ಕರುಣ್​ ನಾಯರ್​ ಕುರಿತು ಟೀಂ ಇಂಡಿಯಾ ಮಾಜಿ ಸೆಲೆಕ್ಟರ್​ ವೆಂಗಸರ್ಕರ್​ ಹೇಳಿದ್ದೇನು?

ನವದೆಹಲಿ: ಕರ್ನಾಟಕದ ಪ್ರತಿಭಾನ್ವಿತ ಆಟಗಾರ ಕರುಣ್​ ನಾಯರ್​ ಅವರನ್ನು ಟೀಂ ಇಂಡಿಯಾ ಆಯ್ಕೆಗಾರರು ಪದೇ ಪದೇ ನಿರ್ಲಕ್ಷಿಸುತ್ತಿರುವುದಕ್ಕೆ ಹಿರಿಯ ಆಟಗಾರ ಮತ್ತು ಟೀಂ ಇಂಡಿಯಾದ ಮಾಜಿ ಸೆಲೆಕ್ಟರ್​ ದಿಲಿಪ್​ ವೆಂಗಸರ್ಕರ್​ ಬೇಸರ ವ್ಯಕ್ತಪಡಿಸಿದ್ದು, ಅವರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.

ಭಾರತದ ಪರ ಟೆಸ್ಟ್​ ಕ್ರಿಕೆಟ್​ನಲ್ಲಿ ಸೆಹ್ವಾಗ್​ ಅವರನ್ನು ಹೊರತು ಪಡಿಸಿದರೆ ಕರುಣ್​ ನಾಯರ್​ ಮಾತ್ರ ತ್ರಿಶತಕ ಸಿಡಿಸಿದ್ದಾರೆ. ಅವರು ಇಂಗ್ಲೆಂಡ್​ ವಿರುದ್ಧವೇ ಈ ಸಾಧನೆ ಮಾಡಿದ್ದರು. ಆದರೆ 2 ತಿಂಗಳ ಸುದೀರ್ಘ ಇಂಗ್ಲೆಂಡ್​ ಪ್ರವಾಸದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕರುಣ್​ ನಾಯರ್​ ಬೆಂಚ್​ ಕಾಯಿಸಿದ್ದರು. ಜತೆಗೆ ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿಗೂ ಅವರನ್ನು ಪರಿಗಣಿಸಲಾಗಿಲ್ಲ.

ಇಂಗ್ಲೆಂಡ್​ ವಿರುದ್ಧದ ಕೊನೆಯ ಟೆಸ್ಟ್​ ಪಂದ್ಯದಲ್ಲಿ ನಾಯರ್​ ಬದಲು ಹನುಮ ವಿಹಾರಿಗೆ ಸ್ಥಾನ ನೀಡಲಾಗಿತ್ತು. ಇದು ಓರ್ವ ಬ್ಯಾಟ್ಸ್​ಮನ್​ಗೆ ಮಾಡಿದ ಅವಮಾನವೇ ಸರಿ. ತ್ರಿಶಕತ ವೀರ ಕರುಣ್​ ನಾಯರ್​ ಕುರಿತಾದ ಈ ಅವಗಣನೆಗೆ ಕಾರಣವೇನು ಎಂದು ತಿಳಿಯುತ್ತಿಲ್ಲ. ಇದೊಂದು ಒಳಸಂಚಿರುವಂತಿದೆ ಎಂದು ವೆಂಗಸರ್ಕರ್​ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಕರುಣ್​ ನಾಯರ್​ ಕ್ರಿಕೆಟ್​ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ನಾನು ಈಗ ಅತ್ಯಂತ ಕಠಿಣ ದಿನಗಳನ್ನು ಎದುರಿಸುತ್ತಿದ್ದೇನೆ. ತಂಡದ ಆಡಳಿತ ಮಂಡಳಿ ಮತ್ತು ಆಯ್ಕೆಗಾರರಿಂದ ನನಗೆ ಸರಿಯಾದ ಮಾಹಿತಿ ಲಭ್ಯವಾಗುತ್ತಿಲ್ಲ. ಇದು ನನ್ನ ಆತ್ಮವಿಶ್ವಾಸವನ್ನು ಕುಂದಿಸುತ್ತಿದೆ. ಓರ್ವ ಆಟಗಾರನಾಗಿ ನಾನು ತಂಡದ ಆಡಳಿತ ಮಂಡಳಿಯ ನಿರ್ಧಾರವನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದ್ದರು. (ಏಜೆನ್ಸೀಸ್​)