ಬಿಜೆಪಿಗೆ ಸೇರ್ಪಡೆಯಾದ ಬಾಬುರಾವ್​ ಚಿಂಚನಸೂರ್​

ಬೆಂಗಳೂರು: ಇತ್ತೀಚೆಗೆ ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಕೋಲಿ ಸಮಾಜದ ಮುಖಂಡ ಮತ್ತು ಮಾಜಿ ಸಚಿವ ಬಾಬುರಾವ್​ ಚಿಂಚನಸೂರ್​ ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಅವರು ಬಾಬುರಾವ್​ ಚಿಂಚನಸೂರ್​ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಚಿತ್ತಾಪುರ ಕ್ಷೇತ್ರದಿಂದ ಒಮ್ಮೆ ಹಾಗೂ ಗುರುಮಿಠಕಲ್​ ವಿಧಾನಸಭೆ ಕ್ಷೇತ್ರದಿಂದ 2 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. 1999ರಲ್ಲಿ ಎಚ್​.ಎಂ. ಕೃಷ್ಣ ಸಂಪುಟದಲ್ಲಿ ಕೆಲ ದಿನಗಳ ಕಾಲ 7 ಖಾತೆಗಳನ್ನು ಹೊಂದಿದ್ದರು. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇವರು ಸೋಲನುಭವಿಸಿದ್ದರು. ತಮ್ಮ ಸೋಲಿಗೆ ಕಾಂಗ್ರೆಸ್​ ನಾಯಕರೇ ಕಾರಣ, ನಮ್ಮ ಸಮಾಜಕ್ಕೆ ನ್ಯಾಯ ಸಿಗಬೇಕಿದೆ ಎಂದು ತಿಳಿಸಿದ್ದರು.

ಆ ನಂತರ ಮಾತನಾಡಿದ ಬಿಎಸ್​ವೈ ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ, ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ವಿಶೇಷ ಪ್ರಯತ್ನದಿಂದ ಬಾಬುರಾವ್ ಚಿಂಚನಸೂರ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಚಿಂಚನಸೂರ್ ಸೇರ್ಪಡೆಯಿಂದ ಕಲಬುರಗಿ ಜಿಲ್ಲೆಯ ಸುತ್ತ ಮುತ್ತ ಬಿಜೆಪಿಗೆ ಆನೆ ಬಲ ಬಂದಂತಾಗಿದೆ. ರಾಜ್ಯ ಮಟ್ಟದಲ್ಲಿ ಚಿಂಚನಸೂರಿಗೆ ಸ್ಥಾನಮಾನ ನೀಡಲು ಚಿಂತನೆ ಮಾಡಿದ್ದೇವೆ ಎಂದು ತಿಳಿಸಿದರು.

ಬಿಜೆಪಿಗೆ ಸೇರ್ಪಡೆಯಾದ ನಂತರ ಮಾನಾಡಿದ ಬಾಬುರಾವ್ ಚಿಂಚನಸೂರ್​ ಅವರು ಕಾಂಗ್ರೆಸ್ ಯಾವತ್ತೂ ಕೋಲಿ, ಗಂಗಾಮತ ಹಾಗೂ ಬೆಸ್ತ ಜನಾಂಗವನ್ನ ಗುರುತಿಸಿಲ್ಲ. ಬಿಜೆಪಿ ಸರ್ಕಾರ ನಮ್ಮ ಜನಾಂಗದ ರಾಮನಾಥ್ ಕೋವಿಂದ್ ಅವರಿಗೆ ರಾಷ್ಟ್ರಪತಿ ಸ್ಥಾನ ನೀಡಿದೆ. ಹೈದರಾಬಾದ್ ಕರ್ನಾಟಕದ ಭಾಗದಲ್ಲಿ ನಮ್ಮ‌ ಕೋಲಿ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿದೆ. ಲೋಕಸಭಾ ಚುನಾವಣೆ ಸಮಯದಲ್ಲಿ ಆ ಭಾಗದ ಜನರ ಮನವೊಲಿಸುತ್ತೇನೆ. ಮುಂಬರುವ ಚುನಾವಣೆಗೆ ಇದು ಹೆಚ್ಚಿನ ಬಲ‌ ನೀಡಲಿದೆ ಎಂದು ತಿಳಿಸಿದರು.