ನೋಟು ಅಮಾನ್ಯೀಕರಣದ ವಿರುದ್ಧ ಸಿದ್ದು ಟ್ಟೀಟ್‌ ಬಾಣ

ಬೆಂಗಳೂರು: ನೋಟು ಅಮಾನ್ಯೀಕರಣಕ್ಕೆ ಎರಡು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ವಾಗ್ವಾದಗಳು ನಡೆಯುತ್ತಿದ್ದು, ನೋಟು ಅಮಾನ್ಯೀಕರಣ ದಿನವನ್ನು ಕರಾಳ ದಿನ ಎಂದು ಬಣ್ಣಿಸಿ ಕಾಂಗ್ರೆಸ್ ಶುಕ್ರವಾರ ದೇಶಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದೆ.

ಈ ಮಧ್ಯೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಟ್ವೀಟ್‌ ಮೂಲಕ ಕಿಡಿಕಾರಿದ್ದಾರೆ. ನೋಟ್ ಬ್ಯಾನ್​ನಿಂದ ನೂರಾರು ಜನ ಮೃತಪಟ್ಟಿದ್ದಾರೆ. ದೇಶದಲ್ಲಿ ಸಹಸ್ರಾರು ಮಂದಿ ಸಂಕಷ್ಟಕ್ಕೊಳಗಾಗಿದ್ದಾರೆ. ವ್ಯಾಪಾರ ನಿಂತುಹೋಗಿದೆ. ಹಸಿವಿನಿಂದ ಕಂಗೆಟ್ಟಿದ್ದಾರೆ. ಹಲವರು ಉದ್ಯೋಗವನ್ನೇ ಕಳೆದುಕೊಳ್ಳುವಂತಾಯಿತು. ಇದು ನಿಮ್ಮ‌ ನೋಟ್ ಬ್ಯಾನ್ ಎಫೆಕ್ಟ್​ನಿಂದ ಆದ ಪರಿಣಾಮ ಎಂದಿದ್ದಾರೆ.

ನೋಟು ಅಮಾನ್ಯೀಕರಣದಿಂದಾಗಿ ಏನು ಪ್ರಯೋಜನವಾಗಿಲ್ಲ. ಬದಲಿಗೆ ರೈತರು ಬದುಕು ಛಿದ್ರವಾಗಿ ಕಣ್ಣೀರು ಸುರಿಸುವಂತಾಯಿತು. ನರೇಂದ್ರ ಮೋದಿಯವರ ಏಕವ್ಯಕ್ತೀಯ ಕ್ರಮದಿಂದಾಗಿ ಕಪ್ಪು ಹಣವನ್ನು ಪತ್ತೆ ಹಚ್ಚಲಾಗಿಲ್ಲ. ನಕಲಿ ನೋಟುಗಳು ಇನ್ನೂ ಕೂಡ ಚಲಾವಣೆಯಲ್ಲಿವೆ. ಭಯೋತ್ಪಾದನೆಯೂ ನಿಂತಿಲ್ಲ ಎಂದು ಟ್ವೀಟ್‌ ಮೂಲಕ ಕೇಂದ್ರದ ವಿರುದ್ಧ ಗುಡುಗಿದ್ದಾರೆ. (ದಿಗ್ವಿಜಯ ನ್ಯೂಸ್)