ಮಾಜಿ ಸಚಿವ ರಮೇಶ ವಿರುದ್ಧ ಸ್ಪೀಕರ್‌ಗೆ ದೂರು

ಬೆಳಗಾವಿ: ಗೋಕಾಕ ಶಾಸಕ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಕಾಂಗ್ರೆಸ್ ಜತೆ ಇಲ್ಲ. ಅವರ ವಿರುದ್ಧ ಸ್ಪೀಕರ್‌ಗೆ ದೂರು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಪಟ್ಟಣದಲ್ಲಿ ಭಾನುವಾರ ಬೆಳಗ್ಗೆ ಅವರು ಸುದ್ದಿಗಾರರ ಜತೆ ಮಾತನಾಡಿ, ಕಳೆದ 20 ವರ್ಷಗಳಿಂದ ಗೋಕಾಕ ವಿಧಾನಸಭೆ ಕ್ಷೇತ್ರವು ರಮೇಶ ಜಾರಕಿಹೊಳಿ ಅವರ ಹಿಡಿತದಲ್ಲಿದೆ. ಈ ಬಾರಿ ರಮೇಶ ಜಾರಕಿಹೊಳಿ ನಮ್ಮ ಜತೆಗಿಲ್ಲ ಎಂಬ ಕಾರಣದಿಂದಾಗಿ ಪಟ್ಟಣದಲ್ಲಿ ಪ್ರಚಾರ ನಡೆಸುತ್ತಿರುವುದಾಗಿ ತಿಳಿಸಿದರು.

ಮಾಜಿ ಸಚಿವ ರಮೇಶ ಜಾರಕಿಹೊಳಿ ಬಿಜೆಪಿ ಬೆಂಬಲಿಸುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚನೆ ನೀಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಸತೀಶ ಜಾರಕಿಹೊಳಿ ಅವರು, ರಮೇಶ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್‌ಗೆ ದೂರು ನೀಡಲಾಗುವುದು. ಈಗಾಗಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ದೂರು ನೀಡಿದ್ದಾರೆ. ಆದರೆ ಈಗ ಅದು ಪೆಂಡಿಂಗ್ ಇದೆ ಎಂದರು.

ಗೋಕಾಕ ನಗರದಲ್ಲಿ ಶನಿವಾರ ಸಭೆ ಮಾಡಿ ಬಿಜೆಪಿ ಬೆಂಬಲಿಸುವಂತೆ ಸಾರ್ವಜನಿಕರು, ಬೆಂಬಲಿಗರು, ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಬೇರೆ ಬೇರೆ ಸ್ಥಳಗಳಿಗೆ ತೆರಳಿ ಬಿಜೆಪಿ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.ರಮೇಶ ಜಾರಕಿಹೊಳಿ ಪಕ್ಷದಿಂದ ಹೊರಗೆ ಹೋದಂತಾಗಿದೆ. ಅವರ ಮೇಲೆ ಕ್ರಮ ಕೈಗೊಂಡರೂ ಅಷ್ಟೇ. ಬಿಟ್ಟರೂ ಅಷ್ಟೇ ಎಂದರು.

ಲೋಕಸಭಾ ಚುನಾವಣೆ ಸೆಮಿಫೈನಲ್ ಪಂದ್ಯ

ಗೋಕಾಕ ತಾಲೂಕಿನಲ್ಲಿ ಕಾಂಗ್ರೆಸ್ ನಾನೇ ಬೆಳೆಸಿದ್ದೇನೆ. ರಮೇಶ ಅವರು ಈಗ ಜೆಪಿಗೆ ಬೆಂಬಲಿಸಬೇಕು ಎಂದು ಹೇಳುತ್ತಿರುವುದರಿಂದ ಸ್ವಾಭಾವಿಕವಾಗಿ ಗೊಂದಲ ನಿರ್ಮಾಣವಾಗಿದೆ. ಈ ಲೋಕಸಭೆ ಚುನಾವಣೆ ನಮಗೆ ಸೆಮಿಫೈನಲ್ ಇದ್ದಂತೆ. ಮುಂದೆ ಫೈನಲ್ (ಸರ್ಕಾರ ಉರುಳಿದರೆ ವಿಧಾನಸಭೆ ಉಪಚುನಾವಣೆ)ಪಂದ್ಯಾವಳಿ ನಡೆಯಲಿದೆ. ಅದಕ್ಕಾಗಿ ಇನ್ನೂ 6 ತಿಂಗಳ ಕಾಲಾವಕಾಶವಿದ್ದು, ಸಿದ್ಧತೆಗಳನ್ನು ಮಾಡಿಕೊಳ್ಳುತ್ತೇವೆ ಎಂದು ಸತೀಶ ತಿಳಿಸಿದರು. .ಲೋಕಸಭಾ ಚುನಾವಣೆ ಮುಗಿದ ಬಳಿಕ , ಸರ್ಕಾರ ಉರುಳಲಿದೆ ಎಂದು ಅಪರೋಕ್ಷವಾಗಿ ಸತೀಶ ಜಾರಕಿಹೊಳಿ ಹೇಳಿದ್ದಾರೆ.