ಗಾಲಿ ಜನಾರ್ದನ ರೆಡ್ಡಿ ನಿವಾಸ ಚಿತ್ರದುರ್ಗದ ರಾಂಪುರಕ್ಕೆ ಶಿಫ್ಟ್​..?

ಚಿತ್ರದುರ್ಗ: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಗಣಿ ಪ್ರಕರಣದ ಆರೋಪಿ ಗಾಲಿ ಜನಾರ್ದನ ರೆಡ್ಡಿ ತಮ್ಮ ನಿವಾಸವನ್ನು ಬೆಂಗಳೂರಿನಿಂದ ಚಿತ್ರದುರ್ಗದ ರಾಂಪುರಕ್ಕೆ ಬದಲಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳ ಗಡಿಯಲ್ಲಿರುವ ರಾಂಪುರಕ್ಕೆ ವಾಸ್ತವ್ಯ ಬದಲಿಸಲು ಜನಾರ್ದನ ರೆಡ್ಡಿ ಸಿದ್ಧತೆ ನಡೆಸಿದ್ದಾರೆ. ರಾಂಪುರ ಗ್ರಾಮದಲ್ಲಿರುವ ಅಮೃತ ಹೋಟೆಲ್​ಗೆ ಗುರುವಾರ ಶಿಫ್ಟ್​ ಆಗಲಿದ್ದಾರೆ ಎಂದು ತಿಳಿದು ಬಂದಿದೆ. ರಾಂಪುರ ಗ್ರಾಮ ಬಳ್ಳಾರಿ ನಗರದಿಂದ ಕೇವಲ 30 ಕಿ.ಮೀ. ದೂರವಿದೆ.

ಜನಾರ್ದನ ರೆಡ್ಡಿ ಅವರು ಹೋಟೆಲ್​ ಮತ್ತು ಹೋಟೆಲ್​ಗೆ ಹೊಂದಿಕೊಂಡಿರುವ ಮನೆಯಲ್ಲಿ ಉಳಿಯಲು ಪ್ಲ್ಯಾನ್​ ಮಾಡಿದ್ದಾರೆ. ಈ ಸಂಬಂಧ ಈಗಾಗಲೇ ರೆಡ್ಡಿ ಸಹೋದರ ಸೋಮಶೇಖರ್​ ರೆಡ್ಡಿ ಮತ್ತು ಮಾಜಿ ಸಂಸದ ಸಣ್ಣ ಫಕೀರಪ್ಪ ಅವರು ರೆಸಾರ್ಟ್​ ಮಾಲೀಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಗಣಿ ಅಕ್ರಮ ಪ್ರಕರಣದ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿಗೆ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್​ ನಿರ್ಬಂಧ ಹೇರಿದೆ. ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ ಪಾರಿಜಾತ ಅಪಾರ್ಟ್​ಮೆಂಟ್​ನಲ್ಲಿ ವಾಸಿಸುತ್ತಿದ್ದಾರೆ. ಈಗ ಬಳ್ಳಾರಿಯಲ್ಲಿ ಮತ್ತೊಮ್ಮೆ ಕಮಲ ಅರಳಿಸಲು ಪ್ಲ್ಯಾನ್​ ಮಾಡಿರುವ ಗಣಿ ಧಣಿ ಬಳ್ಳಾರಿ ನಗರಕ್ಕೆ ತೀರಾ ಸಮೀಪವಿರುವ ರಾಂಪುರ ಗ್ರಾಮಕ್ಕೆ ಶಿಫ್ಟ್​ ಆಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *