ಐಟಿ, ಇಡಿ, ಸಿಬಿಐ, ಆರ್​ಬಿಐ ದುರ್ಬಳಕೆ ಮಾಡಿಕೊಂಡ ಕೇಂದ್ರ ಸರ್ಕಾರ

ಚಿಕ್ಕಮಗಳೂರು: ಕೇಂದ್ರದಲ್ಲಿ ಮೋದಿ ಪ್ರಧಾನಿಯಾದ ಬಳಿಕ ಸಂವಿಧಾನಾತ್ಮಕ ಸಂಸ್ಥೆಗಳಾದ ಚುನಾವಣಾ ಆಯೋಗ, ಆದಾಯ ತೆರಿಗೆ ಇಲಾಖೆ, ಇಡಿ, ಸಿಬಿಐ, ಆರ್​ಬಿಐಗಳನ್ನು ತಮ್ಮ ಕೈಗೊಂಬೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಗರದ ವಿಜಯಪುರದಲ್ಲಿ ಸೋಮವಾರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನಾತ್ಮಕ ಸಂಸ್ಥೆಗಳು ಪ್ರಧಾನಿ ಹೇಳಿದಂತೆಯೇ ಕೇಳುತ್ತಿವೆ. ಚುನಾವಣಾ ಸಂದರ್ಭ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ. ಕಾನೂನಿಗೆ ನಾವು ಗೌರವ ಕೊಡುತ್ತೇವೆ. ಆದರೆ ಚುನಾವಣೆ ಸಂದರ್ಭದಲ್ಲಿ ಕೆಲವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದನ್ನು ಖಂಡಿಸುತ್ತೇವೆ ಎಂದರು.

ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದು ಮೋದಿ ಪ್ರಧಾನಿಯಾದ ಬಳಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳುಗೆಡವಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಕುರ್ಚಿಗೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.

ಹರಿಶ್ಚಂದ್ರನ ಮೊಮ್ಮಕ್ಕಳೇ?: ಸಮ್ಮಿಶ್ರ ಸರ್ಕಾರವನ್ನು ಕೆಡವಲು ಯತ್ನಿಸಿದ್ದ ಬಿಜೆಪಿ ನಮ್ಮ ಶಾಸಕರಿಗೆ 25-30 ಕೋಟಿ ರೂ. ಆಮಿಷವೊಡ್ಡಿತ್ತು. ಹಾಗಿದ್ದರೆ ಅದು ಕಪ್ಪುಹಣವಲ್ಲವೇ? ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ನಾವು ಆದಾಯ ತೆರಿಗೆ ಇಲಾಖೆಗೆ ದೂರು ಸಲ್ಲಿಸಿದರೂ ಈವರೆಗೂ ಅವರ ಮನೆಗಳ ಮೇಲೆ ದಾಳಿ ನಡೆದಿಲ್ಲ. ಹಾಗಿದ್ದರೆ ಇವರೆಲ್ಲ ಹರಿಶ್ಚಂದ್ರನ ಮೊಮ್ಮಕ್ಕಳೇ? ಎಂದು ಪ್ರಶ್ನಿಸಿದರು.

ನಕಲಿ ಚೌಕಿದಾರ್: ಪ್ರಧಾನಿ ಮೋದಿ ತಮ್ಮನ್ನು ಚೌಕಿದಾರ್ ಎಂದು ಕರೆದುಕೊಳ್ಳುತ್ತಾರೆ. ಇವರು ನಕಲಿ ಚೌಕಿದಾರ್. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ, ಜನಾರ್ದನ ರೆಡ್ಡಿ, ಕೃಷ್ಣಯ್ಯ ಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿ ಎಲ್ಲರೂ ಚೌಕಿದಾರ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಇವರಿಗೆಲ್ಲ ಮಾನ, ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದರು. ಮೋದಿಯಂತಹ ಮಹಾನ್ ಸುಳ್ಳುಗಾರನನ್ನು ನನ್ನ ಜೀವನದಲ್ಲಿ ಎಂದಿಗೂ ನೋಡಿಲ್ಲ. ಇಂಥಹವರನ್ನು ಪುನಃ ಪ್ರಧಾನಿ ಮಾಡಬೇಕೆ? ಇವರು ಮತ್ತೆ ಪ್ರಧಾನಿಯಾದರೆ ದೇಶ ಉಳಿಯುತ್ತದೆಯೆ. ಈ ಬಗ್ಗೆ ಎಲ್ಲರೂ ಯೋಚಿಸಬೇಕಿದೆ ಎಂದು ಹೇಳಿದರು.