ಪ್ರಜಾತಂತ್ರ ವಿರೋಧಿ ಪಕ್ಷಕ್ಕೆ ಮತ ನೀಡದಿರಿ

ಕೊಳ್ಳೇಗಾಲ: ಪ್ರಜಾತಂತ್ರ ವಿರೋಧಿ ಪಕ್ಷವಾದ ಬಿಜೆಪಿಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದಲಿತರಾದಿಯಾಗಿ ಹಿಂದುಳಿದ ವರ್ಗ ಹಾಗೂ ಅಲ್ಪ ಸಂಖ್ಯಾತರು ಮತ ನೀಡಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

ಪಟ್ಟಣದ ನ್ಯಾಷನಲ್ ಶಾಲಾ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಬಹಿರಂಗ ಚುನಾವಣಾ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದ 27 ಲೋಕಸಭಾ ಕ್ಷೇತ್ರಗಳ ಪೈಕಿ ಯಾವ ಕ್ಷೇತ್ರದಲ್ಲಿಯೂ ಹಿಂದುಳಿದವರು ಹಾಗೂ ಅಲ್ಪ ಸಂಖ್ಯಾತರು ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡಿಲ್ಲ. ಪರಿಸ್ಥಿತಿ ಹೀಗಿದ್ದರೂ ಬಿಜೆಪಿಯಲ್ಲಿರುವ ಹಿಂದುಳಿದ ವರ್ಗಗಳ ನಾಯಕ ಕೆ.ಎಸ್.ಈಶ್ವರಪ್ಪ ಅವರು ಪಕ್ಷದವರನ್ನು ಪ್ರಶ್ನಿಸುತ್ತಿಲ್ಲ. ತನ್ನ ಕುರುಬ ಜಾತಿಯವರಿಗೆ 1 ಟಿಕೆಟ್ ಕೊಡಿಸದಿರುವುದು ನಾಚಿಕೆಗೇಡಿನ ಸಂಗತಿ. ಬಿಜೆಪಿಯೊಂದು ಸಂವಿಧಾನ ವಿರೋಧಿ ಪಕ್ಷ. ಹಾಗಾಗಿ ಯಾರೂ ಕನಸ್ಸಿನಲ್ಲಿಯೂ ಬಿಜೆಪಿ ಹೆಸರನ್ನು ಹೇಳಬೇಡಿ ಎಂದರು.

ಕಾಂಗ್ರೆಸ್ ಪಕ್ಷ ಸ್ವತಂತ್ರ ಪೂರ್ವ, ನಂತರದಲ್ಲಿಯೂ ಎಲ್ಲರನ್ನೂ ಒಗ್ಗೂಡಿಸಿಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸಮಬಾಳು ಸಮಪಾಲು ನ್ಯಾಯದಡಿ ಎಲ್ಲ ಕೋಮಿನವರಿಗೆ ರಾಜಕೀಯ ಸ್ಥಾನ, ಮಾನ ಮತ್ತು ಆದ್ಯತೆ ನೀಡಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 8 ಜನ ಹಿಂದುಳಿದವರು ಹಾಗೂ ಇಬ್ಬರು ಅಲ್ಪ ಸಂಖ್ಯಾತರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ ಎಂದರು.

ಅಂಬೇಡ್ಕರ್ ಅವರು ದೇಶದ ಎಲ್ಲ ವರ್ಗದ ಜನರು ಒಗ್ಗೂಡಿ ಬದುಕು ನಡೆಸಲು ಸಂವಿಧಾನ ಬರೆದುಕೊಟ್ಟಿದ್ದಾರೆ. ಅದರ ಸಂರಕ್ಷಣೆ ಬಿಜೆಪಿಯಿಂದ ಆಗದು. ಬದಲಾಗಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿ ಮುಂದಿನ ದಿನದಲ್ಲಿ ಚುನಾವಣೆಗಳೇ ನಡೆಯದಂತೆ ಬಿಜೆಪಿ ಸಂವಿಧಾನ ಬದಲಿಸಲು ಕುತಂತ್ರ ಮಾಡುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದರು.

ದೇಶದಲ್ಲಿ ನಡೆಯುವ ಪ್ರಸ್ತುತ ಲೋಕಸಭಾ ಚುನಾವಣೆ ಸಂವಿಧಾನ ಉಳಿವಿಗೆ ನಡೆಯುತ್ತಿರುವ ಚುನಾವಣೆಯಾಗಿದೆ. ಚಾ.ನಗರ ಕ್ಷೇತ್ರದಲ್ಲಿ ನಡೆಯುವ ಚುನಾವಣೆ ಕೂಡ ಕೇವಲ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಂಸದ ಆರ್.ಧ್ರುವನಾರಾಯಣ ಅವರ ನಡುವಿನ ಚುನಾವಣೆಯಲ್ಲ ಎಂಬುದು ಎಲ್ಲರ ಗಮನದಲ್ಲಿರಲಿ ಎಂದರು.

ಮಾಜಿ ಸಂಸದ ಶಿವಣ್ಣ, ಶಾಸಕ ಆರ್.ನರೇಂದ್ರ, ಮಾಜಿ ಶಾಸಕರಾದ ಎಸ್.ಜಯಣ್ಣ, ಎಸ್.ಬಾಲರಾಜು, ಎ.ಆರ್.ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮಕೃಷ್ಣ, ಜಿ.ಪಂ.ಉಪಾಧ್ಯಕ್ಷ ಯೋಗೀಶ್, ತಾ.ಪಂ.ಅಧ್ಯಕ್ಷ ರಾಜೇಂದ್ರ, ಜೆಡಿಎಸ್ ಹಿರಿಯ ಮುಖಂಡರಾದ ಮುಳ್ಳೂರು ಶಿವಮಲ್ಲು, ಚಾಮರಾಜು ಇದ್ದರು.