ಜೆಡಿಎಸ್​ ಸಮಾವೇಶದಲ್ಲಿ ದೇವೇಗೌಡರ ಕುಟುಂಬದ ಕಣ್ಣೀರಧಾರೆ; ಇದೇಕೆ, ಇದೇಕೆ?.. ಎನ್ನುತ್ತಿದೆ ಬಿಜೆಪಿ

ಹಾಸನ: ಜಿಲ್ಲೆಯ ಹೊಳೆನರಸೀಪುರದಲ್ಲಿ ಆಯೋಜಿಸಿದ್ದ ಜೆಡಿಎಸ್​ ಸಮಾವೇಶದಲ್ಲಿ ಜೆಡಿಎಸ್​ ವರಿಷ್ಠ ಮಾಜಿ ಪ್ರಧಾನ ಮಂತ್ರಿ ಎಚ್​.ಡಿ. ದೇವೇಗೌಡ ಸೇರಿದಂತೆ ಅವರ ಪುತ್ರ ಲೋಕೋಪಯೋಗಿ ಸಚಿವ ಎಚ್​.ಡಿ. ರೇವಣ್ಣ, ಅವರ ಪತ್ನಿ ಭವಾನಿ ರೇವಣ್ಣ ಮತ್ತು ಪುತ್ರ ಪ್ರಜ್ವಲ್​ ರೇವಣ್ಣ ಕಣ್ಣೀರಿಟ್ಟ ಘಟನೆ ನಡೆದಿದೆ.

ತಾವು ಹಲವು ದಶಕಗಳಿಂದ ಪ್ರತಿನಿಧಿಸುತ್ತಿದ್ದ ಹಾಸನ ಲೋಕಸಭೆ ಕ್ಷೇತ್ರವನ್ನು ದೇವೇಗೌಡರು ಇಂದು ಅಧಿಕೃತವಾಗಿ ತಮ್ಮ ಮೊಮ್ಮಗ ಪ್ರಜ್ವಲ್​ ರೇವಣ್ಣ ಅವರಿಗೆ ಬಿಟ್ಟು ಕೊಟ್ಟರು. ಅವರು ತಮ್ಮ ನಿರ್ಧಾರವನ್ನು ಘೋಷಿಸುತ್ತಿದ್ದಂತೆ ಅವರ ಹಿಂದೆಯೇ ನಿಂತಿದ್ದ ಪ್ರಜ್ವಲ್​ ರೇವಣ್ಣ ಕಣ್ಣೀರಿಟ್ಟರು. ಇದನ್ನು ನೋಡಿ ವೇದಿಕೆಯ ಹಿಂದಿನ ಸಾಲಿನಲ್ಲಿದ್ದ ಎಚ್​.ಡಿ. ರೇವಣ್ಣ ಮತ್ತು ಭವಾನಿ ರೇವಣ್ಣ ಕಣ್ಣೀರು ಹಾಕಿದರು. ಇದೇ ಸಭೆಯಲ್ಲಿ ಚನ್ನರಾಯಪಟ್ಟಣದ ಶಾಸಕ ಸಿ.ಎಸ್​. ಬಾಲಕೃಷ್ಣ ಅವರೂ ವೇದಿಕೆಯಲ್ಲಿ ಕಣ್ಣೀರಿಟ್ಟಿದ್ದರು.

ಬಿಜೆಪಿ ಟೀಕೆ

ದೇವೇಗೌಡರ ಕುಟುಂಬ ಜೆಡಿಎಸ್​ ಸಮಾವೇಶದಲ್ಲಿ ಕಣ್ಣೀರಿಟ್ಟ ಘಟನೆ ಕುರಿತು ಟ್ವೀಟ್​ ಮಾಡಿರುವ ಬಿಜೆಪಿ ರಾಜ್ಯ ಘಟಕ, ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅಳಲಿಲ್ಲ! ಪುಲ್ವಾಮಾ ದಾಳಿಯಾಗಿ ಯೋಧರು ಮಡಿದಾಗ ಕಣ್ಣೀರು ಬರಲಿಲ್ಲ! ಚುನಾವಣೆ ಬಂದಾಗ ಮಾತ್ರ ಮನೆ ಮಂದಿಗೆಲ್ಲ ವೇದಿಕೆಯಲ್ಲಿ ಕಣ್ಣೀರು! ರಾಜ್ಯದ ಜನ ಈಗಲೂ ಮರುಳಾಗುವರೇ ಎಂದು ಪ್ರಶ್ನಿಸಿದೆ.