ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದ ಸಿದ್ದರಾಮಯ್ಯ

ಬಾಗಲಕೋಟೆ: ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದ ಬಾದಾಮಿ ತಾಲೂಕಿನ ಬೀರನೂರು ಗ್ರಾಮದ ಮಂಜುನಾಥ ಹೊಸಮನಿ (28) ಅವರ ಮನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಂಗಳವಾರ ರಾತ್ರಿ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರಲ್ಲದೆ, ವೈಯಕ್ತಿಕವಾಗಿ 50 ಸಾವಿರ ರೂ. ಪರಿಹಾರ ನೀಡಿದರು. ರೈತ ಮಂಜುನಾಥ ಸ್ಟೇಟ್ ಬ್ಯಾಂಕ್​ನಲ್ಲಿ ಏಳು ಲಕ್ಷ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 75 ಸಾವಿರ, ಚೆನ್ನಮ್ಮ ಬ್ಯಾಂಕ್​ನಲ್ಲಿ 1.80 ಲಕ್ಷ, ಜೊತೆಗೆ ಕೈಸಾಲ ಸೇರಿ ಒಟ್ಟು ಹತ್ತು ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಈತ 4 ಎಕರೆಯಲ್ಲಿ ಉಳ್ಳಾಗಡ್ಡಿ ಬಿತ್ತನೆ ಮಾಡಿದ್ದನಾದರೂ ಬೆಳೆ ಸಮರ್ಪಕವಾಗಿ ಬರದೆ ನೊಂದಿದ್ದ, ಸಾಲಮನ್ನಾ ಆಗದ್ದರಿಂದ ಮನನೊಂದು ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಜುಲೈ 10 ರಂದು ಸಾವನ್ನಪ್ಪಿದ್ದ. ಮಾಜಿ ಮುಖ್ಯಮಂತ್ರಿಯವರನ್ನು ಕಾಣುತ್ತಲೇ ಮೃತ ರೈತನ ತಂದೆ, ತಾಯಿ ಕಣ್ಣೀರು ಹಾಕಿ ತಮ್ಮ ನೋವು ತೋಡಿಕೊಂಡರು. ನಂತರ ಸಿದ್ದರಾಮಯ್ಯನವರು ಸ್ಥಳದಲ್ಲಿ ಹಾಜರಿದ್ದ ಎಸಿ ಅವರಿಗೆ ಸರಕಾರದಿಂದ ಶೀಘ್ರವಾಗಿ ಪರಿಹಾರ ಧನ ನೀಡಲು ಸೂಚನೆ ನೀಡಿದರು.