ಮಂಗಳೂರಲ್ಲಿ ಗಡ್‌ಬಡ್ ಸವಿದ ಕಪಿಲ್‌ದೇವ್!

ಮಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಕಪಿಲ್‌ದೇವ್ ಕುಟುಂಬ ಸಮೇತ ಮಂಗಳೂರಿಗೆ ಭೇಟಿ ನೀಡಿದ್ದಾರೆ.
ವೈಯಕ್ತಿಕ ಕಾರ್ಯಕ್ರಮಕ್ಕಾಗಿ ಕೇರಳದ ಕಣ್ಣೂರಿಗೆಂದು ಹೊರಟಿರುವ ಕಪಿಲ್ ದಾರಿಯಲ್ಲಿ ಶುಕ್ರವಾರ ಮಂಗಳೂರಿಗೆ ಆಗಮಿಸಿದ್ದ ಅವರು, ನಗರದಲ್ಲಿ ಯಾವುದೇ ಕ್ರಿಕೆಟ್ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ. ಇಲ್ಲಿನ ಕ್ರಿಕೆಟ್ ಸಂಸ್ಥೆಗಳನ್ನೂ ಸಂಪರ್ಕಿಸಿಲ್ಲ ಎಂದು ತಿಳಿದುಬಂದಿದೆ.
ಶುಕ್ರವಾರ ರಾತ್ರಿ ಭೋಜನಕ್ಕೆ ನಗರದ ಹೋಟೆಲ್‌ಗೆ ತೆರಳಿದ ಕಪಿಲ್, ಶನಿವಾರ ಮಧ್ಯಾಹ್ನ ಲಾಲ್‌ಬಾಗ್‌ನಲ್ಲಿರುವ ಪಬ್ಬಾಸ್ ಐಸ್‌ಕ್ರೀಂ ಪಾರ್ಲರಿಗೆ ತೆರಳಿ ಅಲ್ಲಿನ ಸಿಬ್ಬಂದಿಯನ್ನು ಅಚ್ಚರಿಗೊಳ್ಳುವಂತೆ ಮಾಡಿದರು.
ಪತ್ನಿ ರೋಮಿ ಭಾಟಿಯಾ ಹಾಗೂ ಪುತ್ರಿ ಅಮಿಯಾ ದೇವ್ ಜತೆಗೆ ಆಗಮಿಸಿದ ಕಪಿಲ್, ‘ಪಬ್ಬಾಸ್ ಬಗ್ಗೆ ಕೇಳಿ ತಿಳಿದಿದ್ದೇನೆ, ಹಾಗಾಗಿಯೇ ಇಂದು ನಿಮ್ಮಲ್ಲಿಗೆ ಬಂದಿದ್ದೇನೆ ಎನ್ನುತ್ತ ಗಡ್‌ಬಡ್ ಸವಿದು ಖುಷಿಪಟ್ಟರು. ಸುಮಾರು ಅರ್ಧ ತಾಸು ಪಾರ್ಲರ್‌ನಲ್ಲಿದ್ದರು’ ಎಂದು ಐಡಿಯಲ್ ಐಸ್‌ಕ್ರೀಂ ಮಾಲೀಕ ಮುಕುಂದ್ ಕಾಮತ್ ತಿಳಿಸಿದ್ದಾರೆ. ಕಪಿಲ್ ಆ ಬಳಿಕ ಕೇರಳದ ಕಣ್ಣೂರಿಗೆ ತೆರಳಿದರು.