಾಜೇಶ್ ಘೋಡಗೆ 1990ರ ದಶಕದಲ್ಲಿ ಎರಡು ರಣಜಿ ಪಂದ್ಯಗಳನ್ನು ಆಡಿದ್ದರು. ಅಲ್ಲದೆ ಹಲವು ಏಕದಿನ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು.