ಅರುಣ ಅಸ್ತಮಾನ: ಕೇಂದ್ರದ ಮಾಜಿ ವಿತ್ತ ಸಚಿವ ಜೇಟ್ಲಿ ಇನ್ನಿಲ್ಲ

ನವದೆಹಲಿ: ಉಸಿರಾಟದ ಸಮಸ್ಯೆಯಿಂದಾಗಿ ದೆಹಲಿಯ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ (ಏಮ್ಸ್‌)ಗೆ ದಾಖಲಾಗಿದ್ದ ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರಿಂದು ನಿಧನರಾಗಿದ್ದಾರೆ.

ಏಮ್ಸ್‌ನ ಹೃದ್ರೋಗ ವಿಭಾಗಕ್ಕೆ ಜೇಟ್ಲಿ ದಾಖಲಿಸಲಾಗಿತ್ತು. ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು. ಆದರೆ,  ಚಿಕಿತ್ಸೆ ಫಲಿಸದೆ ಮಧ್ಯಾಹ್ನ 12.7ಕ್ಕೆ ಕೊನೆಯುಸಿರೆಳೆದಿದ್ದಾರೆ.

ಇದಕ್ಕೂ ಮುನ್ನ ಜೇಟ್ಲಿ ಅವರನ್ನು ಆ. 9 ರಂದು ರಾತ್ರಿ ಆಸ್ಪತ್ರೆಗೆ ದಾಖಲಿಸುತ್ತಲೇ ಏಮ್ಸ್​ಗೆ ಧಾವಿಸಿದ್ದ ಗೃಹ ಸಚಿವ ಅಮಿತ್‌ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿ ಜೇಟ್ಲಿ ಅವರ ಆರೋಗ್ಯ ವಿಚಾರಿಸಿಕೊಂಡಿದ್ದರು.

ಇದರೊಂದಿಗೆ ಅರುಣ್ ಜೇಟ್ಲಿ ಅವರ ಆರೋಗ್ಯ ವಿಚಾರಿಸಲು ಕೇಂದ್ರದ ಸಚಿವರಾದ ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ಜಿತೇಂದ್ರ ಸಿಂಗ್ ಮತ್ತು ರಾಮ್‌ ವಿಲಾಸ್‌ ಪಾಸ್ವಾನ್‌, ರಾಷ್ಟ್ರಪತಿ ರಾಮನಾಥ ಕೋವಿಂದ, ಕೇಂದ್ರ ಗೃಹ ಸಚಿವ ಅಮಿತ್‌ ಷಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌, ಕಾಂಗ್ರೆಸ್‌ನ ಅಭಿಷೇಕ್‌ ಮನು ಸಿಂಘ್ವಿ ಮತ್ತು ಜ್ಯೋತಿರಾದಿತ್ಯ ಸಿಂಧ್ಯ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮತ್ತು ಬಿಜೆಪಿ ಸಂಸದೆ ಮೇನಕಾ ಗಾಂಧಿ ಸೇರಿದಂತೆ ಹಲವು ನಾಯಕರು ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಆರೋಗ್ಯ ವಿಚಾರಿಸಿದ್ದರು.

ಒಂದು ವರ್ಷದ ಹಿಂದೆ 66 ವರ್ಷದ ಜೇಟ್ಲಿ ಬದಲಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ವರ್ಷದ ಆರಂಭದಲ್ಲಿ ನಿಯಮಿತ ತಪಾಸಣೆಗಾಗಿ ಅಮೆರಿಕಕ್ಕೆ ತೆರಳಿದ್ದರು.

ಅನಾರೋಗ್ಯದ ಕಾರಣ 2019ರ ಲೋಕಸಭಾ ಚುನಾವಣೆಯಿಂದ ಜೇಟ್ಲಿ ಹೊರಗುಳಿದಿದ್ದರು. ಅಲ್ಲದೆ, ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ತಮ್ಮನ್ನು ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಬಿಡುಗಡೆ ಮಾಡುವಂತೆ ಕೋರಿದ್ದರು.

ಕೇಂದ್ರದ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಕೆಲವೇ ದಿನಗಳ ಹಿಂದೆ ಮೃತಪಟ್ಟಿದ್ದರು. ಇದೀಗ ಅರುಣ್​ ಜೇಟ್ಲಿ ಅವರು ನಿಧನರಾಗಿದ್ದಾರೆ. ಇದರಿಂದ ಬಿಜೆಪಿ ತಿಂಗಳ ಅವಧಿಯಲ್ಲಿ ಇಬ್ಬರು ನಾಯಕರನ್ನು ಕಳೆದುಕೊಂಡಂತಾಗಿದೆ. ಈ ಇಬ್ಬರೂ ನಾಯಕರು ಕಿಡ್ನಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂಬುದು ಗಮನಾರ್ಹ.

ಜೇಟ್ಲಿ ಬದುಕು-ಸಾಧನೆ

ಮಹಾರಾಜಾ ಜೇಟ್ಲಿ ಹಾಗೂ ರತನ್ ಪ್ರಭಾ ಜೇಟ್ಲಿ ದಂಪತಿಯ ಮಗನಾಗಿ ಅರುಣ್​ ಜೇಟ್ಲಿ 1952ರ ಡಿಸೆಂಬರ್​ 28ರಂದು ನವದೆಹಲಿಯಲ್ಲಿ ಜನಿಸಿದ್ದರು. ತಂದೆ ವಕೀಲರಾಗಿದ್ದರು. 1969-70ರ ಅವಧಿಯಲ್ಲಿ ನವದೆಹಲಿಯ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ ಅಭ್ಯಾಸ ಮಾಡಿದ್ದರು. 1973ರಲ್ಲಿ ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ವಾಣಿಜ್ಯ ಪದವಿ ಪಡೆದರು. 1977 ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆಫ್ ಲಾದಿಂದ ಕಾನೂನು ಪದವಿ ಪಡೆದರು.

ಎಪ್ಪತ್ತರ ದಶಕದಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ನ (ಎ‌ಬಿವಿಪಿ) ನಾಯಕನಾಗಿದ್ದರು ಹಾಗೂ 1974ರಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು.
1975-77ರ ನಡುವೆ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಹೇರಲ್ಪಟ್ಟಿದ್ದಾಗ ಇವರು 19 ತಿಂಗಳು ಸೆರೆವಾಸ ಶಿಕ್ಷೆಗೆ ಗುರಿಯಾಗಿದ್ದರು. ರಾಜ್​ನಾರಾಯಣ್​ ಮತ್ತು ಜಯಪ್ರಕಾಶ್​ ನಾರಾಯಣ್​ ಅವರ ಭ್ರಷ್ಟಾಚಾರಿ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಅರುಣ್​ ಜೇಟ್ಲಿ, ಜೆಪಿ ಅವರ ವಿದ್ಯಾರ್ಥಿಗಳು ಮತ್ತು ಯುವ ಸಂಘಟನೆಗಳ ರಾಷ್ಟ್ರೀಯ ಸಮಿತಿಯ ರಾಷ್ಟ್ರೀಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದರು. ಜೈಲಿನಿಂದ ಬಿಡುಗಡೆಗೊಂಡ ಬಳಿಕ ಜನಸಂಘಕ್ಕೆ ಸೇರ್ಪಡೆಗೊಂಡಿದ್ದರು.

1991ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ನೇಮಕಗೊಂಡಿದ್ದ ಜೇಟ್ಲಿ, 1999ರಲ್ಲಿ ಪಕ್ಷದ ವಕ್ತಾರರಾಗಿ ಕಾರ್ಯನಿರ್ವಹಿಸಿದ್ದರು. 1999ರಲ್ಲಿ ಅಟಲ್​ ಬಿಹಾರಿ ವಾಜಪೇಯಿ ಅವರ ಎನ್​ಡಿಎ ಸರ್ಕಾರದಲ್ಲಿ ಮೊದಲಿಗೆ ವಾರ್ತಾ ಮತ್ತು ಪ್ರಸಾರ ಇಲಾಖೆಯ ರಾಜ್ಯ ಸಚಿವರಾಗಿ, ಬಳಿಕ ಬಂಡವಾಳ ಹಿಂತೆಗೆತ (ಸ್ವತಂತ್ರ) ಸಚಿವರಾಗಿ, 2000ದಲ್ಲಿ ಕಾನೂನು, ನ್ಯಾಯಾಂಗ ಮತ್ತು ಕಂಪನಿ ವ್ಯವಹಾರಗಳ ರಾಜ್ಯ ಸಚಿವರಾಗಿ ನೇಮಕಗೊಂಡಿದ್ದರು. ರಾಮ್​ ಜೇಠ್ಮಲಾನಿ ಅವರು ರಾಜೀನಾಮೆ ನೀಡಿದ ಬಳಿಕ ಕಾನೂನು, ನ್ಯಾಯಾಂಗ ಮತ್ತು ಕಂಪನಿ ವ್ಯವಹಾರಗಳ ಸಂಪುಟ ದರ್ಜೆಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು.

2009ರಲ್ಲಿ ರಾಜ್ಯಸಭೆಯಲ್ಲಿನ ಪ್ರತಿಪಕ್ಷಗಳ ನಾಯಕನಾಗಿ ಕಾರ್ಯನಿರ್ವಹಿಸಿದ್ದರು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವಿತ್ತ ಸಚಿವರಾಗಿ, ಕಾರ್ಪೊರೇಟ್​ ವ್ಯವಹಾರಗಳ ಸಚಿವರಾಗಿ ಮತ್ತು ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇವರು ವಿತ್ತ ಸಚಿವರಾಗಿದ್ದ ಅವಧಿಯಲ್ಲಿ 500 ರೂ. ಹಾಗೂ 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ್ದರು. ಬಳಿಕ 500 ರೂ. ಹಾಗೂ 2 ಸಾವಿರ ರೂ. ಮುಖಬೆಲೆಯ ಹೊಸ ನೋಟುಗಳನ್ನು ಬಳಕೆಗೆ ಬಿಡುಗಡೆ ಮಾಡಿದ್ದರು. ತನ್ಮೂಲಕ ಕಪ್ಪುಹಣ ವಿರುದ್ಧದ ಹೋರಾಟಕ್ಕೆ ನಾಂದಿ ಹಾಡಿದ್ದರು.

2017ರ ಜುಲೈ 1ರಿಂದ ಜಾರಿಗೆ ಬರುವಂತೆ ಒಂದೇ ರಾಷ್ಟ್ರ ಒಂದೇ ತೆರಿಗೆ ನೀತಿಯಡಿ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್​ಟಿ) ಜಾರಿಗೊಳಿಸಿದ್ದರು.

ಇಬ್ಬರು ಮಕ್ಕಳು

ಜಮ್ಮು ಮತ್ತು ಕಾಶ್ಮೀರದ ಮಾಜಿ ವಿತ್ತ ಸಚಿವ ಗಿರಿಧರಿ ಲಾಲ್​ ಡೋಗ್ರಾ ಅವರ ಪುತ್ರಿ ಸಂಗೀತಾ ಜತೆ ಅರುಣ್​ ಜೇಟ್ಲಿ 1982ರಲ್ಲಿ ಸಪ್ತಪದಿ ತುಳಿದಿದ್ದರು. ರೋಹನ್​ ಮತ್ತು ಸೊನಾಲಿ ಎಂಬ ಇಬ್ಬರು ಮಕ್ಕಳಿದ್ದಾರೆ. ವೃತ್ತಿಯಲ್ಲಿ ಇವರಿಬ್ಬರೂ ವಕೀಲರಾಗಿದ್ದಾರೆ. ಸೊನಾಲಿ ಅವರು ಜಯೇಶ್​ ಭಕ್ಷಿ ಅವರನ್ನು ಮದುವೆಯಾಗಿದ್ದಾರೆ. (ಏಜೆನ್ಸೀಸ್​)

One Reply to “ಅರುಣ ಅಸ್ತಮಾನ: ಕೇಂದ್ರದ ಮಾಜಿ ವಿತ್ತ ಸಚಿವ ಜೇಟ್ಲಿ ಇನ್ನಿಲ್ಲ”

  1. ಚಿಕ್ಕದಾಗಿ ಚೊಕ್ಕವಾಗಿ ಅರುಣ್ ಜೇಟ್ಲಿ ಅವರ ಬಗ್ಗೆ ಪ್ರಸ್ತುತಪಡಿಸಲಾಗಿದೆ. ಭಾಜಪಗೆ ತುಂಬಲಾರದ ನಷ್ಟ.
    ಕೇಶವ

Leave a Reply

Your email address will not be published. Required fields are marked *