ನಾನು ಇಂದು ಸಿಸಿಬಿ ಕಚೇರಿಗೆ ಹೋಗುತ್ತೇನೆ: ಜನಾರ್ದನ ರೆಡ್ಡಿ

ಬೆಂಗಳೂರು: ಆ್ಯಂಬಿಡೆಂಟ್ ಕಂಪನಿ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ನಾಲ್ಕು ದಿನಗಳ ಬಳಿಕ ಮಾಧ್ಯಮಗಳಿಗೆ ವಿಡಿಯೋ ಸಂದೇಶ ಕಳುಹಿಸುತ್ತಿದ್ದು, ತಾವು ಇಂದು ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ಮಾಧ್ಯಮಗಳಿಗೆ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಜರ್ನಾರ್ದನ ರೆಡ್ಡಿ ಅವರು ತಮ್ಮ ವಕೀಲ ಚಂದ್ರಶೇಖರ್​ ಅವರೊಂದಿಗೆ ಕಾಣಿಸಿಕೊಂಡಿದ್ದು, ತಮ್ಮ ವಿರುದ್ಧದ ಆರೋಪ ಸುಳ್ಳು, ಕಳೆದ 15-20 ದಿನಗಳಿಂದ ಬೆಂಗಳೂರಿನ ನನ್ನ ಮನೆ ಸುತ್ತ ಆತಂಕದ ವಾತಾವರಣ ಸೃಷ್ಟಿ ಮಾಡಲಾಗಿದೆ. ನನ್ನ ವಿರುದ್ಧ ತಪ್ಪು ಮಾಹಿತಿ ಕೊಡುತ್ತಿದ್ದಾರೆ. ನಾನು ಎಲ್ಲೂ ಹೋಗಿಲ್ಲ, ಬೆಂಗಳೂರಿನಲ್ಲೇ ಇದ್ದೇನೆ. ಪೊಲೀಸರು ಪೂರ್ವಗ್ರಹ ಪೀಡಿತರಾಗಿ ವರ್ತಿಸುತ್ತಿದ್ದಾರೆ. ಸಿಸಿಬಿ ಪೊಲೀಸರು ನಿನ್ನೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಿದ್ದಾರೆ. ಅದರಂತೆ ಇಂದು ನಾನು ವಿಚಾರಣೆಗೆ ಹಾಜರಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಯಾವುದೇ ತಪ್ಪು ಮಾಡಿಲ್ಲ

ಪೊಲೀಸರ ಮೇಲೆ ನನಗೆ ಅಪಾರವಾದ ಗೌರವಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿ ನನಗೆ ಯಾವುದೇ ಆತಂಕ ಇಲ್ಲ. ಡೀಲ್​ ಮಾಡುವಂತಹ ಪರಿಸ್ಥಿತಿಯನ್ನು ನನಗೆ ಭಗವಂತ ಕೊಟ್ಟಿಲ್ಲ. ಯಾರೊಬ್ಬರ ಬಳಿ ಕೈಚಾಚುವಂತಹ ವ್ಯಕ್ತಿಯೂ ನಾನಲ್ಲ ಎಂದು ರೆಡ್ಡಿ ತಮ್ಮ ವಿರುದ್ಧದ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಜನಾರ್ದನ ರೆಡ್ಡಿ ಪರ ವಕೀಲ ಚಂದ್ರಶೇಖರ್​ ಮಾತನಾಡಿ, ನಾವು ಮನವಿ ಮಾಡಿದ ನಂತರ ನೋಟಿಸ್​ ಜಾರಿಯಾಗಿದೆ. ವಿಚಾರಣೆಗೆ ಸಹಕರಿಸಲು ನಾವು ಸಿದ್ಧ ಎಂದು ಹೇಳಿದ್ದೇವೆ. ವಿನಾಕಾರಣ ಪ್ರಕರಣದಲ್ಲಿ ರೆಡ್ಡಿಯವರ ಹೆಸರನ್ನು ಸೇರಿಸಲಾಗಿದೆ ಎಂದು ತಿಳಿಸಿದರು.

ಕೋರ್ಟ್ ಮೊರೆ ಹೋದ ರೆಡ್ಡಿ

ರೆಡ್ಡಿಗೆ ಚಿನ್ನದ ಖೆಡ್ಡಾ!

ಬಳ್ಳಾರಿಯ ಜನಾರ್ದನ ರೆಡ್ಡಿ ನಿವಾಸದ ಮೇಲೆ ಸಿಸಿಬಿ ದಾಳಿ