ಚುನಾವಣಾ ಆಯೋಗದ ಬಗ್ಗೆ ಪ್ರಣಬ್​ ಮುಖರ್ಜಿ ಹೇಳಿದ್ದೇನು? ರಾಹುಲ್​ಗೆ ತಿರುಗೇಟು ಕೊಟ್ಟರಾ ಮಾಜಿ ರಾಷ್ಟ್ರಪತಿ?

ನವದೆಹಲಿ: ಲೋಕಸಭೆ ಚುನಾವಣೆಯ ಎಲ್ಲ ಹಂತಗಳೂ ಮುಗಿದಿದ್ದು, ಫಲಿತಾಂಶಕ್ಕೆ ಇನ್ನೊಂದೇ ದಿನ ಬಾಕಿ ಇದೆ. 19ರಂದು ಕೊನೆ ಹಂತದ ಮತದಾನ ಮುಗಿಯುತ್ತಿದ್ದಂತೆ ಹೊರಬಿದ್ದ ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಎನ್​ಡಿಎ ಸರ್ಕಾರದ ಪರವಾಗಿವೆ. ಆದರೆ ಪ್ರತಿಪಕ್ಷಗಳು ಆ ಸಮೀಕ್ಷೆಯನ್ನು ತಪ್ಪು ಎಂದು ಹೇಳಿವೆ.

ಈ ನಡುವೆ ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ, ಚುನಾವಣಾ ಆಯೋಗದ ಕಾರ್ಯವನ್ನು ಶ್ಲಾಘಿಸಿದ್ದಾರೆ. ಲೋಕಸಭಾ ಚುನಾವಣೆಯನ್ನು ಆಯೋಗ ಸಮರ್ಥವಾಗಿ ನಿಭಾಯಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಚುನಾವಣಾ ಆಯೋಗದ ಮೊದಲ ಆಯುಕ್ತರಾಗಿ ನೇಮಕಗೊಂಡ ಸುಕುಮಾರ್​ ಸೇನ್​ ಅವರಿಂದ ಈಗಿನವರೆಗಿನ ಎಲ್ಲ ಆಯುಕ್ತರೂ ತಮ್ಮ ಕೆಲಸವನ್ನು ಸರಿಯಾಗಿ ನಿಭಾಯಿಸಿದ್ದಾರೆ. ಸಂಸ್ಥೆ ತುಂಬ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ.

ಚುನಾವಣಾ ಆಯೋಗವನ್ನಾಗಲೀ, ಆಯೋಗದ ಆಯುಕ್ತರನ್ನಾಗಲೀ ಟೀಕಿಸಲು ಸಾಧ್ಯವೇ ಇಲ್ಲದಷ್ಟು ಸಮರ್ಥವಾಗಿ ನಿರ್ವಹಣೆ ಮಾಡಿದ್ದಾರೆ. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಚುನಾವಣೆಗಳು ಪಾರದರ್ಶಕವಾಗಿ, ಶಿಸ್ತಿನಿಂದ ನಡೆಯಬೇಕು. ನಮ್ಮಲ್ಲಿ ಅದು ಆಗುತ್ತಿದೆ ಎಂದು ತಿಳಿಸಿದರು.

ಸಂಸ್ಥೆ ಸಮರ್ಥವಾಗಿಯೇ ಇದೆ. ಕೆಲಸ ಮಾಡಲು ಸಾಧ್ಯವಿಲ್ಲದವರು ಸಣ್ಣಸಣ್ಣದಕ್ಕೂ ಜಗಳವಾಡುತ್ತಾರೆ. ಆದರೆ ಒಬ್ಬ ಉತ್ತಮ ಕೆಲಸಗಾರ ತನ್ನಲ್ಲಿರುವ ಸಾಧನಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಅರಿತಿರುತ್ತಾನೆ ಎಂದು ಹೇಳಿದರು.

ಚುನಾವಣಾ ಆಯೋಗ ನರೇಂದ್ರ ಮೋದಿಯವರೆದುರು ಸಂಪೂರ್ಣ ಶರಣಾಗಿದೆ. ಮೋದಿಯವರ ಹೊರತು ಇನ್ಯಾರ ಬಗ್ಗೆಯೂ ಗೌರವ ತೋರುತ್ತಿಲ್ಲ ಎಂದು ರಾಹುಲ್​ ಗಾಂಧಿ ಆರೋಪ ಮಾಡಿದ್ದ ಬೆನ್ನಲ್ಲೇ ಪ್ರಣಬ್​ ಮುಖರ್ಜಿ ಈ ಹೇಳಿಕೆ ನೀಡಿದ್ದು ಹಲವು ಕುತೂಹಲಗಳಿಗೆ ಕಾರಣವಾಗಿದೆ.

Leave a Reply

Your email address will not be published. Required fields are marked *