ಅಕ್ರಮ ಆಸ್ತಿ ಮಾಡಿದ್ದರೆ ಜನರಿಗೆ ಹಂಚುವೆ

ಚಾಮರಾಜನಗರ: ನಾನು ಅಧಿಕಾರದಲ್ಲಿದ್ದಾಗ ಅಕ್ರಮವಾಗಿ ಆಸ್ತಿ ಮಾಡಿರುವ ಕುರಿತು ದಾಖಲೆ ನೀಡಿದರೆ, ಆ ಆಸ್ತಿಯನ್ನೆಲ್ಲ ಬುದ್ಧ, ಬಸವ, ಅಂಬೇಡ್ಕರ್ ಪಾದಕ್ಕೆ ಸಮರ್ಪಣೆ ಮಾಡಿ, ಜನರಿಗೆ ಹಂಚಿ ಬಿಡುತ್ತೇನೆ ಎಂದು ಮಾಜಿ ಶಾಸಕ ಸಿ.ಗುರುಸ್ವಾಮಿ ತಿಳಿಸಿದರು.

ಒಂದು ವೇಳೆ ನೀವು ಮೂವರು ಅಧಿಕಾರವಧಿಯಲ್ಲಿದ್ದಾಗ ಅಕ್ರಮವಾಗಿ ಆಸ್ತಿ ಪಾಸ್ತಿ ಮಾಡಿದ್ದರೆ ಅದನ್ನು ಬುದ್ಧ, ಬಸವ, ಅಂಬೇಡ್ಕರ್ ಪಾದಕ್ಕೆ ಅರ್ಪಿಸುತ್ತೀರ ಎಂದು ಸುದ್ದಿಗೋಷ್ಠಿಯಲ್ಲಿ ಸಂಸದ ಆರ್.ಧ್ರುವನಾರಾಯಣ, ನಗರಸಭಾ ಮಾಜಿ ಅಧ್ಯಕ್ಷ ಎಸ್.ನಂಜುಂಡಸ್ವಾಮಿ ಹಾಗೂ ಮಾಜಿ ಶಾಸಕ ಎಸ್.ಬಾಲರಾಜ್ ಅವರಿಗೆ ಸವಾಲು ಹಾಕಿದರು.

ಬಿ.ರಾಚಯ್ಯ ಅವರು ಮಂತ್ರಿಯಾಗಿದ್ದ ಅವಧಿಯಲ್ಲಿ ದಲಿತರ ಅಭಿವೃದ್ಧಿಗೆ ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಹೆಸರಿನಲ್ಲಿ ನೀಡಿದ್ದ 20 ಎಕರೆ ಭೂಮಿಯನ್ನು ಆರ್.ಧ್ರುವನಾರಾಯಣ ನೇತೃತ್ವದಲ್ಲಿ ಪ್ರಭಾವ ಬಳಸಿ ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಈ ಸಂಬಂಧ ನನ್ನ ಬಳಿ ಆಧಾರಗಳಿವೆ ಎಂದರು.

ಮಾಜಿ ಶಾಸಕ ಎಸ್.ಬಾಲರಾಜ್, ನಗರಸಭಾ ಮಾಜಿ ಅಧ್ಯಕ್ಷ ಎಸ್.ನಂಜುಂಡಸ್ವಾಮಿ ಅವರು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಅದನ್ನು ಬಿಟ್ಟು ಹೊಸ ಆರೋಪಗಳಿದ್ದರೆ ಹೇಳಿ. ಸಂಸದರ ಸಾಧನೆ ಕುರಿತ ಪುಸ್ತಕವನ್ನು ಐ ಸೆಟ್ ಸಂಸ್ಥೆ ಮುದ್ರಿಸಿ ಪ್ರಕಟ ಮಾಡಿದೆ ಎಂದು ಹೇಳುವ ಕಾಂಗ್ರೆಸ್ ಪಕ್ಷದ ಮುಖಂಡರೇ ಪುಸ್ತಕ ಮುದ್ರಿಸಿ ಕ್ಷೇತ್ರಕ್ಕೆ ಹಂಚುವಷ್ಟು ಹಣ ಸಂಸ್ಥೆಯಲ್ಲಿ ಇದೆಯಾ ಎಂದು ಪ್ರಶ್ನಿಸಿದರು.

ಜಿಲ್ಲೆಯ 40 ಗ್ರಾಮಪಂಚಾಯಿತಿಗಳಲ್ಲಿ ನರೇಗಾ ಯೋಜನೆಯ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಕುರಿತು ಪ್ರಕರಣ ದಾಖಲಾಗಿದೆ. ಈ ಕುರಿತು ಸೂಕ್ತ ಕ್ರಮಕೈಗೊಳ್ಳುವ ಬದಲು ಸಂಸದ ಆರ್.ಧ್ರುವನಾರಾಯಣ ಅವರು ಭ್ರಷ್ಟರನ್ನು ರಕ್ಷಣೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ ಹಾಗೂ ನಂಜುಂಡಸ್ವಾಮಿ ಅವರು ಮಾಡಿರುವ ಕೆಲಸ ಎಲ್ಲರಿಗೂ ಗೊತ್ತು ಎಂದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹನುಮಂತಶೆಟ್ಟಿ, ಶಿವಕುಮಾರ್, ತೀರ್ಥಪ್ರಸಾದ್, ಬಸವರಾಜು ಇದ್ದರು.