ಸರ್ಫ್ರಾಜ್​​ ಅಹ್ಮದ್​ ಮಿದುಳೇ ಇಲ್ಲದ ನಾಯಕ ಎಂದು ಕಿಡಿಕಾರಿದ ಮಾಜಿ ಬೌಲರ್​ ಶೋಯೆಬ್​ ಅಖ್ತರ್​

ಮ್ಯಾಂಚೆಸ್ಟರ್​: ನಿನ್ನೆ ವಿಶ್ವಕಪ್​ ಪಂದ್ಯಾವಳಿಯಲ್ಲಿ ಭಾರತದ ವಿರುದ್ಧ ಸೋತಿದ್ದ ಪಾಕಿಸ್ತಾನ ತಂಡವನ್ನು ಅಲ್ಲಿನ ಜನರು ಬಾಯಿಗೆ ಬಂದಂತೆ ಟೀಕಿಸುತ್ತಿದ್ದಾರೆ. ಈಗ ಮಾಜಿ ವೇಗದ ಬೌಲರ್​ ಶೋಯೆಬ್​ ಅಖ್ತರ್​ ಕೂಡ ಪಾಕ್​ ತಂಡ ಹಾಗೂ ಅದರ ಕಳಪೆ ಪ್ರದರ್ಶನದ ವಿರುದ್ಧ ಕಿಡಿಕಾರಿದ್ದಾರೆ.

ಅವರ ಯೂಟ್ಯೂಬ್​ ಚಾನೆಲ್​ನಲ್ಲಿ ವಿಶ್ವಕಪ್​ ಪಂದ್ಯದ ಬಗ್ಗೆ ಮಾತನಾಡಿರುವ ವಿಡಿಯೋವನ್ನು ಶೇರ್​ ಮಾಡಿಕೊಂಡಿರುವ ಶೋಯೆಬ್​ ಅಖ್ತರ್​, ಪಾಕ್​ ತಂಡದ ನಾಯಕ ಸರ್ಫ್ರಾಜ್​​ ಅಹ್ಮದ್​ ಅವರನ್ನು ಮಿದುಳೇ ಇಲ್ಲದ ನಾಯಕ ಎಂದು ಟೀಕಿಸಿದ್ದಾರೆ.

2017ರ ಚಾಂಪಿಯನ್​ ಟ್ರೋಫಿ ಪಂದ್ಯಾವಳಿಯಲ್ಲಿ ವಿರಾಟ್​ ಕೊಹ್ಲಿ ಟಾಸ್​ ಗೆದ್ದರೂ ಪಾಕ್​ಗೆ ಬ್ಯಾಟಿಂಗ್​ ಬಿಟ್ಟುಕೊಟ್ಟು ಎಡವಿದ್ದರು. ನಿನ್ನೆ ಮ್ಯಾಂಚೆಸ್ಟರ್​ನಲ್ಲಿ ನಡೆದ ವಿಶ್ವಕಪ್​ ಪಂದ್ಯದಲ್ಲಿ ಇದೇ ತಪ್ಪನ್ನು ಸರ್ಫ್ರಾಜ್​​ ​ ಮಾಡಿದ್ದಾರೆ. ಒಬ್ಬ ನಾಯಕನಾಗಿ ಹೀಗೆ ಬುದ್ಧಿಯಿಲ್ಲದಂತೆ ವರ್ತಿಸಲು ಹೇಗಾದರೂ ಸಾಧ್ಯ? ಟಾಸ್​ ಗೆದ್ದ ಬಳಿಕ ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ನಮ್ಮ ತಂಡ ರನ್​ಗಳ ಗುರಿ ಬೆನ್ನಟ್ಟುವಲ್ಲಿ ಅಷ್ಟು ಉತ್ತಮ ಪ್ರದರ್ಶನ ತೋರಿಸಲು ಅಲ್ಲಿ ಸಾಧ್ಯವಾಗುವುದಿಲ್ಲ ಎಂಬುದನ್ನೂ ಯೋಚಿಸಲಿಲ್ಲ ಎಂದು ಕಿಡಿಕಾರಿದ್ದಾರೆ.

ಪಾಕಿಸ್ತಾನ ತಂಡದ ನಾಯಕ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದರೆ ಅಲ್ಲೇ ಅರ್ಧ ಮ್ಯಾಚ್​ ಗೆದ್ದು ಬಿಡುತ್ತಿತ್ತು. ನಿನ್ನೆಯ ಪಂದ್ಯ ನಿಶ್ಚಿತವಾಗಿ ಪಾಕ್​ ಪರ ಆಗುತ್ತಿತ್ತು. ಆದರೆ ಸರ್ಫ್ರಾಜ್​​ ​ ಮ್ಯಾಚ್​ ಸೋಲಲೆಂದೇ ಶ್ರಮಪಟ್ಟರು ಎಂದು ವ್ಯಂಗ್ಯವಾಡಿದ್ದಾರೆ. ತಲೆಯಿಲ್ಲದ ನಾಯಕತ್ವ, ಮಿದುಳಿಲ್ಲದ ನಿರ್ವಹಣೆ ನಿನ್ನೆಯ ಪಂದ್ಯದಲ್ಲಿ ಎದ್ದು ಕಾಣುತ್ತಿತ್ತು ಎಂದು ಹೇಳಿದ್ದಾರೆ.

ಪಾಕಿಸ್ತಾನ ಮೊದಲು ಬ್ಯಾಟ್​ ಆಯ್ಕೆ ಮಾಡಿಕೊಂಡು ಕನಿಷ್ಠ 260 ಸ್ಕೋರ್​ ಮಾಡಿದ್ದರೆ ಸಾಕಿತ್ತು. ಮೊದಲು ರನ್​ ಗಳಿಕೆ ಮಾಡುವುದಕ್ಕಿಂತ ನಂತರ ಅದನ್ನು ಬೆನ್ನಟ್ಟುವ ಒತ್ತಡವಿದೆಯಲ್ಲ ಅದು ತುಂಬ ಮುಖ್ಯ. ಪಾಕ್ ತಂಡ ಇದನ್ನು ಅರ್ಥ ಮಾಡಿಕೊಂಡಿದ್ದರೆ ನಿನ್ನೆಯ ಪಂದ್ಯದ ಫಲಿತಾಂಶ ಬೇರೆಯದೇ ಆಗುತ್ತಿತ್ತು ಎಂದಿದ್ದಾರೆ.

Leave a Reply

Your email address will not be published. Required fields are marked *