ನವದೆಹಲಿ: ಟೀಮ್ ಇಂಡಿಯಾದ ಮಾಜಿ ಆಟಗಾರ ಹಾಗೂ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರ ಪುತ್ರ ಲಿಂಗ ಬದಲಾವಣೆ ಮಾಡಿಕೊಂಡು ಹೆಣ್ಣಾಗಿ ಬದಲಾಗಿದ್ದಾರೆ. ಆರ್ಯನ್ ಬಂಗಾರ್ ಈಗ ಅನಾಯಾ ಬಂಗಾರ್ ಆಗಿದ್ದಾರೆ. ಆದರೂ ಐಸಿಸಿ ನಿಯಮಾವಳಿಯ ಪ್ರಕಾರ ಅವರು ಮಹಿಳಾ ಕ್ರಿಕೆಟ್ನಲ್ಲಿ ಭಾಗವಹಿಸುವಂತಿಲ್ಲ. ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಅನಾಯಾ ಬಂಗಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಹಾಮೋರ್ನು ಬದಲಾವಣೆ ಚಿಕಿತ್ಸೆಗೆ ಒಳಗಾಗಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿರುವ 23 ವರ್ಷದ ಅನಾಯಾ, ತಂದೆಯಂತೆ ವೃತ್ತಿಪರ ಕ್ರಿಕೆಟ್ನಲ್ಲಿ ಆಡುವ ತನ್ನ ಕನಸು ನನಸಾಗದ ಬಗ್ಗೆ ಬೇಸರ ಹಂಚಿಕೊಂಡಿದ್ದಾರೆ. ಅನಾಯಾ ಸದ್ಯ ಇಂಗ್ಲೆಂಡ್ನ ಮ್ಯಾಂಚೆಸ್ಟರ್ನಲ್ಲಿ ನೆಲೆಸಿದ್ದಾರೆ. ಈ ಮುನ್ನ ಗಂಡಾಗಿದ್ದಾಗ ಮುಂಬೈನ ಸ್ಥಳಿಯ ಕ್ರಿಕೆಟ್ ಕ್ಲಬ್ “ಇಸ್ಲಾಂ ಜಿಮ್ಖಾನ’ ಪರ ಆಡುತ್ತಿದ್ದರು. ವಿಜಯ್ ಮರ್ಚೆಂಟ್ ಟ್ರೋಫಿ 16 ವಯೋಮಿತಿ ಟೂರ್ನಿಯಲ್ಲಿ ಮುಂಬೈ ಪರ ಆಲ್ರೌಂಡರ್ ಆಗಿ ಆಡಿದ್ದರು. ಮಹಾರಾಷ್ಟ್ರದ ಸಂಜಯ್ ಬಂಗಾರ್ ಭಾರತ ಪರ 12 ಟೆಸ್ಟ್ ಮತ್ತು 15 ಏಕದಿನ ಪಂದ್ಯ ಆಡಿದ್ದಾರೆ.
“ಬಾಲ್ಯದಿಂದಲೂ ಕ್ರಿಕೆಟ್ ನನ್ನ ಜೀವನದ ಭಾಗವಾಗಿತ್ತು. ನನ್ನ ತಂದೆ ದೇಶದ ಪರ ಆಡಿದ್ದಾರೆ ಮತ್ತು ತರಬೇತಿಯನ್ನೂ ನೀಡಿದ್ದಾರೆ. ನಾನು ಕೂಡ ಅವರ ಹೆಜ್ಜೆಯಲ್ಲೇ ಸಾಗುವ ಕನಸು ಕಾಣುತ್ತಿದ್ದೆ. ಕ್ರಿಕೆಟ್ ನನ್ನ ಪ್ರೀತಿ, ಧ್ಯೇಯ ಮತ್ತು ಭವಿಷ್ಯ ಆಗಿತ್ತು. ಕ್ರಿಕೆಟ್ ತ್ಯಜಿಸುವ ಬಗ್ಗೆ ಎಂದೂ ಯೋಚಿಸಿರಲಿಲ್ಲ. ಆದರೆ ಈಗ ನೋವಿನ ವಾಸ್ತವದ ಅರಿವಾಗಿದೆ. ಲಿಂಗ ಬದಲಾವಣೆಯ ಬಳಿಕ ನಾನು ಸಂಪೂರ್ಣ ಹೆಣ್ಣಾಗಿ ಬದಲಾಗಿದ್ದರೂ, ಮಹಿಳಾ ಕ್ರಿಕೆಟ್ನಲ್ಲಿ ಆಡಲು ಅವಕಾಶ ಇಲ್ಲದಂತಾಗಿದೆ’ ಎಂದು ಅನಾಯಾ ಬಂಗಾರ್ ಬರೆದುಕೊಂಡಿದ್ದಾರೆ.
ಐಸಿಸಿ ಇತ್ತೀಚೆಗೆ ತಂದಿರುವ ನಿಯಮಾವಳಿ ಪ್ರಕಾರ, ಪುರುಷನಾಗಿ ಪ್ರೌಢಾವಸ್ಥೆಗೆ ಬಂದ ನಂತರ ಲಿಂಗ ಬದಲಾವಣೆ ಮಾಡಿಕೊಂಡರೆ ಮಹಿಳಾ ಕ್ರಿಕೆಟ್ನಲ್ಲಿ ಆಡುವಂತಿಲ್ಲ. ಆದರೆ ಅಪ್ರಾಪ್ತರು ಲಿಂಗ ಬದಲಾವಣೆ ಮಾಡಿಕೊಳ್ಳುವುದು ಕೂಡ ಕಾನೂನುಬಾಹಿರವಾಗಿದೆ. ಹೀಗಾಗಿ ಈ ವಿಚಿತ್ರ ವ್ಯವಸ್ಥೆಯಿಂದಾಗಿ ತಾನು ಕ್ರಿಕೆಟ್ ಆಡುವ ಕನಸನ್ನು ಕೈಚೆಲ್ಲಬೇಕಾಗಿದೆ ಎಂದು ಅನಾಯಾ ಅಳಲು ತೋಡಿಕೊಂಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯ 100 ದಿನಗಳ ಕೌಂಟ್ಡೌನ್ ಕಾರ್ಯಕ್ರಮ ರದ್ದುಗೊಳಿಸಿದ ಐಸಿಸಿ; ಹೀಗಿದೆ ಕಾರಣ…