Mr. ಕ್ಲೀನ್ ಮನೋಹರ ಅಜರಾಮರ

ಗೋವಾದ ರಾಜಧಾನಿ ಪಣಜಿಯಿಂದ 13 ಕಿ.ಮೀ. ಅಂತರದಲ್ಲಿರುವ ಮಾಪುಸಾ ಗ್ರಾಮದಲ್ಲಿ 1955ರ ಡಿಸೆಂಬರ್ 13ರಂದು ಜನಿಸಿದ ಪರಿಕ್ಕರ್ ಮಡಗಾಂವ್​ನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು (ಮರಾಠಿಯಲ್ಲಿ) ಪಡೆದರು. ಓದಿನಲ್ಲಿ ಜಾಣರಾಗಿದ್ದರಲ್ಲದೆ, ಉತ್ತಮ ಶೈಕ್ಷಣಿಕ ಸಾಧನೆ ತೋರುವ ಹಂಬಲವನ್ನು ಸದಾ ಹೊಂದಿದ್ದರು. ಅದರ ಫಲವಾಗಿಯೇ 1978ರಲ್ಲಿ ಪ್ರತಿಷ್ಠಿತ ಮುಂಬೈ ಐಐಟಿಯಿಂದ ಇಂಜಿನಿಯರಿಂಗ್ ಪದವಿ ಪಡೆದುಕೊಂಡರು. ವಿದ್ಯಾರ್ಥಿದೆಸೆಯಲ್ಲಿದ್ದಾಗಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದಿದ್ದರಿಂದ ಸಮಾಜಪ್ರೇಮ, ರಾಷ್ಟ್ರಪ್ರೇಮ ಸಹಜವಾಗಿಯೇ ಅವರಲ್ಲಿ ಮೈಗೂಡಿತ್ತು. ‘ಸರಳ ಜೀವನ, ಉನ್ನತ ಚಿಂತನೆ’ ತತ್ತ್ವವನ್ನು ಆಗಿನಿಂದಲೇ ತಮ್ಮ ಬದುಕಿನಲ್ಲಿ ಅನುಷ್ಠಾನಕ್ಕೆ ತಂದಿದ್ದ ಅವರು ರಾಜಕೀಯ ಪ್ರವೇಶಿಸಿದ್ದು ಆಕಸ್ಮಿಕವಾಗಿಯೇ- ಅದೂ ಆರೆಸ್ಸೆಸ್ ಮುಖಂಡರ ಸಲಹೆ, ಒತ್ತಾಯದ ಮೇರೆಗೆ.

ಅದು ದೇಶದಲ್ಲಿ ಬಿಜೆಪಿ ಇನ್ನೂ ಚಿಗಿಯುತ್ತಿದ್ದ ಕಾಲ. ಪಕ್ಷದ ಬೇರುಗಳನ್ನು ಭದ್ರಗೊಳಿಸಲು ಹೆಣಗುತ್ತಿದ್ದ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿತ್ತು. ಆದರೆ, ಆಗಲೇ ಗೋವಾದಲ್ಲಿ ‘ಕಮಲ’ವನ್ನು ಅರಳಿಸಿ ರಾಜ್ಯದಲ್ಲಿ ಬಿಜೆಪಿಯ ಮೊಟ್ಟಮೊದಲ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು ಪರಿಕ್ಕರ್. ಈ ಮೂಲಕ ತಾವು ರಾಜಕೀಯದಲ್ಲೂ ‘ಚಾಣಾಕ್ಷ ಇಂಜಿನಿಯರ್’ ಎಂಬುದನ್ನು ಸಾಬೀತುಮಾಡಿದರು.

ವಿಶಿಷ್ಟ ವ್ಯಕ್ತಿತ್ವ: ಪರಿಕ್ಕರ್ ಹೆಸರಲ್ಲಿ ಹಲವು ಹೆಗ್ಗಳಿಕೆಗಳು ದಾಖಲಾಗಿವೆ. ಐಐಟಿ ಪದವೀಧರರಾಗಿ ಮುಖ್ಯಮಂತ್ರಿ ಹುದ್ದೆಗೇರಿದ ಮೊದಲಿಗ. ಗೋವಾದಲ್ಲಿ ಬಿಜೆಪಿಯ ಮೊದಲ ಮುಖ್ಯಮಂತ್ರಿ. ಸಿಎಂ ಸ್ಥಾನದಲ್ಲಿದ್ದರೂ ಪ್ರಭಾವಳಿಗಳಿಗೆ ಸಿಲುಕಿಕೊಳ್ಳದೆ ಸರಳತೆ, ವಿನಯವನ್ನು ತೋರಿದವರು. ನಾಯಕನಾದವನು, ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದವನು ಸದಾ ಜನರ ಮಧ್ಯೆಯೇ ಇರಬೇಕು ಎಂದು ಬಯಸುತ್ತಿದ್ದ ಅವರು ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯೊಂದಿಗೂ ಹಮ್ಮು-ಬಿಮ್ಮುಗಳಿಲ್ಲದೆ ಮುಕ್ತವಾಗಿ ಬೆರೆಯುತ್ತಿದ್ದರು. ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದ ಪರಿ, ತೋರುತ್ತಿದ್ದ ಆಪ್ತತೆಯೇ ಅವರನ್ನು ನೈಜನಾಯಕನನ್ನಾಗಿಸಿತ್ತು.

‘ಸಿಎಂ ಸಾಹೇಬ್ರ ಬಳಿ ಹೋದರೆ ನಮ್ಮ ಕಷ್ಟ ಪರಿಹಾರ ಆಗುತ್ತೆ’ ಎಂಬ ವಿಶ್ವಾಸ ಗೋವಾದ ಕಡೆಯ ನಾಗರಿಕನವರೆಗೂ ವ್ಯಾಪಿಸಿತ್ತು. ಹಾಗಾಗಿ, ಜನರಿಗೆ ಅಷ್ಟೆ ಸುಲಭವಾಗಿ ಎಟಕುತ್ತಿದ್ದ ಪರಿಕ್ಕರ್, ಮಂತ್ರಿ, ಶಾಸಕರಿಗೆ ತಮ್ಮ ಕಾರ್ಯದ ಮೂಲಕವೇ ಹೇಗೆ ಸಾಗಬೇಕೆಂಬುದನ್ನು ನಿರ್ದೇಶಿಸಿ ಬಿಡುತ್ತಿದ್ದರು. ನಿರಂತರ ಓಡಾಟ, ಕ್ಷಿಪ್ರಸ್ಪಂದನೆ, ದಿಟ್ಟ ನಿರ್ಧಾರ, ಅದನ್ನು ಕೂಡಲೇ ಅನುಷ್ಠಾನಕ್ಕೆ ತರುವ ಗಟ್ಟಿತನ, ಆಡಳಿತಕ್ಕೆ ವೇಗ ಕಲ್ಪಿಸುವ ಇಚ್ಛಾಶಕ್ತಿ, ಹೊಸ ಯೋಜನೆ/ಸುಧಾರಣೆಗಳ ಅನುಷ್ಠಾನ, ಪಕ್ಷದ ಕಾರ್ಯಕರ್ತರೊಂದಿಗೆ ನಿರಂತರ ಒಡನಾಟ… ಹೀಗೆ ಪರಿಕ್ಕರ್ ಎಲ್ಲರಲ್ಲೂ ಬೆರೆತು ಜೀವಿಸುವ, ಸುಧಾರಣೆಗಳಿಗೆ ಜೀವ ಕೊಡುವ ನಾಯಕರಾಗಿದ್ದರು.

ಸ್ಕೂಟಿಯಲ್ಲಿ ಕ್ಷೇತ್ರ ಸಂಚಾರ

ಸಿಎಂ ಆಗಿದ್ದಾಗಲೂ ಕೆಂಪುಬಣ್ಣದ ಸ್ಕೂಟಿಯಲ್ಲೇ ಶಾಸಕರೊಡನೆ ತಮ್ಮ ಕ್ಷೇತ್ರದ ತುಂಬ ಓಡಾಡುತ್ತಿದ್ದ ಅವರು ಗ್ರಾಮಗಳಿಗೆ ಅವಶ್ಯಕ ಎಲ್ಲ ಮೂಲ ಸೌಲಭ್ಯಗಳನ್ನು ಕಲ್ಪಿಸಲು, ಅಲ್ಲಿನ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಆದ್ಯತೆ ನೀಡುತ್ತಿದ್ದರು. ಸದಾ ಸಾದಾ ದಿರಿಸು (ಅರ್ಧತೋಳಿನ ಅಂಗಿ, ಪ್ಯಾಂಟ್, ಚಪ್ಪಲಿ), ದಿನಕ್ಕೆ 18 ಗಂಟೆ ಕೆಲಸ ಮಾಡುತ್ತ ತಮ್ಮ ಜತೆಗಿರುವವರಿಗೂ ಇದೇ ರೀತಿ ಕೆಲಸಕ್ಕೆ ಪ್ರೋತ್ಸಾಹಿಸುತ್ತಿದ್ದ ಅಸಾಧಾರಣ ಉತ್ಸಾಹಿಯಾಗಿದ್ದರು. ಅದು ಪರಿಕ್ಕರ್ ಕೇಂದ್ರ ರಕ್ಷಣಾ ಸಚಿವರಾಗಿದ್ದಾಗಿನ ಸಂದರ್ಭ. 2016ರಲ್ಲಿ ಪಣಜಿ ಮಹಾನಗರಪಾಲಿಕೆಯ ಚುನಾವಣೆಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದ ಅವರು ಬಳಿಕ ಸಮೀಪದ ರಸ್ತೆಬದಿಯ ಕ್ಯಾಂಟೀನ್​ವೊಂದಕ್ಕೆ ತೆರಳಿ ಬೆಳಗಿನ ತಿಂಡಿ, ಚಹಾ ಸೇವಿಸಿದ್ದರು! ಕ್ಯಾಂಟಿನ್​ನಲ್ಲಿದ್ದ ಜನ ಪರಿಕ್ಕರ್ ಸರಳತೆ ಕಂಡು ಬೆರಗಾಗಿದ್ದರು.

ಮೋದಿ ಪರಮಾಪ್ತ

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಪರಿಕ್ಕರ್ ಅವರದ್ದು ಆಪ್ತಸ್ನೇಹ, ಒಡನಾಟ. 2014ರ ಮೇ 26ರಂದು ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವಾಗಲೇ ಪರಿಕ್ಕರ್ ಕೇಂದ್ರ ಸಂಪುಟ ಸೇರುತ್ತಾರೆ ಎಂದು ಅಂದಾಜಿಸಲಾಗಿತ್ತು. ಐದು ತಿಂಗಳ ಬಳಿಕ ಅಂದರೆ 2014ರ ನವೆಂಬರ್​ನಲ್ಲಿ ಮೋದಿ ಸಂಪುಟ ಸೇರಿದ ಪರಿಕ್ಕರ್​ಗೆ ರಕ್ಷಣಾ ಮಂತ್ರಿಯ ಜವಾಬ್ದಾರಿ

ಸಿಕ್ಕಾಗ ಸಂಚಲನವೇ ಸೃಷ್ಟಿಯಾಯಿತು.

ಮನೋಹರ ಗೋಪಾಲಕೃಷ್ಣ ಪರಿಕ್ಕರ್. ರಾಜಕೀಯ ಕ್ಷೇತ್ರದ ಶುದ್ಧೀಕರಣವೂ ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ಅಪೂರ್ವ ನಾಯಕ. ‘ಮಿಸ್ಟರ್ ಕ್ಲೀನ್’ ಎಂಬ ಹೆಗ್ಗಳಿಕೆ ಹೊಂದಿದ್ದ ಪರಿಕ್ಕರ್ ಗೋವಾ ಮುಖ್ಯಮಂತ್ರಿಯಾಗಿ, ಕೇಂದ್ರ ರಕ್ಷಣಾ ಸಚಿವರಾಗಿ ಸಲ್ಲಿಸಿದ ಕೊಡುಗೆ ಅವಿಸ್ಮರಣೀಯ. ಪ್ರಾಮಾಣಿಕತೆ, ಸರಳತೆ, ಪಾರದರ್ಶಕ ಆಡಳಿತದಿಂದ ವ್ಯಾಪಕ ಬದಲಾವಣೆ ತರಬಹುದು ಎಂದು ತೋರಿಸಿಕೊಟ್ಟ ಈ ನಾಯಕನ ಹೆಜ್ಜೆಗುರುತುಗಳು ಭಾವಿ ನಾಯಕರಿಗೆ ದಿಕ್ಸೂಚಿ.

ಸರ್ಜಿಕಲ್ ದಾಳಿಯ ಯಶಸ್ಸು

2016ರ ಸೆಪ್ಟೆಂಬರ್​ನಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಭಾರತ ಸರ್ಜಿಕಲ್ ದಾಳಿ ನಡೆಸಿ ಹಲವು ಉಗ್ರರ ನೆಲೆಗಳನ್ನು ನಾಶ ಪಡಿಸಿದ ಘಟನೆ ಪಾಕಿಸ್ತಾನದ ನಿದ್ದೆಗೆಡಿಸಿತು. ಈ ಭಾರಿ ಸವಾಲಿನ ಯೋಜನೆ ಯಶಸ್ವಿಯಾಗುವಲ್ಲಿ ಪರಿಕ್ಕರ್ ರಣತಂತ್ರ, ಸಲಹೆ ಮತ್ತು ಸೇನೆಗೆ ನೀಡಿದ ನಿರ್ದೇಶನ ಬಹುಮುಖ್ಯ ಪಾತ್ರವಹಿಸಿತ್ತು. ಅಲ್ಲೂ, ಸೌಜನ್ಯ ಮೆರೆದಿದ್ದ ಪರಿಕ್ಕರ್ 2016ರ ಅಕ್ಟೋಬರ್​ನಲ್ಲಿ ಮುಂಬೈನ ಮಟಿರಿಯಲ್ಸ್ ಇಂಜಿನಿಯರಿಂಗ್ ಟೆಕ್ನಾಲಜೀಸ್​ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿ-‘ಸರ್ಜಿಕಲ್ ಕಾರ್ಯಾಚರಣೆಯ ಶೇಕಡ 100 ಶ್ರೇಯ ಭಾರತೀಯ ಸೇನೆ ಹಾಗೂ ದೇಶದ 127 ಕೋಟಿ ಜನರಿಗೆ ಸೇರಬೇಕು’ ಎಂದಿದ್ದರು. ಅಲ್ಲದೆ, ‘ಪಾಕ್ ಆಕ್ರಮಿತ ಪ್ರದೇಶದಲ್ಲಿನ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಬೇಕು ಎಂದು ಕಳೆದ 30 ವರ್ಷಗಳಿಂದ ಭಾರತೀಯರು ಬಯಸಿದ್ದರು. ಸರ್ಜಿಕಲ್ ದಾಳಿ ಪಾಕಿಸ್ತಾನಕ್ಕೂ ಕಠಿಣ ಸಂದೇಶ ರವಾನಿಸಿದೆ. ಉಗ್ರರ ಉಪಟಳ ಅನುಭವಿಸುತ್ತ ಭಾರತ ಸುಮ್ಮನೇ ಕೂರುವುದಿಲ್ಲ ಎಂದು ಪಾಕಿಸ್ತಾನಕ್ಕೆ ಅರಿವಾಗಿದೆ’ ಎಂದು ಹೇಳುವ ಮೂಲಕ ಪಾಕ್​ಗೆ ಕಠಿಣ ಸಂದೇಶ ರವಾನಿಸಿದ್ದರು. 2017ರ ಅಕ್ಟೋಬರ್​ನಲ್ಲಿ ಪಣಜಿಯಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ಸರ್ಜಿಕಲ್ ದಾಳಿ ವಿವರ ನೀಡಿದ್ದರು.

ಸೈನಿಕರಿಗೆ ಸ್ಥೈರ್ಯ ತುಂಬಿದ್ದರು

ರಕ್ಷಣಾ ಸಚಿವರಾಗಿದ್ದಾಗ ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಸಿಯಾಚಿನ್ ಹಿಮಪರ್ವತಕ್ಕೆ ಭೇಟಿ ನೀಡಿದ್ದ (2015 ಮೇ) ಪರಿಕ್ಕರ್ ಸೈನಿಕರ ಧೈರ್ಯವನ್ನು ಕೊಂಡಾಡಿದ್ದರು. ಅವರಲ್ಲಿ ಸ್ಥೈರ್ಯ ತುಂಬಿದ್ದರು. ಬಳಿಕ ಸಿಯಾಚಿನ್ ಯುದ್ಧಭೂಮಿ ಸುತ್ತಮುತ್ತ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಅಲ್ಲದೆ, ಶ್ರೀನಗರದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿ, ಉಗ್ರರ ಒಳನುಸುಳುವಿಕೆ ಕುರಿತು ಸೇನಾ ಕಮಾಂಡರ್​ಗಳ ಜತೆ ಮಾತುಕತೆ ನಡೆಸಿದ್ದರು.

ಆಸ್ಪತ್ರೆಯಿಂದ ಬಂದು ಬಜೆಟ್ ಮಂಡಿಸಿದ್ದರು!

ಮೇದೋಜ್ಜೀರಕಾಂಗ ಸಮಸ್ಯೆಯ ಕಾರಣ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ ಪರಿಕ್ಕರ್ ಆಸ್ಪತ್ರೆಯಿಂದ ಬಿಡುಗಡೆಯಾದ ಒಂದು ಗಂಟೆಯಲ್ಲಿಯೇ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿ ಅಚ್ಚರಿ ಮೂಡಿಸಿದ್ದರು.

ಚಿತ್ರೋತ್ಸವ ಗೋವಾಕ್ಕೆ ತಂದರು

2004ರಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಗೋವಾಕ್ಕೆ ತಂದ ಪರಿಕ್ಕರ್, ಪ್ರತಿ ವರ್ಷ ಈ ಉತ್ಸವವನ್ನು ಅದ್ದೂರಿಯಾಗಿ ಆಚರಿಸಿದರಲ್ಲದೆ, ಅಲ್ಲಿಂದ ಮುಂದೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರತಿವರ್ಷವೂ ಕಾಯಂ ಆಗಿ ಗೋವಾದಲ್ಲಿ ನಡೆಯುವಂತೆ ಮಾಡಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರದ ಅನುಮತಿಯೂ ಸಿಕ್ಕಿದೆ. ಗಣಿಗಾರಿಕೆ ನಿಷೇಧದಿಂದ ರಾಜ್ಯದ ಆದಾಯಕ್ಕೆ ಭಾರಿ ಪೆಟ್ಟು ಬಿದ್ದರೂ ಬೇರೆ ಮೂಲಗಳಿಂದ ಸಂಪನ್ಮೂಲವನ್ನು ಕ್ರೋಡೀಕರಿಸಿ ಜನರಿಗೆ ನೀಡಿದ ಆಶ್ವಾಸನೆಯನ್ನು ಈಡೇರಿಸಿದರು. ಹಿರಿಯ ನಾಗರಿಕರಿಗೆ ದೊರೆಯುವ ಪಿಂಚಣಿಯನ್ನು 2,500 ರೂಪಾಯಿಗೆ, ಗೃಹಿಣಿಯರಿಗೆ ‘ಗೃಹ ಆಧಾರ್’ ಯೋಜನೆಯಡಿ ತಿಂಗಳಿಗೆ 1,200 ರೂಪಾಯಿ ಸಂದಾಯವಾಗುವಂತೆ ಮಾಡಿದರು.

ನಿವೃತ್ತಿ ಪಡೆಯಲ್ಲ ಎಂದಿದ್ದರು!

2015ರ ಡಿಸೆಂಬರ್​ನಲ್ಲಿ ಪರಿಕ್ಕರ್ 60 ವರ್ಷ ಪೂರೈಸಿದಾಗ ಅವರ ರಾಜಕೀಯ ನಿವೃತ್ತಿ ಬಗ್ಗೆ ಚರ್ಚೆಗಳು ಸೃಷ್ಟಿಯಾಗಿದ್ದವು. ಆಗ ನಿವೃತ್ತಿಯ ಊಹಾಪೋಹಗಳನ್ನು ತಳ್ಳಿಹಾಕಿದ್ದ ಅವರು ‘ನನಗೆ ರಾಜಕೀಯದಲ್ಲಿ ಮಹತ್ತರ ಜವಾಬ್ದಾರಿ ದೊರೆತಿದ್ದು, ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತೇನೆ’ ಎಂದಿದ್ದರು.

ದಿಟ್ಟ ರಕ್ಷಣಾ ಮಂತ್ರಿ

ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ದಾಳಿ, ಸೇನೆಯ ಆಧುನಿಕರಣ, ಭಯೋತ್ಪಾದಕರ ವಿರುದ್ಧ ದಿಟ್ಟ ಕ್ರಮ, ಪ್ರತ್ಯೇಕತಾವಾದಿಗಳ ವಿರುದ್ಧ ಕಠಿಣ ನಿಲುವು, ಉಗ್ರರ ಮತ್ತು ದೇಶದ್ರೋಹಿಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಸೇನೆಗೆ ಮುಕ್ತ ಸ್ವಾತಂತ್ರ್ಯ, ಐಸಿಸ್, ಅಲ್-ಕೈದಾ ವಿರುದ್ಧದ ಹೋರಾಟದಲ್ಲಿ ಪ್ರಬಲ ಹೆಜ್ಜೆ… ಇವು ಮನೋಹರ್ ಪರಿಕ್ಕರ್ ರಕ್ಷಣಾ ಸಚಿವರಾಗಿ ಸಾಧಿಸಿದ್ದ ಮಹತ್ವದ ಮೈಲಿಗಲ್ಲುಗಳು. ದಿಟ್ಟ ರಕ್ಷಣಾ ಮಂತ್ರಿಯಾಗಿ ರಾಷ್ಟ್ರವಿರೋಧಿ ತತ್ತ್ವಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡ ಮನೋಹರ ಪರಿಕ್ಕರ್ ಅದೇ ವೇಳೆ ಸೈನಿಕರ ಮನೋಬಲ ಹೆಚ್ಚಿಸಿದರು. 2016ರ ನವೆಂಬರ್​ನಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿ ಉಭಯ ದೇಶಗಳ ಮಧ್ಯೆ ಸೇನಾ ಮತ್ತು ರಕ್ಷಣಾ ಸಹಕಾರ, ಗಡಿಯಲ್ಲಿ ಸಮರಾಭ್ಯಾಸದ ಕುರಿತಂತೆ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದರು. 2015ರ ಡಿಸೆಂಬರ್​ನಲ್ಲಿ ಅಮೆರಿಕಕ್ಕೆ ಭೇಟಿ ನೀಡಿದರು. ಮೇಕ್ ಇನ್ ಇಂಡಿಯಾ ಯೋಜನೆಯಡಿ ಭಾರತ-ಅಮೆರಿಕ ಜಂಟಿಯಾಗಿ ರಕ್ಷಣಾ ಪರಿಕರಗಳನ್ನು ಉತ್ಪಾದಿಸಲು ಈ ಸಂದರ್ಭದಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಯಿತಲ್ಲದೆ, ಉಗ್ರ ಸಂಘಟನೆಗಳ ನಿಮೂಲನೆಗೆ ಜಾಗತಿಕ ಮಟ್ಟದ ಸಹಭಾಗಿತ್ವ ಅಗತ್ಯ ಎಂಬುದನ್ನು ಅಮೆರಿಕಕ್ಕೆ ಮನದಟ್ಟು ಮಾಡಿಕೊಟ್ಟಿದ್ದರು.

ಸೇನೆಗೆ ಸರ್ಜರಿ

ಹೆಚ್ಚುವರಿ ಸಿಬ್ಬಂದಿಯ ಕಡಿತಕ್ಕೆ ಚಾಲನೆ ನೀಡಿ ಆ ಮೂಲಕ ಹೊರೆ ಇಳಿಸಲು ಕ್ರಮ ಕೈಗೊಂಡಿದ್ದ ಪರಿಕ್ಕರ್ ಶಸ್ತ್ರಾಸ್ತ್ರ ಖರೀದಿಗೆ ಹೆಚ್ಚು ಅನುದಾನ ವಿನಿಯೋಗವಾಗುವಂತೆ ನೋಡಿಕೊಂಡರು. ಯುದ್ಧ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಮಹಿಳೆಯರಿಗೆ ಹಂತ -ಹಂತವಾಗಿ ಅವಕಾಶ ನೀಡುವುದಾಗಿ ಘೋಷಿಸಿದ್ದರು. ಪಾರದರ್ಶಕ ವ್ಯವಸ್ಥೆಗೆ ಒತ್ತು ನೀಡಿದ ಅವರು, 2016ರಲ್ಲಿ ಅಗಸ್ತಾ ವೆಸ್ಟ್​ಲ್ಯಾಂಡ್ ಹೆಲಿಕಾಪ್ಟರ್ ಹಗರಣ ಬೆಳಕಿಗೆ ಬರುತ್ತಿದ್ದಂತೆ ಇಟಲಿಯ ಫಿನ್​ವೆುಕಾನಿಕಾ ಸಂಸ್ಥೆ ಜತೆಗಿನ ರಕ್ಷಣಾ ಸಾಮಗ್ರಿಯ ಎಲ್ಲ ಟೆಂಡರ್​ಗಳನ್ನು ರದ್ದುಗೊಳಿಸಿದರು. ಅಲ್ಲದೆ, ಅಗಸ್ತಾ ಕಾಪ್ಟರ್ ಪೂರೈಸಿದ ಫಿನ್​ವೆುಕಾನಿಕಾ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿ, ದೇಶದ ಭದ್ರತೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ ಎಂಬುದನ್ನು ಸಾರಿದರು. ರಕ್ಷಣಾ ಸಾಮಗ್ರಿಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ತಪ್ಪಿಸುವ ನಿಟ್ಟಿನಲ್ಲಿ ದೇಶೀಯವಾಗಿ ಜೆಟ್​ಫೈಟರ್​ಗಳನ್ನು ನಿರ್ವಿುಸುವ ಯೋಜನೆ ಘೋಷಿಸಿದ್ದರು.

ಒಆರ್​ಒಪಿ ಕೊಡುಗೆ

‘ಏಕಶ್ರೇಣಿ, ಏಕಪಿಂಚಣಿ’ (ಒಆರ್​ಒಪಿ) ಜಾರಿಗೊಳಿಸಬೇಕೆಂಬುದು ನಿವೃತ್ತ ಸೈನಿಕರ ಹಳೇ ಬೇಡಿಕೆಯಾಗಿತ್ತು. ಇದು ನೆರವೇರಿದ್ದು ಕೂಡ ಪರಿಕ್ಕರ್ ಅವಧಿಯಲ್ಲೇ. ನಿವೃತ್ತ ಸೈನಿಕರ ಹೋರಾಟಕ್ಕೆ ಸ್ಪಂದಿಸಿದ ಪರಿಕ್ಕರ್ ಒಆರ್​ಒಪಿ ಸಂಬಂಧಿ ಪ್ರಸ್ತಾವನೆ ಸಿದ್ಧಪಡಿಸಿ, ಪ್ರಧಾನಿಯ ಅನುಮೋದನೆ ಪಡೆದು ಅದನ್ನು ಜಾರಿಗೆ ತರುವಲ್ಲಿ ಪ್ರಧಾನ ಭೂಮಿಕೆ ವಹಿಸಿದರು.

ಗೋವಾ ಸಾರಥ್ಯ ಯಾರಿಗೆ?

ಪಣಜಿ: ಮನೋಹರ ಪರಿಕ್ಕರ್ ಬಳಿಕ ಗೋವಾ ಸಿಎಂ ಯಾರಾಗಲಿದ್ದಾರೆ ಎಂಬ ಕುರಿತು ಚರ್ಚೆ ನಡೆಯುತ್ತಿದೆ. ಪರಿಕ್ಕರ್ ಆರೋಗ್ಯ ಕ್ಷೀಣಿಸುತ್ತಿರುವ ಸುಳಿವು ದೊರೆತ ಕಾರಣ ಶನಿವಾರವೇ ಕಾಂಗ್ರೆಸ್ ನಾಯಕರು ರಾಜ್ಯಪಾಲರಿಗೆ ಪತ್ರ ಬರೆದು ಸರ್ಕಾರ ರಚನೆಗೆ ಅವಕಾಶ ಕೋರಿದ್ದರು. ಭಾನುವಾರ ಮಧ್ಯಾಹ್ನವರೆಗೂ ಸಾಕಷ್ಟು ರಾಜಕೀಯ ಚಟುವಟಿಕೆ ನಡೆದವು.

ಬಿಜೆಪಿಯು ತನ್ನ ಎಲ್ಲ ಶಾಸಕರಿಗೆ ಗೋವಾದಲ್ಲೇ ಇರುವಂತೆ ಸೂಚನೆ ನೀಡಿತ್ತು. ಬಿಜೆಪಿ ಬೆಂಬಲಿತ ಗೋವಾ ಫಾರ್ವರ್ಡ್ ಮತ್ತು ಮೂವರು ಪಕ್ಷೇತರರು ಸೇರಿ ಒಟ್ಟು 6 ಶಾಸಕರು ಒಗ್ಗಟ್ಟಾಗಿದ್ದು, ಬಿಜೆಪಿ ನೂತನ ಮುಖ್ಯಮಂತ್ರಿ ಆಯ್ಕೆ ಮಾಡುವಾಗ

ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಸಂದೇಶ ನೀಡಿದ್ದರು. ಬಳಿಕ ಬಿಜೆಪಿ ನೂತನ ಮುಖ್ಯಮಂತ್ರಿ ಅಭ್ಯರ್ಥಿ ಹುಡುಕಾಟದಲ್ಲಿ

ತೊಡಗಿದೆ ಎಂಬ ಸುದ್ದಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಕೇಂದ್ರದ ಇಬ್ಬರು ನಾಯಕರನ್ನು ಗೋವಾಗೆ ಕಳುಹಿಸಿಕೊಟ್ಟಿತ್ತು.

ದಿಗಂಬರ್ ಸ್ಪಷ್ಟನೆ: ಕಾಂಗ್ರೆಸ್​ನ ಹಿರಿಯ ಮುಖಂಡ ಮತ್ತು ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಅವರನ್ನೇ ನೂತನ ಸಿಎಂ ಮಾಡಲು ಬಿಜೆಪಿ ನಿರ್ಧರಿಸಿದೆ ಎಂಬ ಮಾತು ಕೇಳಿಬಂದಿತ್ತು. ಈ ಬಗ್ಗೆ ರ್ಚಚಿಸಲು ದಿಗಂಬರ್ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿತ್ತು. ಆದರೆ ಕಾಮತ್ ಈ ಸುದ್ದಿಗಳನ್ನು ತಳ್ಳಿಹಾಕಿದ್ದು, ಬಿಜೆಪಿ ಸೇರುವುದು ಆತ್ಮಹತ್ಯೆ ಮಾಡಿಕೊಂಡಂತೆ ಎಂದಿದ್ದಾರೆ.

ದೇಶದ ಭದ್ರತಾ ಸಾಮರ್ಥ್ಯಗಳನ್ನು ತಾವು ಸಚಿವರಾಗಿದ್ದ ಅವಧಿಯಲ್ಲಿ ಹೆಚ್ಚಿಸಿದ ಶ್ರೇಯ ಪರಿಕ್ಕರ್​ಗೆ ಸಲ್ಲುತ್ತದೆ. ದೇಶೀಯ ರಕ್ಷಣಾ ಉತ್ಪಾದನೆಗೆ ಒತ್ತು. ಮಾಜಿ ಯೋಧರ ಜೀವನ ಸುಧಾರಿಸಿದ ಶ್ರೇಯ ಕೂಡ ಅವರದ್ದೇ.

| ನರೇಂದ್ರ ಮೋದಿ ಪ್ರಧಾನಿ

ಗೋವಾ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಮನೋಹರ ಪರಿಕ್ಕರ್ ನಿಧನದಿಂದ ಅತೀವ ನೋವಾಗಿದೆ. ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ದಯ ಪಾಲಿಸಲಿ ಎಂದು ಪ್ರಾರ್ಥಿಸುವೆ.

| ಎಚ್.ಡಿ. ದೇವೇಗೌಡ ಮಾಜಿ ಪ್ರಧಾನಿ

ಪರಿಕ್ಕರ್ ತಮ್ಮ ಸರಳತೆ, ಸಜ್ಜನಿಕೆಯಿಂದ ಜನಪ್ರಿಯರಾಗಿದ್ದ ಅಪರೂಪದ ರಾಜಕಾರಣಿಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವೆ.

| ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ

ಮನೋಹರ ಪರಿಕ್ಕರ್ ಅಗಲುವಿಕೆಯ ಸುದ್ದಿ ತಿಳಿದು ತುಂಬಾ ದುಃಖವಾಗಿದೆ. ಇಂತಹ ಧೀಮಂತ ನಾಯಕನನ್ನು ಕಳೆದುಕೊಂಡು ಬಿಜೆಪಿ ಪಕ್ಷ ಮತ್ತು ರಾಷ್ಟ್ರ ಇಂದು ಬಡವಾಗಿದೆ. ನರೇಂದ್ರ ಮೋದಿಯವರ ಸರ್ಕಾರದ ಒಂದು ಆಧಾರ ಸ್ತಂಭವಾಗಿದ್ದರು.

| ಬಿ.ಎಸ್. ಯಡಿಯೂರಪ್ಪ ರಾಜ್ಯ ಬಿಜೆಪಿ ಅಧ್ಯಕ್ಷ