ಬಿಜೆಪಿ ಮುಳುಗುತ್ತಿರುವ ಹಡಗು, ಅಲ್ಲಿಗೆ ಯಾರಾದರೂ ಹೋಗುತ್ತಾರಾ: ಮಾಜಿ ಸಿಎಂ ಸಿದ್ದು

ಬಾಗಲಕೋಟೆ: ಲೋಕಸಭಾ ಚುನಾವಣೆ ಬಳಿಕ ಮತ್ತೆ ಸಂಪುಟ ವಿಸ್ತರಣೆಯಾಗಲಿದೆ. ಕೆಲವರಿಗೆ ಅಸಮಾಧಾನ ಆಗಿರುವುದು ಸಹಜ. ಎಲ್ಲರೂ ಮಂತ್ರಿ ಆಗಲು ಯೋಗ್ಯರೇ ಇದ್ದಾರೆ. ಆದರೆ ಎಲ್ಲರನ್ನೂ ಮಂತ್ರಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಜಮಖಂಡಿಯಲ್ಲಿ ಮಾತನಾಡಿದ ಅವರು, ರಮೇಶ್‌ ಜಾರಕಿಹೊಳಿ ರಾಜೀನಾಮೆ ನೀಡುವುದಿಲ್ಲ. ನಾನು ನೋಡಿಲ್ಲ, ನನಗೆ ಗೊತ್ತಿರುವ ಹಾಗೆ ಆತ ಕಾಂಗ್ರೆಸ್ಸಿಗ. ಯಾರೂ ರಾಜೀನಾಮೆ ಕೊಡಲ್ಲ. ಯಾರಲ್ಲೂ ಅತೃಪ್ತಿ ಇಲ್ಲ ಎಂದರು.

ಅತೃಪ್ತ ಶಾಸಕರನ್ನು ಬಿಜೆಪಿ ಸೆಳೆಯುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಕೋಮುವಾದಿ ಪಕ್ಷ. ಬಿಜೆಪಿ ಮುಳುಗುತ್ತಿರುವ ಹಡಗು. ಹಾಗಾಗಿ ಮುಳುಗುತ್ತಿರುವ ಹಡಗಿನಲ್ಲಿ ಯಾರಾದರೂ ಹೋಗುತ್ತಾರಾ ಎಂದು ಪ್ರಶ್ನಿಸಿದರು.

ಶಾಸಕ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಲು ನಾಲ್ವರ ಕೈವಾಡ ಇದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿ, ನಾಲ್ವರ ಕೈವಾಡವೂ ಇಲ್ಲ, 10 ಜನರ ಕೈವಾಡವೂ ಇಲ್ಲ. ಸದ್ಯ ಆರು ಜನರನ್ನು ಸಚಿವರನ್ನಾಗಿ ಮಾಡಿದ್ದೀವಿ. ಲೋಕಸಭಾ ಬಳಿಕ ಮತ್ತೆ ಸಂಪುಟ ವಿಸ್ತರಣೆ ಆಗುತ್ತದೆ ಎಂದರು. (ದಿಗ್ವಿಜಯ ನ್ಯೂಸ್)