ಸ್ವರ್ಗವನ್ನೇ ದೇಶಕ್ಕೆ ತರುತ್ತೇನೆ ಎಂದಿದ್ದ ಮೋದಿ ಹೇಳಿದ್ದೇನು, ಮಾಡಿದ್ದೇನು?

ಚಿಕ್ಕಮಗಳೂರು: ಪ್ರಧಾನಿಯಾಗಿ ಆಯ್ಕೆಯಾದ ತಕ್ಷಣ ಸಂಸತ್ತಿನ ಬಾಗಿಲಲ್ಲಿ ತಲೆ ಇಟ್ಟು ನಮಸ್ಕರಿಸಿ ಪ್ರಜಾಪ್ರಭುತ್ವದ ದೇವಾಲಯ ಪ್ರವೇಶಿಸುತ್ತಿರುವುದಾಗಿ ಹೇಳಿದ್ದ ನರೇಂದ್ರ ಮೋದಿ, ಇಂದು ಸಂಸತ್ತನ್ನು ಪ್ರಜಾಪ್ರಭುತ್ವದ ದೇವಾಲಯವಾಗಿ ಉಳಿಸಿದ್ದಾರಾ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪ್ರಶ್ನಿಸಿದರು.

ನಗರದ ವಿಜಯಪುರ ಗಣಪತಿ ಪೆಂಡಾಲ್ ಆವರಣದಲ್ಲಿ ಸೋಮವಾರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡುವುದಾಗಿ ಹಾಗೂ ಸ್ವರ್ಗವನ್ನೇ ದೇಶಕ್ಕೆ ತರುವುದಾಗಿ ಮೋದಿ ಹೇಳಿದ್ದರು. ಆದರೆ ಸಂಕಷ್ಟದಲ್ಲಿರುವ ಈ ದೇಶದ ರೈತರ ಬಗ್ಗೆ ಒಂದು ಮಾತನ್ನೂ ಆಡಲಿಲ್ಲ ಎಂದರು.

ಅಡಕೆ ಬೆಳೆಗಾರರ ಸಮಸ್ಯೆ ಬಗ್ಗೆ ಫೋಟೋ ತೆಗೆದು ಅವರಿಗೆ ತೋರಿಸಿ ಪರಿಸ್ಥಿತಿ ವಿವರಿಸಿದೆ. ಆದರೆ ಅವರಿಂದ ಒಂದೇ ಒಂದು ಶಬ್ದವೂ ಹೊರ ಬರಲಿಲ್ಲ. ಅವರಿಗೆ ರೈತರ ಬಗ್ಗೆ ಸ್ವಲ್ಪವೂ ಕಳಜಿ ಇಲ್ಲ ಎಂದರು.

ಕಡಿದು ಕಟ್ಟೆ ಹಾಕುವುದಿಲ್ಲ: ಮೋದಿಗೆ ಮಾತ್ರ ಸಬಲ ಹಾಗೂ ಸ್ಥಿರ ಸರ್ಕಾರ ನೀಡುವ ಗಂಡಸುತನವಿದೆ ಎಂದು ಬಿಜೆಪಿ ಮುಖಂಡರು ಹೇಳುತ್ತಾರೆ. ಆ ರೀತಿ ಏನಿಲ್ಲ. ಮೋದಿ ಅವರಿಗಿಂತ ಹಿಂದೆ ಸರ್ಕಾರ ನಡೆಸಿದ ಪ್ರಧಾನಮಂತ್ರಿಗಳ ಕಾಲದಲ್ಲೂ ಯುದ್ಧವಾಗಿತ್ತು. ಆಗಲೂ ಈ ದೇಶ ಸೋತಿರಲಿಲ್ಲ. ನಮ್ಮ ಸೈನ್ಯ ಬಲವಾಗಿದೆ. ಅವರು ಯುದ್ಧ ಮಾಡುತ್ತಾರೆ. ಮೋದಿ ಏನೂ ಕಡಿದು ಕಟ್ಟೆ ಹಾಕುವುದಿಲ್ಲ. ಅವರ ಮಾತುಗಳನ್ನು ಕೇಳಿದರೆ ತಲೆ ಚಚ್ಚಿಕೊಳ್ಳಬೇಕು ಎನಿಸುತ್ತದೆ ಎಂದರು.

ದತ್ತಪೀಠ ವಿಚಾರ ಇಟ್ಟುಕೊಂಡು ಗೆಲುವು: 1998ರಿಂದ ಈ ಕ್ಷೇತ್ರದಲ್ಲಿ ದತ್ತಪೀಠದ ವಿವಾದದ ಮೂಲಕ ಬಿಜೆಪಿ ಗೆಲುವು ಸಾಧಿಸಲು ಆರಂಭಿಸಿತು. ಈ ಜಿಲ್ಲೆಯಲ್ಲಿ ಅದು ಬಿಟ್ಟು ಬೇರೆ ಸಮಸ್ಯೆಗಳು ಇಲ್ಲವೇ ಎಂದು ಪ್ರಶ್ನಿಸಿ, ಅಂದೇ ನಾನು ಸಂಸತ್ತಿನಲ್ಲಿ ಬಿಜೆಪಿ ಮುಖಂಡ ಆಡ್ವ್ವಾಣಿ ಅವರಿಗೆ ಶಾಂತಿ ಕಾಪಾಡಬೇಕೆಂದು ಹೇಳಿದ್ದೆ. ಆದರೆ ಆ ವಿಚಾರವನ್ನೇ ಮುಂದಿಟ್ಟುಕೊಂಡು ಈ ಕ್ಷೇತ್ರದಲ್ಲಿ ಗೆಲ್ಲುತ್ತಿದ್ದಾರೆ ಎಂದರು.

ನಾನು ನೋಡದ ಮೋದಿ ಏನಲ್ಲ್ಲಾ…: ಯುವಕರು ಮೋದಿ.. ಮೋದಿ.. ಎಂದು ಕೂಗುತ್ತಾ ಮೋಸ ಹೋಗಬಾರದು. ನಾನು ನೋಡದ ಮೋದಿ ಏನಲ್ಲ ಅವರು. ನಾವು ರೈತರ ಮಕ್ಕಳು. ರೈತರ ಮಕ್ಕಳಿಗೆ ಅವರುಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದಾರೆ? ರೈತರನ್ನು ಕಡೆಗಣಿಸಿದ ಹಾಗೂ ಹಳ್ಳಿಗಳನ್ನು ನಾಶ ಮಾಡುತ್ತಿರುವ ವ್ಯಕ್ತಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕೇ? ನೆಮ್ಮದಿಯಿಂದ ಎಲ್ಲ ಜನಾಂಗದವರು ಇಲ್ಲಿ ಬದುಕುವಂತಾಗಬೇಕು. ಮಾತಿಗೆ ಒಂದು ಅರ್ಥವಿರಬೇಕು. ಮೋದಿ ಮನಸ್ಸಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಆದರೆ ಅವರ ಮಾತಿನಲ್ಲಿ ಹಿಡಿತವೇ ಇಲ್ಲ ಎಂದು ಎಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *