ಹೆಲಿಕಾಪ್ಟರ್​ನಲ್ಲಿ ತಾಂತ್ರಿಕ ದೋಷ

ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್​ಬುಧವಾರ ಶಿವಮೊಗ್ಗದಿಂದ ಬಳ್ಳಾರಿಗೆ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಬೇರೆ ಹೆಲಿಕಾಪ್ಟರ್​ನಲ್ಲಿ ತೆರಳಿದರು. ತಾಂತ್ರಿಕ ದೋಷ ಕಾಣಿಸಿಕೊಂಡು ಹೊರಡುವುದು ತಡವಾಗಿದ್ದು ಮತ್ತೊಂದು ಬೆಳವಣಿಗೆಗೆ ಕಾರಣವಾಯಿತು.

ಶಿವಮೊಗ್ಗದಲ್ಲೇ ವಾಸ್ತವ್ಯ ಮಾಡಿದ್ದ ದೇವೇಗೌಡರು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಬಳ್ಳಾರಿಗೆ ತೆರಳುವವರಿದ್ದರು. ಬೇರೆ ಹೆಲಿಕಾಪ್ಟರ್ ವ್ಯವಸ್ಥೆಯಾಗುವ ವೇಳೆಗೆ ಗೌಡರ ಸುದ್ದಿಗೋಷ್ಠಿ ಮುಗಿದಿತ್ತು. ಹೀಗಾಗಿ ದೇವೇಗೌಡ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಒಂದೇ ಹೆಲಿಕಾಪ್ಟರ್​ನಲ್ಲಿ ಬಳ್ಳಾರಿಗೆ ತೆರಳಿದರು.

ನಡೆದದ್ದೇನು?: ಮಂಗಳವಾರ ಸಂಜೆ ಶಿವಮೊಗ್ಗದಲ್ಲಿ ಕಾಂಗ್ರೆಸ್ ಜೆಡಿಎಸ್ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಗರದಲ್ಲೇ ವಾಸ್ತವ್ಯ ಮಾಡಿದ್ದು, ಬುಧವಾರ ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಬಳ್ಳಾರಿಗೆ ತೆರಳಲು ಹೆಲಿಪ್ಯಾಡ್​ಗೆ ತೆರಳಿದ್ದರು. ಬೆಳಗ್ಗೆ 10.45ಕ್ಕೆ ಟೇಕಾಫ್ ಆಗುವ ವೇಳೆಗೆ ಸಿಂಗಲ್ ಇಂಜಿನ್ ಹೊಂದಿದ್ದ ಹೆಲಿಕಾಪ್ಟರ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು.

ತಕ್ಷಣ ಪೈಲಟ್ ಆದಿಲ್ ಸಿಂಘೀಲ್ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ಗೆೆ ಮಾಹಿತಿ ನೀಡಿದರು. ಇಂಜಿನಿಯರ್ ಅಭಿಷೇಕ್ ತಿವಾರಿ, ತಾಂತ್ರಿಕ ಪರಿಣತರಾದ ನವಿಲ್ ಮತ್ತು ದಿವಾಕರ್ ಪರಿಶೀಲಿಸಿದಾಗ ಇಂಜಿನ್​ನಲ್ಲಿ ತಾಂತ್ರಿಕ ದೋಷ ಇರುವುದು ಪತ್ತೆಯಾಯಿತು. ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಪರಿಶೀಲಿಸಿದ ಬಳಿಕ ಹೆಲಿಕಾಪ್ಟರ್ ಹಾರಾಟ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಹೆಲಿಕಾಪ್ಟರ್ ಹಾರಾಟ ಸಾಧ್ಯವಿಲ್ಲ ಎಂಬುದನ್ನು ಅರಿತು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಹೋಟೆಲ್​ಗೆ ವಾಪಸ್ಸಾದರು. ಬೆಳಗ್ಗೆ ಶಿವಮೊಗ್ಗದಿಂದ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಗಳೂರಿಗೆ ಕರೆದೊಯ್ದಿದ್ದ ಡಬಲ್ ಇಂಜಿನ್ ಹೊಂದಿದ್ದ ಹೆಲಿಕಾಪ್ಟರ್ ಮಧ್ಯಾಹ್ನ 12.45ಕ್ಕೆ ಶಿವಮೊಗ್ಗ ಹೆಲಿಪ್ಯಾಡ್​ಗೆ ಬಂದಿಳಿಯಿತು.

ಈ ಸಮಯಕ್ಕೆ ಸುದ್ದಿಗೋಷ್ಠಿ ನಡೆಸಿ ಬಳ್ಳಾರಿಗೆ ತೆರಳಲು ಸಿದ್ಧರಾಗಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕೂಡ ಹೆಲಿಪ್ಯಾಡ್​ಗೆ ಬಂದಿದ್ದರು. ಮೂವರು ನಾಯಕರು ಈ ಹೆಲಿಕಾಪ್ಟರ್​ನಲ್ಲಿ ಬಳ್ಳಾರಿಗೆ ತೆರಳಿದರು.