10 ವಿಕೆಟ್​ ಕಬಳಿಸಿ ಅನಿಲ್​ ಕುಂಬ್ಳೆ ಇತಿಹಾಸ ನೆನಪಿಸಿದ ವಿದರ್ಭ ಆಟಗಾರ

ನವದೆಹಲಿ: ಐಪಿಎಲ್​ನ ಮಾಜಿ ತಂಡ ಪುಣೆ ವಾರಿಯರ್ಸ್​ ಆಟಗಾರ ಹಾಗೂ ಭಾರತದ ವೇಗದ ಬೌಲರ್​ ಶ್ರೀಕಾಂತ್​ ವಾಘ್​ ಅವರು ಪಂದ್ಯವೊಂದರಲ್ಲೇ 10 ವಿಕೆಟ್​ ಪಡೆಯುವುದರೊಂದಿಗೆ ಟೀಂ ಇಂಡಿಯಾದ ಲೆಜೆಂಡರಿ ಆಟಗಾರ, ಕನ್ನಡಿಗ ಅನಿಲ್​ ಕುಂಬ್ಳೆ ಅವರ ದಾಖಲೆಯನ್ನು 19 ವರ್ಷಗಳ ಬಳಿಕ ಮರು ನೆನಪಿಸಿದ್ದಾರೆ.

ಇಂಗ್ಲೆಂಡ್​ನಲ್ಲಿ ನಡೆದ ನಾರ್ತ್​ ಯಾರ್ಕಶೈರ್​ ಮತ್ತು ಸೂತ್​ ದುರ್ಹಾಮ್​ ಕ್ರಿಕೆಟ್​ ಲೀಗ್​ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಸ್ಟೋಕೆಸ್ಲೇ ಕ್ರಿಕೆಟ್​ ಕ್ಲಬ್​ ಪರ ಆಡಿದ ಎಡಗೈ ಬೌಲರ್​ ಶ್ರೀಕಾಂತ್​ ಅವರು ಮಿಡಲ್ಸ್​ಬ್ರೋ ಕ್ರಿಕೆಟ್​ ಕ್ಲಬ್ ತಂಡದ ಎಲ್ಲಾ ಆಟಗಾರರನ್ನು ತಮ್ಮ ಬೌಲಿಂಗ್​ ಕೈಚಳಕದಿಂದ ಫೆವಲಿಯನ್​ಗೆ ಕಳುಹಿಸಿದರು.​

11.4 ಓವರ್​ ಮಾಡಿದ ಶ್ರೀಕಾಂತ್​ ಕೇವಲ 39ರನ್ನು ನೀಡಿ, 10 ವಿಕೆಟ್​ ಕಬಳಿಸಿದರು. ವಿಶೇಷವಾಗಿ ಮಿಡಲ್ಸ್​ ಬ್ರೋ ತಂಡದ ಆರು ಆಟಗಾರರನ್ನು ಕೇವಲ ಶೂನ್ಯ ಗಳಿಕೆಯಲ್ಲಿ ಫೆವಲಿಯನ್​ಗೆ ಅಟ್ಟಿದರು. ಬ್ಯಾಟಿಂಗ್​ನಲ್ಲೂ ಉತ್ತಮ ಪ್ರದರ್ಶನ ನೀಡಿದ ಶ್ರೀಕಾಂತ್​ ಕೇವಲ 28 ಎಸೆತದಲ್ಲಿ ನಾಲ್ಕು ಸಿಕ್ಸರ್​ ಹಾಗೂ ಒಂದು ಬೌಂಡರಿ ನೆರವಿನೊಂದಿಗೆ ಸ್ಫೋಟಕ 41 ರನ್​ ಗಳಿಸಿದರು.

232 ರನ್​ ಗುರಿ ನೀಡಿದ್ದ ಸ್ಟೋಕೆಸ್ಲೇ ತಂಡ 97 ರನ್​ಗಳಿಗೆ ಮಿಡಲ್ಸ್​ಬ್ರೋ ತಂಡವನ್ನು ಆಲೌಟ್​ ಮಾಡುವ ಮೂಲಕ 135 ರನ್​ಗಳ ಜಯ ಸಾಧಿಸಿತು. ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ ರಣಜಿಯ ವಿದರ್ಭ ತಂಡದ ಆಟಗಾರ ಶ್ರೀಕಾಂತ್​ ಅವರಿಗೆ ಸಹ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದರು.

ಅನಿಲ್​ ಕುಂಬ್ಳೆ ಸಾಧನೆ
ದೆಹಲಿಯಲ್ಲಿ 1999 ರಲ್ಲಿ ಟೀಂ ಇಂಡಿಯಾದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ನಡೆದ ಟೆಸ್ಟ್​ ಪಂದ್ಯದಲ್ಲಿ ಕನ್ನಡಿಗ ಕುಂಬ್ಳೆ ಅವರು ಎರಡನೇ ಇನ್ನಿಂಗ್ಸ್​ನಲ್ಲಿ 10 ವಿಕೆಟ್​ ಪಡೆಯುವುದರೊಂದಿಗೆ ತಂಡಕ್ಕೆ ದಾಖಲೆಯ ಜಯ ತಂದುಕೊಟ್ಟಿದ್ದರು. (ಏಜೆನ್ಸೀಸ್​)