ಸ್ನೇಹಿತನ ಇ-ಮೇಲ್​ ಹ್ಯಾಕ್​: ಸುಪ್ರೀಂಕೋರ್ಟ್​ನ ನಿವೃತ್ತ ಸಿಜೆಐ ಆರ್​.ಎಸ್​. ಲೋಧಾಗೆ 1 ಲಕ್ಷ ರೂ. ವಂಚನೆ

ನವದೆಹಲಿ: ಸುಪ್ರೀಂಕೋರ್ಟ್​ನ ಮಾಜಿ ಮುಖ್ಯ ನ್ಯಾಯಮೂರ್ತಿ ಆರ್​.ಎಸ್​. ಲೋಧಾ ಅವರಿಗೆ ಅವರ ಸ್ನೇಹಿತ ಇ-ಮೇಲ್​ ಮೂಲಕ ಹಣದ ಸಹಾಯ ಬೇಡುವ ಮೇಲ್​ ರವಾನಿಸಿದ ಆನ್​ಲೈನ್​ ವಂಚಕರು 1 ಲಕ್ಷ ರೂ. ಪಡೆದು ಮೋಸ ಮಾಡಿದ್ದಾರೆ.

ಮಾಜಿ ಮುಖ್ಯ ನ್ಯಾಯಮೂರ್ತಿ ಆರ್​.ಎಸ್​. ಲೋಧಾ ನ್ಯಾಯಮೂರ್ತಿ ಬಿ.ಪಿ. ಸಿಂಗ್​ ಅವರೊಂದಿಗೆ ಇ-ಮೇಲ್​ ಮೂಲಕ ನಿರಂತರ ಸಂಪರ್ಕದಲ್ಲಿದ್ದರು. ನ್ಯಾಯಮೂರ್ತಿ ಬಿ.ಪಿ. ಸಿಂಗ್​ ಅವರ ಇ-ಮೇಲ್​ ಹ್ಯಾಕ್​ ಮಾಡಿರುವ ದುಷ್ಕರ್ಮಿಗಳು ಮಾಜಿ ಮುಖ್ಯ ನ್ಯಾಯಮೂರ್ತಿ ಆರ್​.ಎಸ್​. ಲೋಧಾ ಅವರಿಗೆ, ತಮ್ಮ ಸಂಬಂಧಿಯೊಬ್ಬರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು, ತಕ್ಷಣವೇ ಹಣದ ಅವಶ್ಯಕತೆ ಬಂದಿದೆ. ಇವರಿಗೆ ಚಿಕಿತ್ಸೆ ನೀಡಲು ವೈದ್ಯರು 95 ಸಾವಿರ ರೂ. ಕೇಳುತ್ತಿದ್ದಾರೆ. ಫೋನ್​ ಮಾಡಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ವೈದ್ಯರ ಬ್ಯಾಂಕ್​ ಖಾತೆಗೆ ನೇರವಾಗಿ ಹಣ ವರ್ಗಾಯಿಸುವಂತೆ ಹೇಳಿ, ಬ್ಯಾಂಕ್​ ಖಾತೆಯ ಸಂಖ್ಯೆಯನ್ನೂ ನಮೂದಿಸಿ ಇ-ಮೇಲ್​ ರವಾನಿಸಿದ್ದಾರೆ.

ಮೇ 29ರ ತಡರಾತ್ರಿ 3.30ಕ್ಕೆ ಈ ಮೇಲ್​ ಅನ್ನು ಗಮನಿಸಿದ ಮಾಜಿ ಮುಖ್ಯ ನ್ಯಾಯಮೂರ್ತಿ ಆರ್​.ಎಸ್​. ಲೋಧಾ, ಇ-ಮೇಲ್​ನಲ್ಲಿ ನಮೂದಿಸಿದ್ದ ಬ್ಯಾಂಕ್​ ಖಾತೆಗೆ ತಮ್ಮ ಬ್ಯಾಂಕ್​ ಖಾತೆಯಿಂದ 50 ಸಾವಿರ ರೂ.ಗಳಂತೆ ಎರಡು ಬಾರಿ ಒಟ್ಟು 1 ಲಕ್ಷ ರೂ.ಗಳನ್ನು ತಡರಾತ್ರಿ 3.35ರಲ್ಲಿ ವರ್ಗಾಯಿಸಿದ್ದಾರೆ.

ಆದರೆ ಮೇ 30ರಂದು ಮಾಜಿ ಮುಖ್ಯ ನ್ಯಾಯಮೂರ್ತಿ ಆರ್​.ಎಸ್​. ಲೋಧಾ ಅವರಿಗೆ ಬೇರೊಂದು ಇ-ಮೇಲ್​ ಖಾತೆಯಿಂದ ಮೇಲ್​ ರವಾನಿಸಿದ ನ್ಯಾಯಮೂರ್ತಿ ಬಿ.ಪಿ. ಸಿಂಗ್​ ತಮ್ಮ ಇ-ಮೇಲ್​ಗೆ ಲಾಗಿನ್​ ಆಗಲು ಸಾಧ್ಯವಾಗುತ್ತಿಲ್ಲ. ಯಾರೋ ಹ್ಯಾಕ್​ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಆಗ ತಾವು ವಂಚನೆಗೆ ಒಳಗಾಗಿರುವುದಾಗಿ ಅರಿತುಕೊಂಡ ಮಾಜಿ ಮುಖ್ಯ ನ್ಯಾಯಮೂರ್ತಿ ಆರ್.ಎಸ್​. ಲೋಧಾ ದಕ್ಷಿಣ ದೆಹಲಿಯ ಮಾಲ್ವಿಯಾನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *