ವೀರೇಂದ್ರ ಸೆಹ್ವಾಗ್​ ಅವರಿಗೆ ಭಯ ಹುಟ್ಟಿಸುತ್ತಿದ್ದ ಆ ಬೌಲರ್​ ಯಾರು ಗೊತ್ತೇ?

ನವದೆಹಲಿ: ತಮ್ಮ ಸ್ಫೋಟಕ ಬ್ಯಾಟಿಂಗ್​ನಿಂದಲೇ ಎದುರಾಳಿ ಬೌಲರ್​ಗೆ ಬೆವರಿಳಿಸುತ್ತಿದ್ದ ಟೀಂ ಇಂಡಿಯಾದ ಮಾಜಿ ಬೌಲರ್​ ಜಗತ್ತಿನ ಸರ್ವಶ್ರೇಷ್ಠ ಬೌಲರ್​ಗಳನ್ನೆಲ್ಲ ಸಮರ್ಥವಾಗಿ ಎದುರಿಸಿ ರನ್​ ಮಳೆ ಸುರಿಸಿದ್ದರು. ಆದರೆ ಅವರು ಕೇವಲ ಓರ್ವ ಬೌಲರ್​ನ ಎಸೆತಗಳನ್ನು ಎದುರಿಸಲು ಮಾತ್ರ ಭಯಪಡುತ್ತಿದ್ದರಂತೆ.

ಹೌದು ಈ ವಿಷಯವನ್ನು ವೀರೇಂದ್ರ ಸೆಹ್ವಾಗ್​ ಅವರು ಲೈವ್​ ವಿಡಿಯೋ ಚಾಟ್​ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದು, ತಮಗೆ ಭಯ ಹುಟ್ಟಿಸಿದ್ದ ಆ ಬೌಲರ್​ ಹೆಸರನ್ನೂ ತಿಳಿಸಿದ್ದಾರೆ. ಪಾಕಿಸ್ತಾನದ ಮಾಜಿ ವೇಗದ ಬೌಲರ್​ ‘ರಾವಲ್ಪಿಂಡಿ ಎಕ್ಸ್​ಪ್ರೆಸ್​’ ಖ್ಯಾತಿ ಶೋಯೆಬ್​ ಅಖ್ತರ್​ ಅವರು ಎಸೆಯುತ್ತಿದ್ದ ಬಾಲ್​ ಎದುರಿಸಲು ಭಯವಾಗುತ್ತಿತ್ತು. ಅವರ ಎಸೆಯುತ್ತಿದ್ದ ಬಾಲ್​ಗಳಲ್ಲಿ ಯಾವುದು ನನ್ನ ಶೂಗೆ ಬಡಿಯುತ್ತದೆ, ತಲೆಗೆ ತಗಲುತ್ತದೆ ಎಂಬುದು ತಿಳಿಯುತ್ತಿರಲಿಲ್ಲ. ಅವರು ನನಗೆ ಹೆಚ್ಚಿನ ಬೌನ್ಸರ್​ಗಳನ್ನು ಎಸೆಯುತ್ತಿದ್ದರು. ಅವರ ಎಸೆತಗಳನ್ನು ಎದುರಿಸಲು ನನಗೆ ಭಯವಾಗುತ್ತಿತ್ತು, ಆದರೂ ಅವರ ಬೌಲಿಂಗ್​ನಲ್ಲೇ ಬೌಂಡರಿ, ಸಿಕ್ಸರ್​ ಹೊಡೆದಾಗ ಹೆಚ್ಚಿನ ಸಂತೋಷವಾಗುತ್ತಿತ್ತು ಎಂದು ತಿಳಿಸಿದ್ದಾರೆ.

ಸೆಹ್ವಾಗ್​ ಅವರೊಂದಿಗೆ ಲೈವ್​ ವಿಡಿಯೋ ಚಾಟ್​ನಲ್ಲಿ ಪಾಕಿಸ್ತಾನದ ಮಾಜಿ ಆಟಗಾರ ಶಾಹೀದ್​ ಅಫ್ರೀದಿ ಸಹ ಭಾಗವಹಿಸಿದ್ದರು. ಅಫ್ರೀದಿ ತಾವು ಜಗತ್ತಿನ ಯಾವೊಬ್ಬ ಬ್ಯಾಟ್ಸ್​ಮನ್​ಗೂ ಬೌಲಿಂಗ್​ ಮಾಡಲು ಹೆದರುತ್ತಿರಲಿಲ್ಲ. ಆದರೆ ಸೆಹ್ವಾಗ್​ಗೆ ಬೌಲಿಂಗ್​ ಮಾಡುವಾಗ ಮಾತ್ರ ಹೆದರಿಕೆಯಾಗುತ್ತಿತ್ತು ತಿಳಿಸಿದ್ದಾರೆ. (ಏಜೆನ್ಸೀಸ್​)