ಮಂಡ್ಯ: ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ದೇಹ ಅಪ್ಪಟ ಬಂಗಾರ, ಆದರೆ ಕಿವಿ ಮಾತ್ರ ಹಿತ್ತಾಳೆ ಎಂದು ಮಾಜಿ ಸಂಸದ ಶಿವರಾಮೇಗೌಡ ಟೀಕಿಸಿದ್ದಾರೆ.
ನಾಗಮಂಗಲದಲ್ಲಿ ಮಾತನಾಡಿದ ಅವರು, ನಮ್ಮಲ್ಲೂ ಕೆಲ ಭಟ್ಟಂಗಿಗಳು ಇದ್ದಾರೆ. ಯಾರೇನೇ ಹೇಳಿದರೂ ಕೇಳಿ ಬಿಡುತ್ತಾರೆ. 20 ವರ್ಷ ಅಧಿಕಾರ ಸಿಗದ ನನಗೆ ಜೆಡಿಎಸ್ ಎಂಪಿ ಮಾಡಿದೆ. ಕುಮಾರಸ್ವಾಮಿ, ದೇವೇಗೌಡರು ಹಾಗೂ ನನ್ನ ಮಧ್ಯೆ ಯಾವುದೇ ಅಸಮಾಧಾನ ಇಲ್ಲ. ಸಣ್ಣಪುಟ್ಟ ಅಸಮಾಧಾನ ಇದ್ದರೆ ಸರಿಪಡಿಸಿಕೊಳ್ಳುತ್ತೇವೆ ಎಂದರು.
ದೊಡ್ಡವರಿಗೆ ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡುವ ಅಧಿಕಾರ ಇದೆ. ನನ್ನನ್ನು ಸಂಸದನನ್ನಾಗಿ ಮಾಡಿದ್ದಕ್ಕೆ ನನಗೆ ಕೃತಜ್ಞತೆ ಇದೆ. ಅದಕ್ಕೆ ಕುಮಾರಸ್ವಾಮಿ ವಿರುದ್ಧ ತುಟಿ ಬಿಚ್ಚದೆ ಇದ್ದೇನೆ. ಆ ಬಗ್ಗೆ ಕುಮಾರಸ್ವಾಮಿ ಅವರ ಬಳಿ ಮಾತನಾಡುವುದಕ್ಕೆ ನನಗೆ ಸಮಯ ಸಿಕ್ಕಿಲ್ಲ. ಡಿಕೆಶಿ ವಿಚಾರವಾಗಿ ಡೆಲ್ಲಿಗೆ ಹೋಗಿದ್ದರಿಂದ ಸಮಯ ಸಿಗಲಿಲ್ಲ. ಕುಮಾರಸ್ವಾಮಿ, ದೇವೇಗೌಡರ ದೇಹ ಬಂಗಾರ ಆದರೆ ಕಿವಿ ಹಿತ್ತಾಳೆಯಾಗಿದ್ದರಿಂದಾಗಿ ಭಟ್ಟಂಗಿಗಳ ಮಾತು ಕೇಳುತ್ತಾರೆ ಎಂದು ಹೇಳಿದರು.
ದೇವೇಗೌಡರು ಹಲವು ಒಕ್ಕಲಿಗ ನಾಯಕರನ್ನು ಬೆಳೆಸಿದ್ದಾರೆ. ನನ್ನ ಮುಂದೆ ಬೇರೆ ಯಾವುದೇ ಅವಕಾಶ ಇಲ್ಲ. ನಾನು ಜೆಡಿಎಸ್ ಪಕ್ಷದಲ್ಲೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು. (ದಿಗ್ವಿಜಯ ನ್ಯೂಸ್)