ಗೌಹಾಟಿ : ಒಂದು ಕಾಲದಲ್ಲಿ ಅಸ್ಸಾಂ ರಾಜ್ಯವನ್ನು ಹಲವು ರಾಷ್ಟ್ರ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಪ್ರತಿನಿಧಿಸಿದ್ದ, ರಣಜಿ ಕ್ರಿಕೆಟ್ನಲ್ಲಿ ತನ್ನ ಪ್ರತಿಭೆಯನ್ನು ಪ್ರಕಾಶಿಸಿದ್ದ ಕ್ರಿಕೆಟಿಗ ಈಗ ಜೀವನ ಸಾಗಿಸಲು, ರಸ್ತೆಬದಿಯಲ್ಲಿ ದಾಲ್ ಪೂರಿ ಮಾರುತ್ತಿದ್ದಾನೆ. ಒಂದು ಕಾಲದಲ್ಲಿ, ಕ್ರಿಕೆಟ್ ಜಗತ್ತಲ್ಲಿ ಸಾಧನೆಯ ಶ್ರೇಣಿ ಏರಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಬೌಲ್ ಮಾಡಿದ್ದ ಪ್ರಕಾಶ್ ಭಗತ್, ಇಂದು ಬಡತನ ಬೇಗೆಯಲ್ಲಿ ಬೇಯುತ್ತಿದ್ದಾರೆ ಎಂದು ಐಎಎನ್ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಾಜಿ ದೇಶೀಯ ಕ್ರಿಕೆಟ್ ಆಟಗಾರರಾದ ಅಸ್ಸಾಂನ ಸಿಲ್ಚರ್ನ ನಿವಾಸಿ ಭಗತ್, 1999 ರಲ್ಲಿ ಅಸ್ಸಾಂನ ಸಿಲ್ಚರ್ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಅಸೋಸಿಯೇಷನ್ನ ಅಂಡರ್-13 ಟೂರ್ನಿಯಲ್ಲಿ ಭಾಗವಹಿಸಿದ್ದರು. ನಂತರ ಅಂಡರ್-16, ಅಂಡರ್-19 ಮತ್ತು ಅಂಡರ್-23 ವಿಭಾಗಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟಗಳಲ್ಲಿ ಭಾಗವಹಿಸಿದ್ದರು. ರಣಜಿ ಕ್ರಿಕೆಟ್ನಲ್ಲಿ ತಮ್ಮ ರಾಜ್ಯ ತಂಡದೊಂದಿಗೆ 2009/10 ಮತ್ತು 2010/11ರ ಸೀಸನ್ಗಳಲ್ಲಿ ಆಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ‘ಕಾಮಿಡಿ ಕಿಲಾಡಿಗಳು’ ಸೀಸನ್-2 ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ, ಯಾರ ಮುಡಿಗೇರಲಿದೆ ಟ್ರೋಫಿ?
ಲೆಫ್ಟ್ ಆರ್ಮ್ ಸ್ಪಿನ್ನರ್ ಆಗಿದ್ದ ಭಗತ್ ಅವರು, 2003 ರಲ್ಲಿ ತಮ್ಮ ಪ್ರತಿಭೆಯ ಆಧಾರದ ಮೇಲೆ ಬೆಂಗಳೂರಿನ ನಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಒಂದು ತಿಂಗಳ ತರಬೇತಿಗಾಗಿ ಆಯ್ಕೆಯಾಗಿದ್ದರು. ಅಕಾಡೆಮಿ ಪಂದ್ಯಗಳಲ್ಲಿ ಆಗಿನ ಕ್ಯಾಪ್ಟನ್ ಸೌರವ್ ಗಂಗೂಲಿ ಅವರಿಗೆ ಬೌಲಿಂಗ್ ಮಾಡಿದ್ದರು. ಕ್ರಿಕೆಟ್ ಜಗತ್ತಿನ ತಾರೆಗಳಾದ ಸಚಿನ್ ತೆಂಡೂಲ್ಕರ್, ಜಹೀರ್ ಖಾನ್, ಹರಭಜನ್ ಸಿಂಗ್ ಮತ್ತು ವೀರೆಂದರ್ ಸೆಹವಾಗ್ರನ್ನು ಭೇಟಿ ಮಾಡಿದ್ದರು. ಆದರೆ, 2011 ರಲ್ಲಿ ತಮ್ಮ ತಂದೆ ಗಜಧರ್ ಭಗತ್ ಅವರು ಹೃದಯಾಘಾತದಿಂದ ನಿಧನರಾದಾಗ, ಕ್ರಿಕೆಟ್ಗೆ ವಿದಾಯ ಹೇಳಬೇಕಾಯಿತು.
“ನಾನು ನನ್ನ ತಂದೆ ಮೃತಪಟ್ಟ ಮೇಲೆ ಕ್ರಿಕೆಟ್ ಬಿಡಬೇಕಾಯಿತು. ನನ್ನ ತಂದೆ ಮತ್ತು ಅಣ್ಣ ದೀಪಕ್ ಭಗತ್ ತಳ್ಳೋ ಗಾಡಿಯಲ್ಲಿ ಚಾಟ್ ಫುಡ್ ಮಾರುತ್ತಿದ್ದರು. ತಂದೆ ಸತ್ತ ಮೇಲೆ ನನ್ನ ಅಣ್ಣನಿಗೂ ಹುಷಾರಿರುವುದಿಲ್ಲ” ಎಂದಿದ್ದಾರೆ, ಈಗ ಅದೇ ಗಾಡಿಯಲ್ಲಿ ದಾಲ್ ಪೂರಿ ಮುಂತಾದ ಚ್ಯಾಟ್ ಮಾರುತ್ತಿರುವ ಪ್ರಕಾಶ್ ಭಗತ್. ಮದುವೆಯಾಗಿ ಇಬ್ಬರು ಮಕ್ಕಳ ತಂದೆಯಾಗಿರುವ 34 ವರ್ಷದ ಭಗತ್, ತಮಗೆ ಆರ್ಥಿಕ ಬೆಂಬಲ ಸಿಕ್ಕಲ್ಲಿ ಈಗಲೂ ಕ್ರಿಕೆಟ್ಗೆ ಮರಳುವ ಆಸೆ ಇದೆ ಎಂದಿದ್ದಾರೆ. (ಏಜೆನ್ಸೀಸ್)