ಕೊಚ್ಚಾರ್ ದಂಪತಿ ವಿರುದ್ಧ ಎಫ್​ಐಆರ್

ನವದೆಹಲಿ: ವಿಡಿಯೋಕಾನ್ ಸಂಸ್ಥೆಗೆ ನಿಯಮಬಾಹಿರವಾಗಿ ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಐಸಿಐಸಿಐ ಬ್ಯಾಂಕ್​ನ ಮಾಜಿ ಅಧ್ಯಕ್ಷೆ ಚಂದಾ ಕೊಚ್ಚಾರ್ ಹಾಗೂ ಅವರ ಪತಿ ದೀಪಕ್ ಕೊಚ್ಚಾರ್ ವಿರುದ್ಧ ಸಿಬಿಐ ಎಫ್​ಐಆರ್ ದಾಖಲಿಸಿ, ಸರಣಿ ದಾಳಿ ನಡೆಸಿದೆ.

ಸಿಬಿಐ ಎಫ್​ಐಆರ್​ನಲ್ಲಿ ಕೊಚ್ಚಾರ್ ದಂಪತಿಯ ಹೆಸರು ಪ್ರಮುಖವಾಗಿ ದಾಖಲಾಗಿದೆ. ಉದ್ಯಮಿ ವಿ.ಎನ್.ಧೂತ್ ಹಾಗೂ ಇತರ ನಾಲ್ಕು ಕಂಪನಿಗಳನ್ನು ಸೇರಿಸಲಾಗಿದೆ. ಈ ಕಂಪನಿಗಳ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 2018ರಿಂದಲೇ ಪ್ರಾಥಮಿಕ ತನಿಖೆ ನಡೆಯುತ್ತಿದ್ದು, ಪೂರಕ ಸಾಕ್ಷಿಗಳು ದೊರೆತ ಹಿನ್ನೆಲೆಯಲ್ಲಿ ಎಫ್​ಐಆರ್ ದಾಖಲಿಸಿ ತನಿಖೆ ತೀವ್ರಗೊಳಿಸಲಾಗಿದೆ. ಈಗಾಗಲೇ ದಿವಾಳಿ ಅಂಚಿನಲ್ಲಿರುವ ವಿಡಿಯೋಕಾನ್ ಸಂಸ್ಥೆಗೆ ಈ ಪ್ರಕರಣದಿಂದ ಇನ್ನಷ್ಟು ಹಿನ್ನಡೆಯಾಗಿದೆ.

ಏನಿದು ಪ್ರಕರಣ?: ವಿಡಿಯೋಕಾನ್ ಸಂಸ್ಥೆಯು ಐಸಿಐಸಿಐ ಬ್ಯಾಂಕ್​ನಿಂದ 3250 ಕೋಟಿ ರೂ. ಸಾಲವನ್ನು 2012ರಲ್ಲಿ ಅಕ್ರಮವಾಗಿ ಪಡೆದಿತ್ತು. ಆದರೆ ಈ ಸಾಲದ ಮೊತ್ತವನ್ನು ವಿಡಿಯೋಕಾನ್ ಹೂಡಿಕೆದಾರ ಧೂತ್ ಮೂಲಕ ಕೊಚ್ಚಾರ್ ಅವರ ಇನ್ನೊಂದು ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಹಾಗೆಯೇ ಈ ಸಾಲದ ಮೊತ್ತವನ್ನು ಚಂದಾ ಅವರು ಐಸಿಐಸಿಐ ವಾರ್ಷಿಕ ಲೆಕ್ಕಾಚಾರದಿಂದ ಗೌಪ್ಯವಾಗಿರಿಸಿಟ್ಟಿದ್ದರು ಎಂಬ ಆರೋಪವಿದೆ. ಇದಲ್ಲದೇ ಆ ಸಾಲ ನೀಡುವ ಸಂದರ್ಭದಲ್ಲಿಯೇ ವಿಡಿಯೋಕಾನ್ ಸಂಸ್ಥೆ 40 ಸಾವಿರ ಕೋಟಿ ರೂ.ಗೂ ಅಧಿಕ ಸಾಲವನ್ನು ಹೊಂದಿತ್ತು.

ಅಧಿಕಾರ ದುರುಪಯೋಗ ಹಾಗೂ ಕುಟುಂಬ ಸದಸ್ಯರಿಗೆ ಅಕ್ರಮವಾಗಿ ಸಾಲ ನೀಡಿಕೆ ಆರೋಪವನ್ನು ಚಂದಾ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ವ್ಯಾಪ್ತಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಖಾಸಗಿ ಬ್ಯಾಂಕ್ ಆಗಿದ್ದರೂ ಸಾರ್ವಜನಿಕರ ಹಣ ಇರುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ಮಾಡಲಾಗಿದೆ ಎಂದು ಸಿಬಿಐ ಸ್ಪಷ್ಟಪಡಿಸಿದೆ.

ಕೊಚ್ಚಾರ್ ತಲೆದಂಡ

ಪಿಎನ್​ಬಿ ಹಗರಣದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿತ್ತು. ಆದರೆ ಕೊಚ್ಚಾರ್ ಅವರು ಐಸಿಐಸಿಐನಿಂದ ಹೊರಬರಲು ಒಪ್ಪಿರಲಿಲ್ಲ. ಸಿಬಿಐನಲ್ಲಿ ಪ್ರಾಥಮಿಕ ತನಿಖೆ ಆರಂಭ ಆಗುತ್ತಿದ್ದಂತೆ ಕೊಚ್ಚಾರ್ ರಾಜೀನಾಮೆ ನೀಡಿದರು. ಆದರೆ ಆಡಳಿತ ಮಂಡಳಿಯಲ್ಲಿ ಮುಂದುವರಿಯುವ ಇರಾದೆ ಹೊಂದಿದ್ದರು. ಅಂತಿಮವಾಗಿ ಕೇಂದ್ರ ಸರ್ಕಾರ ಹಾಗೂ ಆರ್​ಬಿಐ ಮಧ್ಯಪ್ರವೇಶದ ಬಳಿಕ ಕೊಚ್ಚಾರ್ ರಾಜೀನಾಮೆ ನೀಡಿದ್ದರು.

ಐಸಿಐಸಿಐ ಬ್ಯಾಂಕ್ ವಾದವೇನು?

2012ರಲ್ಲಿ ಒಟ್ಟು 20ಕ್ಕೂ ಹೆಚ್ಚು ಬ್ಯಾಂಕುಗಳು ಒಟ್ಟಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ನೇತೃತ್ವದಲ್ಲಿ ವಿಡಿಯೋಕಾನ್​ಗೆ ಅಂದಾಜು -ಠಿ;40,000 ಕೋಟಿ ಸಾಲ ನೀಡಿದೆ. ಇದರಲ್ಲಿ ಶೇಕಡ 10 ಕ್ಕಿಂತಲೂ ಕಡಿಮೆ ಸಾಲವನ್ನಷ್ಟೇ ಐಸಿಐಸಿಐ ಬ್ಯಾಂಕ್ ನೀಡಿದೆ. ಪ್ರಸ್ತುತ ಬಾಕಿ ಇರುವ ಸಾಲದ ಮೊತ್ತ -ಠಿ;2,810 ಕೋಟಿ ಆಗಿದ್ದು, ಬಡ್ಡಿ ಎಲ್ಲ ಸೇರಿ -ಠಿ; 2,849 ಕೋಟಿ ಆಗಿದೆ ಎಂಬುದು ಐಸಿಐಸಿಐ ಬ್ಯಾಂಕ್ ಹೇಳಿಕೆ.

ಡೀಲ್ ಹೇಗಾಯ್ತು?

2008ರ ಡಿಸೆಂಬರ್​ನಲ್ಲಿ ವಿಡಿಯೋಕಾನ್ ಗ್ರೂಪ್​ನ ವೇಣುಗೋಪಾಲ್ ಧೂತ್ ಮತ್ತು ದೀಪಕ್ ಕೊಚ್ಚಾರ್ ಸೇರಿ ಎನ್​ಯುು ಪವರ್ ರಿನೀವೆಬಲ್ಸ್ ಪ್ರೖೆ.ಲಿ. (ಎನ್​ಆರ್​ಪಿಎಲ್) ಸ್ಥಾಪಿಸುವ ಮೂಲಕ ಡೀಲ್ ಆರಂಭವಾಗಿತ್ತು. ಮರು ವರ್ಷವೇ ಈ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಧೂತ್, ತನ್ನ ಷೇರುಗಳನ್ನು -ಠಿ;2.5 ಲಕ್ಷಕ್ಕೆ ಕೊಚ್ಚಾರ್​ಗೆ ವರ್ಗಾವಣೆ ಮಾಡಿದ್ದರು. 2010ರಲ್ಲಿ ಧೂತ್ ಮಾಲೀಕತ್ವದ ಸುಪ್ರೀಂ ಎನರ್ಜಿ ಎನ್​ಆರ್​ಪಿಎಲ್​ಗೆ -ಠಿ;64 ಕೋಟಿ (ಪರಿವರ್ತನೆಯಾಗಬಲ್ಲ ಡಿಬೆಂಚರ್) ಸಾಲ ನೀಡಿತ್ತು. ಇದಾದ ಬೆನ್ನಲ್ಲೇ ಸುಪ್ರೀಂ ಎನರ್ಜಿಯಲ್ಲಿನ ಸಂಪೂರ್ಣ ಮಾಲೀಕತ್ವ ಧೂತ್ ಸಹವರ್ತಿ ಮಹೇಶ್ ಚಂದ್ರ ಪುಂಗ್ಲಿಯಾಗೆ ವರ್ಗಾವಣೆಗೊಂಡಿತ್ತು. ಈ ನಡುವೆ 2012ರಲ್ಲಿ ವೇಣುಗೋಪಾಲ್ ಧೂತ್ ಮಾಲೀಕತ್ವದ ವಿಡಿಯೋಕಾನ್ ಗ್ರೂಪ್​ಗೆ ಐಸಿಐಸಿಐ ಬ್ಯಾಂಕ್ -ಠಿ;3,250 ಕೋಟಿ ಸಾಲ ನೀಡಿತ್ತು. ಇದರ ಜತೆಜತೆಗೆ 2012-13ರಲ್ಲಿ ದೀಪಕ್ ಕೊಚ್ಚಾರ್ ಮ್ಯಾನೇಜಿಂಗ್ ಟ್ರಸ್ಟಿ ಆಗಿರುವ ಪಿನಾಕಲ್ ಎನರ್ಜಿ(ಟ್ರಸ್ಟ್)ಗೆ ಸುಪ್ರೀಂ ಎನರ್ಜಿಯ ಮಾಲೀಕತ್ವವನ್ನು ಪುಂಗ್ಲಿಯಾ 9 ಲಕ್ಷ ರೂಪಾಯಿಗೆ ವರ್ಗಾಯಿಸಿದರು. ಇದರೊಂದಿಗೆ ಎನ್​ಆರ್​ಪಿಎಲ್​ಗೆ ಸುಪ್ರೀಂ ಎನರ್ಜಿ ನೀಡಿದ್ದ -ಠಿ;64 ಕೋಟಿ ಸಾಲ ಈ ಪಿನಾಕಲ್ ಟ್ರಸ್ಟ್ ಜತೆ ವಿಲೀನ ಆದ ಹಾಗಾಗಿ ಸಾಲದ ಹೊರೆ ತಪ್ಪಿತು. ಅಷ್ಟೇ ಅಲ್ಲ, ಐದು ವರ್ಷದ ಬಳಿಕ ‘ಡೀಲ್’ ಪೂರ್ತಿಯಾಗಿ ಪರಿವರ್ತನೆಯಾದ ಬಳಿಕ ವಿಡಿಯೋಕಾನ್ ಗ್ರೂಪ್​ಗೆ ಐಸಿಐಸಿಐ ಬ್ಯಾಂಕ್ ಕೊಟ್ಟ ಸಾಲದಲ್ಲಿ -ಠಿ;2,810 ಕೋಟಿ (86%) ಮರುಪಾವತಿಯಾಗದೇ ಉಳಿದಿತ್ತು. ಇದನ್ನು ಬ್ಯಾಂಕ್ ಅನುತ್ಪಾದಕ ಆಸ್ತಿ ಪಟ್ಟಿ (ಎನ್​ಪಿಎ)ಗೆ ಸೇರಿಸಿದ್ದಾಗಿ ಘೋಷಿಸಿತು.