ಮಧ್ಯಪ್ರದೇಶದ ಸಾಮಾನ್ಯ ವ್ಯಕ್ತಿಯೆಂದು ಬಯೋಡೇಟಾ ಬದಲಾಯಿಸಿಕೊಂಡ ಶಿವರಾಜ್​ಸಿಂಗ್​ ಚೌಹಾಣ್​

ಭೋಪಾಲ್​: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸಲಾರದೆ ಅಧಿಕಾರ ಕಳೆದುಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಶಿವರಾಜ್​ಸಿಂಗ್​ ಚೌಹಾಣ್​ ಅವರು ತಮ್ಮ ಟ್ವಿಟರ್​ನಲ್ಲಿನ ಬಯೋಡೇಟಾವನ್ನು ಬದಲಾಯಿಸಿಕೊಂಡು ಇದೀಗ ಗಮನ ಸೆಳೆದಿದ್ದಾರೆ.

ಚುನಾವಣಾ ಫಲಿತಾಂಶದ ಮೂರು ದಿನದ ಬಳಿಕ ಚೌಹಾಣ್​ ಅವರು ತಮ್ಮ ಟ್ವಿಟರ್​ ಬಯೋಡೇಟಾವನ್ನು ಬದಲಾಯಿಸಿಕೊಂಡಿದ್ದಾರೆ. ಮಧ್ಯಪ್ರದೇಶದ ”ಮುಖ್ಯಮಂತ್ರಿ” ಎಂದಿದ್ದನ್ನು​ ಮಧ್ಯಪ್ರದೇಶದ ”ಸಾಮಾನ್ಯ ವ್ಯಕ್ತಿ” ಎಂದು ಬದಲಾಯಿಸಿಕೊಂಡಿದ್ದಾರೆ.

ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್​ನ ಕಮಲ್​ನಾಥ್​ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕೂ ಎರಡು ದಿನಗಳ ಮುಂಚಿತವಾಗಿಯೇ ಚೌಹಾಣ್​ ಅವರು ತಮ್ಮ ಬಯೋಡೇಟಾ ಬದಲಾಯಿಸಿದ್ದಾರೆ.

ಚುನಾವಣಾ ಫಲಿತಾಂಶದ ನಂತರ ಚೌಹಾಣ್​ ಅವರು ರಾಷ್ಟ್ರ ರಾಜಕಾರಣಕ್ಕೆ ಮರಳುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೌಹಾಣ್​ ಅವರು, ನಾನು ಮಧ್ಯಪ್ರದೇಶದಲ್ಲೇ ಹುಟ್ಟಿದ್ದೇನೆ. ಮಧ್ಯಪ್ರದೇಶಕೋಸ್ಕರವೇ ಬದುಕಿ, ಸಾಯುತ್ತೇನೆ. ನನ್ನ ರಾಜ್ಯದ ಜನರೇ ನನ್ನ ದೇವರು ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.

230 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ 114 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರಳ ಬಹುಮತಕ್ಕೆ 116 ಸ್ಥಾನಗಳು ಬೇಕಾಗಿದ್ದರೂ ಮಾಯಾವತಿ ನೇತೃತ್ವದ ಬಿಎಸ್​ಪಿ, ಸಮಾಜವಾದಿ ಪಕ್ಷದ ಅಖಿಲೇಶ್​ ಯಾದವ್ ಹಾಗೂ ನಾಲ್ಕು ಮಂದಿ ಸ್ವತಂತ್ರ ಅಭ್ಯರ್ಥಿಗಳ ಬೆಂಬಲದಿಂದ ಕಾಂಗ್ರೆಸ್​ ಸರ್ಕಾರ ರಚನೆ ಮಾಡುತ್ತಿದೆ. 109 ಸ್ಥಾನಗಳನ್ನು ಪಡೆದಿರುವ ಬಿಜೆಪಿ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. (ಏಜೆನ್ಸೀಸ್​)