ಸರ್ಕಾರ ಬೀಳಲು ಎಚ್‌ಡಿಕೆ ಕಾರಣ, ಬೇಕಿದ್ದರೆ ಉಪಚುನಾವಣೆಯಲ್ಲಿ ಅವರ ಕುಟುಂಬದಿಂದ 10 ಜನ ನಿಲ್ಲಲಿ: ಎನ್‌ ಚಲುವರಾಯ ಸ್ವಾಮಿ

ಬೆಂಗಳೂರು: ಸರ್ಕಾರ ಬೀಳುವುದಕ್ಕೆ ಎಚ್‌ ಡಿ ಕುಮಾರಸ್ವಾಮಿಯೇ ಕಾರಣ. ನಾನು ರೇವಣ್ಣ ಎಂದು ಎಲ್ಲೂ ಹೇಳಿಲ್ಲ. ರೇವಣ್ಣ ಅಮಾಯಕ ಎಂದು ಕುಮಾರಸ್ವಾಮಿ ಸದನದಲ್ಲಿ ಹೇಳಿದರು. ಹಾಗಿದ್ದರೆ ಎಂಟಿಬಿ‌ ನಾಗರಾಜ್ ಇಲಾಖೆಯಲ್ಲಿ, ರೇವಣ್ಣ ಹಸ್ತಕ್ಷೇಪ ವಿಲ್ಲದೆ, ಕುಮಾರಸ್ವಾಮಿ ಸಹಿ ಮಾಡದೆ, ಅಧಿಕಾರಿಗಳ ವರ್ಗಾವಣೆ ಆಯ್ತಾ? ಎಂದು ಮಾಜಿ ಸಚಿವ ಎನ್‌ ಚಲುವನಾರಾಯಣ ಸ್ವಾಮಿ ಕಿಡಿಕಾರಿದ್ದಾರೆ.

ಕುಮಾರಸ್ವಾಮಿಯವರು ಈ ಸರ್ಕಾರ ಬೀಳೋಕೆ ಕಾರಣ. ಮುಂಬರುವ ಉಪ‌ಚುನಾವಣೆಯಲ್ಲೂ ಅವರ ಕುಟುಂಬದಿಂದ ಹತ್ತು ಜನ ಬೇಕಿದ್ದರೆ ನಿಲ್ಲಲಿ. ದೇವೇಗೌಡರ ಬಗ್ಗೆ ಇವತ್ತು ನಮಗೆ ಗೌರವ ಇದೆ. ಆದರೆ, ರಾಜಕೀಯ ತೀರ್ಮಾನಗಳಿಗಷ್ಟೇ ನಮ್ಮ ವಿರೋಧ. ಕುಮಾರಸ್ವಾಮಿಯವರನ್ನು ಯಾರು ಕಾಲು ಎಳೆದಿಲ್ಲ. ಇವರಿಂದಲೇ ಸರ್ಕಾರ ಬಿದ್ದಿದೆ ಅಷ್ಟೇ. ಸಿದ್ದರಾಮಯ್ಯ ಈ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ಕೊಟ್ಟಿದ್ದರು. ಆದರೆ, ಅದನ್ನು ಇವರು ಸರಿಯಾಗಿ ಸದುಪಯೋಗ ಪಡೆಸಿಕೊಂಡಿಲ್ಲ ಎಂದು ದೂರಿದರು.

ನಾವು ದೇವೇಗೌಡರ ವಿರುದ್ಧ ಮಾತನಾಡಿದರೆ ಸಮುದಾಯದ ನಾಯಕನ ವಿರುದ್ಧ ಮಾತನಾಡಿದರು ಎಂದು ಬಿಂಬಿಸುತ್ತಾರೆ. ಈಗ ಮಾತನಾಡುತ್ತಿರುವುದರ ಹಿಂದೆ ರಾಜಕೀಯ ಇದೆ. ಉಪಚುನಾವಣೆ ದೃಷ್ಟಿಯಿಂದ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನ ಇರಬಹುದು ಸರಿ. ಆದರೆ, ಜೆಡಿಎಸ್ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದು ಯಾಕೆ? ಕುಮಾರಸ್ವಾಮಿ 14 ತಿಂಗಳು ಸಿಎಂ ಆಗಿದ್ದರೆ ಅದಕ್ಕೆ ಸಿದ್ದರಾಮಯ್ಯನೇ ಕಾರಣ ಎಂದು ಹೇಳಿದರು.

ಅಧಿಕಾರ ಇದ್ದಾಗ ನಮ್ಮ ಜಿಲ್ಲೆಯಲ್ಲಿ ಪುಟ್ಟರಾಜು ನಮ್ಮ ಬಗ್ಗೆ ಮಾತನಾಡುತ್ತಿದ್ದರು. ಈಗ ಅವರಿಗೆ ಅಧಿಕಾರ ಹೋಗಿದೆ ಎಂದು ಅವರ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ಸುರೇಶ್ ಗೌಡರು ತುಂಬಾ ದೊಡ್ಡವರು. ಅವರ ಬಗ್ಗೆ ನಾನು ಯಾಕೆ ಮಾತನಾಡಲಿ? ನಾನು ಯಾವುದೇ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ನಾವು ಕುಮಾರಸ್ವಾಮಿ ಅವರನ್ನು ಜಗನ್ ಮೋಹನ್ ರೆಡ್ಡಿ ಸ್ಥಾನದಲ್ಲಿ ನೋಡಬೇಕು ಅಂದುಕೊಂಡಿದ್ದೆವು. ಈ ರೀತಿ ಸಿಎಂ ಆಗಬೇಕು ಅಂದುಕೊಂಡಿರಲಿಲ್ಲ. ಚಂದ್ರಬಾಬು ನಾಯ್ಡು ವಿರುದ್ಧ ರಾಜಕಾರಣ ಮಾಡಿ ಸಕ್ಸಸ್ ಆದರು. ಆ ರೀತಿ ಕುಮಾರಸ್ವಾಮಿ ರಾಜಕಾರಣ ಮಾಡಲಿ ಎಂದು ತಿಳಿಸಿದರು.

ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಪ್ರಮುಖ ಸ್ಥಾನದಲ್ಲಿ ಇದ್ದ ಕಾಂಗ್ರೆಸ್ ಸಚಿವರು ಕ್ಯಾಬಿನೆಟ್ ಸಭೆಗಳಲ್ಲಿ ಏನಾಯಿತು ಎಂದು ಹೇಳಬೇಕು. ನಾನು ಜೆಡಿಎಸ್‌ನಲ್ಲಿ ಇದ್ದವನು. ಯಾವ ರೀತಿ ಬಳಸಿಕೊಂಡರು ಎಂಬುದು ಗೊತ್ತಿದೆ. ನಿಖಿಲ್ ಚುನಾವಣೆಗೆ ನಿಂತಾಗ ಚಲುವರಾಯಸ್ವಾಮಿ ಮತ್ತು ನರೇಂದ್ರ ಸ್ವಾಮಿ ಜತೆ ಮಾತನಾಡೋಣ ಎಂದು ಸಿದ್ದರಾಮಯ್ಯ ಹೇಳಿದರು. ಆದರೆ, ಅವರ ಸಹಕಾರ ಇಲ್ಲದೆಯೇ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಹೇಳಿದರು. ಈಗ ಸಿದ್ದರಾಮಯ್ಯ ಸೋಲಿಸಿದರು ಎಂದರೆ ಹೇಗೆ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *