ಹರಿಯಾಣದಿಂದ ಲೋಕಸಭೆಗೆ ಸ್ಪರ್ಧಿಸುತ್ತಾರಾ ವೀರೇಂದ್ರ ಸೆಹ್ವಾಗ್​?

ಚಂಡೀಗಢ: ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್​ಮನ್​ ವೀರೇಂದ್ರ ಸೆಹ್ವಾಗ್​ ರಾಜಕೀಯ ಪ್ರವೇಶಿಸುತ್ತಾರೆ ಎಂದು ಹೇಳಲಾಗುತ್ತಿದ್ದು, ಅವರನ್ನು ಹರಿಯಾಣದಿಂದ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಸಲು ಬಿಜೆಪಿ ಚಿಂತಿಸುತ್ತಿದೆ ಎಂದು ವರದಿಯಾಗಿದೆ.

ಭಾನುವಾರ ಹರಿಯಾಣದ ಬಿಜೆಪಿಯ ಕೋರ್​ ಕಮಿಟಿಯ ಸಭೆಯಲ್ಲಿ ಭಾಗವಹಿಸಿದ್ದವರು ರೋಹ್ಟಕ್​ ಕ್ಷೇತ್ರದಿಂದ ಸೆಹ್ವಾಗ್​ ಅವರನ್ನು ಕಣಕ್ಕಿಳಿಸುವ ಕುರಿತು ಚರ್ಚೆ ನಡೆಯಿತು ಎಂದು ಮಾಹಿತಿ ನೀಡಿದ್ದಾರೆ. ರೋಹ್ಟಕ್​ನಿಂದ ಸತತ ಮೂರು ಬಾರಿ ಗೆಲುವು ಸಾಧಿಸಿರುವ ಕಾಂಗ್ರೆಸ್​ನ ದೀಪೇಂದರ್​ ಸಿಂಗ್​ ಹೂಡ ಅವರನ್ನು ಸೋಲಿಸಲು ಬಿಜೆಪಿ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಈ ಹಿನ್ನೆಲೆಯಲ್ಲಿ ಸೆಹ್ವಾಗ್​ ಅವರನ್ನು ಕಣಕ್ಕಿಳಿಸುವ ಕುರಿತು ಚಿಂತನೆ ನಡೆಸಲಾಗಿದೆ.

ಆದರೆ, ಹರಿಯಾಣದ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್​ ಬಾರ್ಲಾ ಅವರು ಈ ಸುದ್ದಿಯನ್ನು ಅಲ್ಲಗೆಳೆದಿದ್ದು, ಸೆಹ್ವಾಗ್​ ಇನ್ನೂ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ವೀರೇಂದ್ರ ಸೆಹ್ವಾಗ್​ ಅವರಿಗೆ ಟಿಕೆಟ್​ ನೀಡುವ ಕುರಿತು ಈಗಾಗಲೇ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದರೆ, ಅವರು ಇನ್ನೂ ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಸೆಹ್ವಾಗ್​ ಅವರ ಮನವೊಲಿಸಲು ನಿಯೋಜಿಸಲಾಗಿರುವ ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

2014ರಲ್ಲಿ ಬಿಜೆಪಿ ಹರಿಯಾಣದ 10 ಕ್ಷೇತ್ರಗಳ ಪೈಕಿ 7 ರಲ್ಲಿ ಜಯ ಸಾಧಿಸಿತ್ತು. 2 ಕ್ಷೇತ್ರಗಳಲ್ಲಿ ಇಂಡಿಯನ್​ ನ್ಯಾಷನಲ್​ ಲೋಕ ದಳ ಪಕ್ಷ ಮತ್ತು ರೋಹ್ಟಕ್​ ಕ್ಷೇತ್ರದಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸಿತ್ತು. (ಏಜೆನ್ಸೀಸ್​)