ಕಾಫಿ, ಅಡಕೆ, ತೆಂಗು ಬೆಳೆಗಾರರನ್ನು ನಿರ್ಲಕ್ಷಿಸಿದ ಸಂಸದೆ ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಫಿ, ತೆಂಗು, ಅಡಕೆ ಬೆಳೆಗೆ ತಗುಲಿರುವ ರೋಗಗಳು ಬೆಳೆಗಾರರನ್ನು ನಷ್ಟಕ್ಕೀಡುಮಾಡಿವೆ. ಆದರೆ ಸಂಸದೆ ಶೋಭಾ ಕರಂದ್ಲಾಜೆ ಜಿಲ್ಲೆಯ ಯಾವುದೇ ಸಮಸ್ಯೆಗಳಿಗೂ ಸ್ಪಂದಿಸಿಲ್ಲ ಎಂದು ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ ದೂರಿದರು.

ಜಿಲ್ಲೆಯಲ್ಲಿ ಒತ್ತುವರಿ ಸಮಸ್ಯೆ ಜನರ ನೆಮ್ಮದಿಗೆ ಭಂಗ ತಂದಿದೆ. ಆದರೆ ಸಂಸದೆ ತಮಗೂ ಈ ಸಮಸ್ಯೆಗೂ ಸಂಬಂಧವೇ ಇಲ್ಲ ಎಂಬಂತಿದ್ದರು. ಸಂಸತ್​ನಲ್ಲೂ ಈ ಬಗ್ಗೆ ಧ್ವನಿಯೆತ್ತಿಲ್ಲ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಸಂಸದೆ ನಿಷ್ಪ್ರಯೋಜಕರೆಂದು ಅವರ ಪಕ್ಷದವರೇ ಗೋ ಬ್ಯಾಕ್ ಶೋಭಾ ಪ್ರತಿಭಟನೆ ನಡೆಸಿದ್ದಾರೆ. ಸಂಸದೆ ಈಗ ಪ್ರಧಾನಿ ಮೋದಿ ಅವರ ಫೋಟೊ ತೋರಿಸಿ ಮತಯಾಚಿಸುತ್ತಿರುವುದು ನಾಚಿಕೆಗೇಡು ಎಂದು ಹೇಳಿದರು.

ಕುದುರೆಮುಖದಲ್ಲಿ ಕಮಾಂಡೋ ತರಬೇತಿ ಕೇಂದ್ರ ಅಥವಾ ಶಿಕ್ಷಣ ಸಂಸ್ಥೆ ಸ್ಥಾಪನೆ ಇಲ್ಲವೇ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶವಿದ್ದರೂ ಆ ಬಗ್ಗೆ ಚಿಂತನೆ ನಡೆಸಿಲ್ಲ. ಬೆಳೆಗಾರರ ಪರವಾದ ಗೋರಕ್​ಸಿಂಗ್ ವರದಿ ಅನುಷ್ಠಾನಕ್ಕೂ ಶ್ರಮಿಸಬಹುದಿತ್ತು. ಕರಗಡ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಜನರ ಜತೆ ರ್ಚಚಿಸಿ ಸ್ಪಂದಿಸಬಹುದಿತ್ತು. ಆದರೆ ಈ ಬಗ್ಗೆ ಅವರಿಗೆ ಮಾಹಿತಿಯೇ ಇಲ್ಲ ಎಂದು ಆಕ್ಷೇಪಿಸಿದರು. ಸಂಸದರ ಆದರ್ಶ ಗ್ರಾಮ ಯೋಜನೆಯಡಿ ದತ್ತು ತೆಗೆದುಕೊಂಡ ಮೂಡಿಗೆರೆ ತಾಲೂಕಿನ ದಾರದಹಳ್ಳಿಯಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಿನಿ ವಿಮಾನ ನಿಲ್ದಾಣಕ್ಕೆ ವಿಧಾನಪರಿಷತ್ ಸದಸ್ಯೆಯಾಗಿ ನಾನು ಪ್ರಸ್ತಾವನೆ ಸಲ್ಲಿಸಿದ್ದು, ರಾಜ್ಯದಿಂದ ಕೇಂದ್ರಕ್ಕೆ ಕಳಿಸಿಕೊಡಲಾಗಿತ್ತು. ಆ ಯೋಜನೆಯೂ ನನೆಗುದಿಗೆ ಬಿದ್ದಿದೆ. ಸಿದ್ದರಾಮಯ್ಯ ನೇತೃತ್ವದ ಹಾಗೂ ಇಂದಿನ ಮೈತ್ರಿ ಸರ್ಕಾರ ತಂದಿರುವ ಜನಪರ ಯೋಜನೆಗಳು ಒಂದಲ್ಲಾ ಒಂದು ರೀತಿ ಜನರನ್ನು ತಲುಪಿವೆ ಎಂದರು.

ಸಚಿವರಾಗಿದ್ದಾಗ ಉತ್ತಮ ಕೆಲಸ ಮಾಡಿ ಗುರುತಿಸಿಕೊಂಡಿರುವ ಪ್ರಮೋದ್ ಮಧ್ವರಾಜ್ ಪರ ಜನ ಒಲವು ತೋರುತ್ತಿದ್ದಾರೆ. ಹೀಗಾಗಿ ಅವರ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.