ಸಿಜೆಐ ವಿರುದ್ಧ ಪಿತೂರಿ ಆರೋಪದ ತನಿಖೆಗೆ ಸುಪ್ರೀಂ ನಿವೃತ್ತ ನ್ಯಾಯಾಧೀಶ ಎ ಕೆ ಪಟ್ನಾಯಕ್‌ ನೇಮಕ

ನವದೆಹಲಿ: ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪದ ಪಿತೂರಿಯ ಬಗ್ಗೆ ತನಿಖೆಗಾಗಿ ಸುಪ್ರೀಂನ ನಿವೃತ್ತ ನ್ಯಾಯಾಧೀಶರಾದ ಎ ಕೆ ಪಟ್ನಾಯಕ್‌ ಅವರನ್ನು ನೇಮಿಸಿದೆ. ಇದರೊಂದಿಗೆ ಸಿಬಿಐ ಮುಖ್ಯಸ್ಥರು, ಗುಪ್ತಚರ ಇಲಾಖೆ ಮತ್ತು ದೆಹಲಿ ಪೊಲೀಸರು ತನಿಖೆಗೆ ನೆರವಾಗುವಂತೆ ಕೋರ್ಟ್‌ ಆದೇಶಿಸಿದೆ.

ಸಿಜೆಐ ರಂಜನ್​ ಗೊಗೊಯ್​ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಹಿಂದೆ ಷಡ್ಯಂತ್ರ ನಡೆದಿದೆ ಹಾಗೂ ಹಣ ನೀಡಿ ಸುಪ್ರೀಂಕೋರ್ಟ್​ನ ಪ್ರಕ್ರಿಯೆಗಳನ್ನು ಕೆಲವರು ನಿಯಂತ್ರಣ ಮಾಡುತ್ತಿದ್ದಾರೆ ಎಂದು ವಕೀಲ ಉತ್ಸವ್ ಬೈನ್ಸ್ ಸಲ್ಲಿಸಿರುವ ಪ್ರಮಾಣಪತ್ರದ ವಿಚಾರಣೆ ಬಳಿಕ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ.

ಈ ತನಿಖೆಯು ಸಿಜೆಐ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯದ ಆರೋಪದೊಂದಿಗೆ ವಿಚಾರಣೆ ನಡೆಸಲಾಗುವುದಿಲ್ಲ. ಅಲ್ಲದೆ, ಸಿಜೆಐ ವಿರುದ್ಧದ ದೂರಿನ ತನಿಖೆಯ ಆಂತರಿಕ ಸಮಿತಿಯ ವಿಚಾರಣೆಯ ಫಲಿತಾಂಶದ ಮೇಲೂ ಪರಿಣಾಮ ಬೀರುವುದಿಲ್ಲ ಎಂದು ಉನ್ನತ ನ್ಯಾಯಾಲಯ ಹೇಳಿದೆ.

ಪ್ರಕರಣದ ಒಟ್ಟಾರೆ ತನಿಖೆಯು ಪೂರ್ಣಗೊಂಡ ಬಳಿಕ ಮಾಜಿ ನ್ಯಾಯಾಧೀಶರಾದ ಎ ಕೆ ಪಟ್ನಾಯಕ್‌ ಅವರು ಮುಚ್ಚಿದ ಲಕೋಟೆಯಲ್ಲಿ ತನಿಖೆಯ ವರದಿಯನ್ನು ಮುಂದಿನ ವಿಚಾರಣೆಗೂ ಮುಂಚಿತವಾಗಿ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ಹೇಳಿದೆ.

ನ್ಯಾಯಾಲಯ ತನಿಖಾ ಸಮಿತಿಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಬಹಿರಂಗಪಡಿಸಲು ವಕೀಲ್‌ ಬೈನ್ಸ್‌ಗೆ ನಿರ್ದೇಶನ ನೀಡಿದೆ.

ಲೈಂಗಿಕ ಕಿರುಕುಳ ಆರೋಪದಲ್ಲಿ ಸಿಜೆಐ ಸಿಲುಕಿಸಲು ಯತ್ನ ನಡೆಯುತ್ತಿದೆ ಎಂದು ವಕೀಲ ಉತ್ಸವ್ ಸೋಮವಾರ ಆರೋಪ ಮಾಡಿದ್ದರು. ಅನಿಲ್ ಅಂಬಾನಿಗೆ ಸಂಬಂಧಿಸಿದ ಪ್ರಕರಣವೊಂದನ್ನು ತಿದ್ದುಪಡಿ ಮಾಡಿದ್ದಕ್ಕಾಗಿ ಇಬ್ಬರು ಮಾಜಿ ನ್ಯಾಯಾಧೀಶರು ಮಹಿಳಾ ಸಿಬ್ಬಂದಿಯ ಮೂಲಕ ಸಿಜೆಐ ವಿರುದ್ಧ ಪಿತೂರಿ ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ಬುಧವಾರ ಬೆಳಗ್ಗೆ ಸುಪ್ರೀಂಕೋರ್ಟ್​ನ ವಿಶೇಷ ಪೀಠಕ್ಕೆ ಅವರು ಮುಚ್ಚಿದ ಲಕೋಟೆಯಲ್ಲಿ ಪ್ರಮಾಣಪತ್ರ ಹಾಗೂ ದಾಖಲೆಗಳನ್ನು ಸಲ್ಲಿಸಿದ್ದರು. (ಏಜೆನ್ಸೀಸ್)